Advertisement

ಪುರಸಭೆ ವಾಣಿಜ್ಯ ಮಳಿಗೆಗಳ ಟೆಂಡರ್‌ಗೆ ಆಗ್ರಹ

04:10 PM Mar 15, 2022 | Team Udayavani |

ಶಿಗ್ಗಾವಿ: ಪುರಸಭೆಯ 22 ವಾಣಿಜ್ಯ ಮಳಿಗೆಗಳಿದ್ದು, ಬಾಡಿಗೆ ಹರಾಜು ಪಡೆದವರನ್ನು ಬಿಟ್ಟು ಇನ್ಯಾರೋ ವ್ಯವಹಾರ ಮಾಡುತ್ತಾರೆ. ಕಳೆದ ಎಂಟು ವರ್ಷಗಳಿಂದಲೇ ಹರಾಜು ಪ್ರಕ್ರಿಯೆ ಮಾಡಲಾಗಿಲ್ಲ. ಇಲ್ಲಸಲ್ಲದ ನೆಪವೊಡ್ಡಿ ಅತೀ ಕಡಿಮೆ ಬಾಡಿಗೆಯಲ್ಲಿ ಇದ್ದವರನ್ನೇ ಮುಂದುವರಿಸಲಾಗುತ್ತಿದೆ. ಇದರಿಂದಾಗಿ ಪುರಸಭೆಗೆ ಸಾಕಷ್ಟು ಅರ್ಥಿಕ ನಷ್ಟವಾಗಿದ್ದು ಟೆಂಡರ್‌ ಕರೆದು ಕ್ರಮ ವಹಿಸುವಂತೆ ಮಾಜಿ ಅಧ್ಯಕ್ಷ ಶ್ರೀಕಾಂತ ಬುಳ್ಳಕ್ಕನವರ ಒತ್ತಾಯಿಸಿದರು.

Advertisement

ಸೋಮವಾರ ಪುರಸಭೆ ಅಧ್ಯಕ್ಷೆ ರೂಪಾ ಬನ್ನಿಕೊಪ್ಪ ಅಧ್ಯಕ್ಷತೆಯಲ್ಲಿ ನಡೆದ ಪ್ರಸಕ್ತ ಸಾಲಿನ ಆಯವ್ಯಯ ಮಂಡನೆ ಸಭೆಯಲ್ಲಿ ಅವರು ಆಕ್ಷೇಪಣೆ ವ್ಯಕ್ತಪಡಿಸಿದರು.

ಇದಕ್ಕೆ ಉತ್ತರಿಸಿದ ಅಧ್ಯಕ್ಷರು, ಕೊರೊನಾ ಸಾಂಕ್ರಾಮಿಕ ಸಮಸ್ಯೆ, ಲಾಕ್‌ಡೌನ್‌ ಕಾರಣಕ್ಕೆ ಜಿಲ್ಲಾಧಿಕಾರಿಗಳಲ್ಲಿ ಬಾಡಿಗೆದಾರರು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಎರಡು ಬಾರಿ ಅವಕಾಶ ನೀಡಲಾಗಿತ್ತು. ಹಳೆಯ ಬಾಡಿಗೆಯಲ್ಲೇ ಶೇ.10 ಹೆಚ್ಚಿಸಿ ವಸೂಲಾತಿ ಮಾಡಲಾಗುತ್ತಿದೆ ಎಂದರು.

ಸರ್ಕಾರಿ ಆಸ್ಪತ್ರೆ ಹಿಂದಿನ ರಸ್ತೆ ಅತಿಕ್ರಮಿಸಿ ಮನೆ ನಿರ್ಮಿಸಿದವರಿಗೆ ಮೂಲಸೌಲಭ್ಯ ನೀಡಬೇಡಿ ಎಂಬ ಆಕ್ಷೇಪದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಸದಸ್ಯ ಗೌಸ್‌ ಖಾನ ಮುನಸಿ ಮಾತನಾಡಿ, ಬೇರೆ ಕಡೆಗೆ ಬಡವರಿಗೆ ಮನೆ ನಿರ್ಮಿಸಲು ಜಾಗೆಯನ್ನಾದರೂ ಕೊಡುವ ವ್ಯವಸ್ಥೆಯಾಗಬೇಕು. ಅಲ್ಲಿಯವರೆಗೆ ತೆರವು ಬೇಡ ಎಂದು ಒತ್ತಾಯಿಸಿದರು.

ಕಾಂಗ್ರೆಸ್‌ ಸದಸ್ಯೆ ವಸಂತಾ ಬಾಗೂರು ಮಾತನಾಡಿ, ಪಟ್ಟಣದ ವ್ಯಾಪ್ತಿಯಲ್ಲಿ ಮಹಿಳೆಯರಿಗೆ ಸಾರ್ವಜನಿಕ ಶೌಚಾಲಯ ವ್ಯವಸ್ಥೆ ಕಲ್ಪಿಸಿಲ್ಲ. ಮಹಿಳೆಯರ ಬಗ್ಗೆ ನಿಮಗೆ ಕಳಕಳಿ ಇಲ್ಲವೇ ಎಂದು ಆಕ್ಷೇಪಿಸಿದರು.

Advertisement

ಸಭೆಯಲ್ಲಿ ಶಾಸಕರ ಹೆಸರು ಎಳೆದು ತಂದಿದ್ದಕ್ಕೆ ಕೆಲ ಹೊತ್ತು ಸಭೆಯಲ್ಲಿ ಕಾಂಗ್ರೆಸ್‌-ಬಿಜೆಪಿ ಸದಸ್ಯರ ಮಧ್ಯ ಪರ-ವಿರೋಧದ ಗದ್ದಲ ಏರ್ಪಟ್ಟಿತು. ವಿರೋಧ ಪಕ್ಷಗಳಿಗಿಂತ ಆಡಳಿತ ಪಕ್ಷದ ಮಾಜಿ ಅಧ್ಯಕ್ಷರ ಆಕ್ಷೇಪಣೆಗಳೇ ಹೆಚ್ಚು ಕೇಳಿಬಂದವು. ಜಮಾ ಖರ್ಚು ಅನುಮೋದನೆ, ಸಾಮಾನ್ಯ ಸಭೆಯ ಚರ್ಚೆ ಒಟ್ಟಿಗೆ ನಡೆಸಿದ್ದೀರಿ. ಇದರ ಅಗತ್ಯವೇನಿತ್ತು ಎಂದು ಮುಖ್ಯಾಧಿಕಾರಿಯನ್ನು ಶ್ರೀಕಾಂತ ಬುಳ್ಳಕ್ಕನವರ ಪ್ರಶ್ನಿಸಿದರು. ಇದು ಆಡಳಿತದ ಸರಿಯಾದ ಕ್ರಮವಲ್ಲ ಎಂದರು.

ಉಳಿತಾಯದ ಬಜೆಟ್‌: ಅಧ್ಯಕ್ಷೆ ರೂಪಾ ಬನ್ನಿಕೊಪ್ಪ ಹಿಂದಿನ ಠರಾವುಗಳಿಗೆ ಸಭೆಯ ಅನುಮೋದನೆ ಪಡೆದರು. ನಂತರ 2022-23ನೇ ಸಾಲಿನ 13.15 ಲಕ್ಷ ರೂ.ಗಳ ಉಳಿತಾಯದ ಬಜೆಟ್‌ ಮಂಡಿಸಿದರು. ವಿವಿಧ ಮೂಲಗಳಿಂದ 15.70 ಕೋಟಿ ಆದಾಯ ನಿರೀಕ್ಷಿಸಿದ್ದು, ನಾಗರಿಕ ಸೌಲಭ್ಯ-ಆಡಳಿತ ನಿರ್ವಹಣೆಗೆ 15.57 ಕೋಟಿ ರೂ. ವೆಚ್ಚವಾಗಲಿದೆ ಎಂದು ವಿವರಿಸಿದರು.

ಉಪಾಧ್ಯಕ್ಷೆ ಶೇಖವ್ವ ಶಿಗ್ಗಾವಿ, ಸ್ಥಾಯಿ ಸಮಿತಿ ಚೇರ್‌ಮನ್‌ ಜಾಫರಖಾನ ಪಠಾಣ, ವಿವಿಧ ವಾರ್ಡ್‌ ಸದಸ್ಯರು, ಮುಖ್ಯಾಧಿಕಾರಿ ವಿ.ವೈ. ಜಗದೀಶ ಮೊದಲಾದವರಿದ್ದರು.

ಘನತ್ಯಾಜ್ಯ ವಿಲೇವಾರಿ ವಾಹನಗಳ ದುರಸ್ತಿಗೆ ಪದೇ ಪದೇ ಹಣ ವಿನಿಯೋಗಿಸುವುದು ಬೇಡ. ಪ್ರಾದೇಶಿಕ ಸಾರಿಗೆ ಅಧಿಕಾರಿಗಳಲ್ಲಿ ಸ್ಥಿತಿಗತಿಯ ಪ್ರಮಾಣಪತ್ರ ಪಡೆದು ಹೊಸ ವಾಹನಕ್ಕೆ ಪ್ರಸ್ತಾವನೆ ಸಲ್ಲಿಸಿ. ಇದರಿಂದಾಗಿ ತ್ಯಾಜ್ಯ ವಿಲೇವಾರಿ ಸಮಸ್ಯೆಗಳು ತಪ್ಪಬಹುದು.

ಶ್ರೀಕಾಂತ ಬುಳ್ಳಕ್ಕನವರ, ಪುರಸಭೆ ಮಾಜಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next