Advertisement

ಪೆರಿಫ‌ರೆಲ್‌ ರಿಂಗ್‌ ರಸ್ತೆಗೆ ತಿಂಗಳಲ್ಲಿ ಟೆಂಡರ್‌

12:32 PM Oct 24, 2018 | Team Udayavani |

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ನಿವಾರಿಸಲು ಹನ್ನೆರಡು ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಪೆರಿಫ‌ರಲ್‌ ರಿಂಗ್‌ ರಸ್ತೆ ಯೋಜನೆಗೆ ಒಂದು ತಿಂಗಳಲ್ಲಿ ಟೆಂಡರ್‌ ಪ್ರಕ್ರಿಯೆ ಪ್ರಾರಂಭಗೊಳ್ಳಲಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

Advertisement

ಪತ್ರಿಕಾ ಸಂವಾದಲ್ಲಿ ಮಾತನಾಡಿದ ಅವರು, ಭವಿಷ್ಯದಲ್ಲಿ ಮೆಟ್ರೋ ಮಾರ್ಗಕ್ಕೂ ಅವಕಾಶ ಇರುವಂತೆ ಸರ್ವಿಸ್‌ ರಸ್ತೆ ಸಹಿತ ವಿನ್ಯಾಸ ಸಿದ್ಧಗೊಂಡಿದ್ದು ಯೋಜನೆ ತ್ವರಿತಗತಿಯಲ್ಲಿ ಪ್ರಾರಂಭಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಪೆರಿಫೆರಲ್‌ ರಿಂಗ್‌ ರಸ್ತೆಗೆ  ಈ ವರ್ಷ ಬಜೆಟ್‌ನಲ್ಲಿ 2 ಸಾವಿರ ಕೋಟಿ ರೂ. ಮೀಸಲಿಟ್ಟಿದ್ದು, ಮುಂದಿನ ವರ್ಷದ ಬಜೆಟ್‌ನಲ್ಲಿ 4500 ಕೋಟಿ ರೂ. ಮೀಸಲಿಡಲಾಗುವುದು ಎಂದು ಹೇಳಿದರು. ಇದರ ಜತೆಗೆ 102 ಕಿ.ಮೀ ಎಲಿವೇಟೆಡ್‌ ಕಾರಿಡಾರ್‌ ಯೋಜನೆಗೂ ಚಾಲನೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಹೆಚ್ಚಾಗಿ ಮನೆಗಳು ಒಡೆಯದಂತೆ ನೋಡಿಕೊಳ್ಳಲು ಸೂಚಿಸಿದ್ದೇನೆ. ಎಲಿವೇಟೆಡ್‌ ಕಾರಿಡಾರ್‌ ನಿರ್ಮಾಣವಾದರೆ  ಇಂಧನ ಹೊರೆ ಸೇರಿದಂತೆ ವಾರ್ಷಿಕ 9 ಸಾವಿರ ಕೋಟಿ ರೂ. ಸಾರ್ವಜನಿಕರಿಗೆ ಉಳಿತಾಯವಾಗುತ್ತದೆ. ಜತೆಗೆ ಮಾಲಿನ್ಯ ಪ್ರಮಾಣವೂ ತಗ್ಗುತ್ತದೆ ಎಂದು ತಿಳಿಸಿದರು.

ಸಮ್ಮಿಶ್ರ ಸರ್ಕಾರ ಬೆಂಗಳೂರು ನಗರಕ್ಕೆ ಏನು ಮಾಡಿದೆ ಎಂದು ಎಲ್ಲರೂ ಪ್ರಶ್ನಿಸುತ್ತಾರೆ. ಆದರೆ, ಬೆಂಗಳೂರು ನಗರದ ಅಭಿವೃದ್ಧಿಗೆ ನಮ್ಮ ಸರ್ಕಾರ ಕಟಿಬದ್ಧವಾಗಿ ಹಲವಾರು ಕಾರ್ಯಕ್ರಮ ರೂಪಿಸಿದೆ. ನಗರ ಉಸ್ತುವಾರಿ ಸಚಿವರೂ ಆಗಿರುವ  ಉಪ ಮುಖ್ಯಮಂತ್ರಿ ಪರಮೇಶ್ವರ್‌ ಅವರು ಸಹಕಾರ ನೀಡುತ್ತಿದ್ದಾರೆ ಎಂದು ಹೇಳಿದರು.

Advertisement

ಬಿಬಿಎಂಪಿ ವ್ಯಾಪ್ತಿಯಲ್ಲಿ ಕಸದ ಸಮಸ್ಯೆ ಸೇರಿದಂತೆ ಎಲ್ಲದರ ಬಗ್ಗೆಯೂ ನನಗೆ ಅರಿವಿದೆ. ಬೆಂಗಳೂರು ಜಗತ್ತಿನಲ್ಲಿ ಗುರುತಿಸಿಕೊಂಡಿರುವ ನಗರ. ಇಲ್ಲಿ ಅಗತ್ಯವಾದ ಮೂಲಸೌಕರ್ಯ, ಸಂಚಾರ ದಟ್ಟಣೆ ನಿವಾರಣೆ ನಮ್ಮ ಮೊದಲ ಆದ್ಯತೆಯಾಗಿದೆ ಎಂದು ತಿಳಿಸಿದರು.

ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರದಲ್ಲಿ ಹಣದ ಕೊರತೆ ಇಲ್ಲವೇ ಇಲ್ಲ. ಸಂಪನ್ಮೂಲ ಕ್ರೋಢೀಕರಣದ ಮೂಲಕ ಎಲ್ಲ ಯೋಜನೆಗಳಿಗೂ ಹಣ ಹೊಂದಿಸಲಿದ್ದೇನೆ. ಎಲ್ಲವನ್ನು ಲೆಕ್ಕಾಚಾರ ಮಾಡಿಯೇ ತೀರ್ಮಾನಿಸಿದ್ದೇನೆ ಎಂದರು.

ನಗರದ ಪ್ರತಿ ರಸ್ತೆಯಲ್ಲಿ ಸಿಸಿ ಟಿವಿ ಕ್ಯಾಮರ ಅಳವಡಿಕೆಗೆ ಕ್ರಮ ಕೈಗೊಂಡಿದ್ದೇನೆ. ಆಪರಾಧ ಪ್ರಕರಣಗಳ ನಿಯಂತ್ರಣಕ್ಕೆ ಕಡಿವಾಣ ಹಾಕಲಾಗುತ್ತಿದೆ. ಮಹಿಳೆಯರ ಭದ್ರತೆಗಾಗಿ ನಗರದ ಪ್ರತಿ ರಸ್ತೆಯಲ್ಲೂ ಸಿಸಿ ಟಿವಿ ಕ್ಯಾಮೆರಾ ಆಳವಡಿಸಲು 2 ಸಾವಿರ ಕೋಟಿ ರೂ. ಯೋಜನೆ ರೂಪಿಸಲಾಗಿದೆ. ಅದನ್ನು ಅಳವಡಿಸುವ ಜತೆಗೆ ನಿರ್ವಹಣೆಗೂ ಕ್ರಮ ಕೈಗೊಳ್ಳಲಾಗಿದೆ. 
-ಎಚ್‌.ಡಿ.ಕುಮಾರಸ್ವಾಮಿ, ಸಿಎಂ

ಕಾನೂನಿನ ಮುಂದೆ ಎಲ್ಲರೂ ಒಂದೇ: ರಾಜ್ಯದಲ್ಲಿ ಕಾನೂನಿನ ಮುಂದೆ ಎಲ್ಲರೂ ಒಂದೇ. ಅವರು ಭೂಗತ ಜಗತ್ತಿನವರು ಇರಲಿ, ಯಾರೇ  ಇರಲಿ. ಶಸ್ತ್ರಾಸ್ತ್ರ ಇಟ್ಟು ಪೂಜೆ ಮಾಡಿರುವ ದೃಶ್ಯಾವಳಿಗಳು ಪ್ರಸಾರ ಆಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರತಾ ಸಂಸ್ಥೆ ಸಿಬ್ಬಂದಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ. ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ. ಎಷ್ಟೇ ದೊಡ್ಡವರಾಗಿದ್ದರೂ ಸರಿ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಮುತ್ತಪ್ಪ ರೈ ಶಸ್ತ್ರಾಸ್ತ್ರಗಳಿಗೆ ಪೂಜೆ ಸಲ್ಲಿಸಿದ ಪ್ರಕರಣಕ್ಕೆ ಪ್ರತಿಕ್ರಿಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next