ಇತ್ತೀಚೆಗಷ್ಟೇ ಬಿಡುಗಡೆಯಾದ ಆರ್.ಚಂದ್ರು ನಿರ್ದೇಶನದ, ಉಪೇಂದ್ರ ಅಭಿನಯದ “ಐ ಲವ್ ಯು’ ಚಿತ್ರದ ಟ್ರೇಲರ್ಗೆ ಭರ್ಜರಿ ಮೆಚ್ಚುಗೆ ಸಿಕ್ಕ ಬೆನ್ನಲ್ಲೇ ಇದೀಗ ತೆಲುಗು ಟ್ರೇಲರ್ಗೂ ಸಿಕ್ಕಾಪಟ್ಟೆ ಮೆಚ್ಚುಗೆ ಸಿಕ್ಕಿದೆ. ಅಷ್ಟೇ ಅಲ್ಲ, ತೆಲುಗು ಚಿತ್ರರಂಗದ ಖ್ಯಾತ ಹಂಚಿಕೆದಾರರಾದ ದಿಲ್ರಾಜು ಅವರು ಚಿತ್ರದ ಟ್ರೇಲರ್ ಮತ್ತು ಹಾಡುಗಳನ್ನು ಮೆಚ್ಚಿಕೊಂಡು ಚಿತ್ರವನ್ನು ಬಿಡುಗಡೆ ಮಾಡಲು ಮುಂದಾಗಿದ್ದಾರೆ.
ಕನ್ನಡ ಹಾಗು ತೆಲುಗು ಭಾಷೆಯಲ್ಲಿ ತಯಾರಾಗಿರುವ ಈ ಚಿತ್ರ ಏಪ್ರಿಲ್ನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ. ಹೈದರಾಬಾದ್ನಲ್ಲಿ ನಡೆದ ಟ್ರೇಲರ್ ಬಿಡುಗಡೆಗೆ ಉಪೇಂದ್ರ ಅಭಿಮಾನಿಗಳ ಸಂಖ್ಯೆಯೇ ಹೆಚ್ಚಾಗಿತ್ತು. ಅಭಿಮಾನಿಗಳ ಸಮ್ಮುಖದಲ್ಲೇ “ಐ ಲವ್ಯು’ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಯಿತು. ಹಂಚಿಕೆದಾರ ದಿಲ್ರಾಜು ಮತ್ತು ನಿರ್ಮಾಪಕ ಕಮ್ ನಿರ್ದೇಶಕ ಚೌಧರಿ ಸೇರಿದಂತೆ ಹಲವರು “ಐಲವ್ಯು’ ಚಿತ್ರದ ಟ್ರೇಲರ್ ವೀಕ್ಷಿಸಿ, ಮೆಚ್ಚುಗೆ ಪಟ್ಟಿದ್ದಾರೆ ಎಂಬ ಖುಷಿ ಚಿತ್ರತಂಡದ್ದು.
ಅಂದಹಾಗೆ, ತೆಲುಗಿನಲ್ಲಿ ತಯಾರಾಗಿರುವ “ಐ ಲವ್ಯು’ ಚಿತ್ರದಲ್ಲಿ ಖ್ಯಾತ ಹಾಸ್ಯ ನಟ ಬ್ರಹ್ಮಾನಂದಂ ಸೇರಿದಂತೆ ಹಲವರು ನಟಿಸಿದ್ದಾರೆ. ನಿರ್ದೇಶಕ ಆರ್.ಚಂದ್ರು ಅವರದು ಇದು ಎರಡನೇ ತೆಲುಗು ಸಿನಿಮಾ. ಈ ಹಿಂದೆ “ಕೃಷ್ಣಮ್ಮ ಕಲಿಪಿಂದಿ ಇದ್ದರಿನಿ’ ಚಿತ್ರ ನಿರ್ದೇಶಿಸಿ, ಆ ಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದ ಚಂದ್ರುಗೆ ಆಗ, ಸಾಕಷ್ಟು ಮಂದಿ ತೆಲುಗು ಚಿತ್ರ ಮಾಡಲು ಮುಂಗಡ ಹಣ ಕೊಟ್ಟರೂ, ಅವರು ಕನ್ನಡ ಸಿನಿಮಾದತ್ತ ವಾಲಿದರು.
ಈಗ ಪುನಃ ಉಪೇಂದ್ರ ಅಭಿನಯದ “ಐಲವ್ಯು’ ಚಿತ್ರದ ಮೂಲಕ ತೆಲುಗಿಗೆ ಕಾಲಿಟ್ಟಿದ್ದಾರೆ. ತೆಲುಗು ಚಿತ್ರರಂಗಕ್ಕೆ ಉಪೇಂದ್ರ ಹೊಸಬರಲ್ಲ. ಹಾಗೆಯೇ ಚಂದ್ರು ಕೂಡ ಅಲ್ಲಿ ತಮ್ಮದ್ದೊಂದು ಛಾಪು ಮೂಡಿಸಿದ್ದಾಗಿದೆ. ಈಗ “ಐ ಲವ್ಯು’ ಮೂಲಕ ಅಲ್ಲಿನ ಉಪೇಂದ್ರ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದಾರೆ. ಸದ್ಯಕ್ಕೆ ತೆಲುಗಿನಲ್ಲಿ ಬಿಡುಗಡೆಯಾಗಿರುವ ಟ್ರೇಲರ್ಗೆ ಒಂದೇ ರಾತ್ರಿ ನಾಲ್ಕು ಲಕ್ಷಕ್ಕೂ ಹೆಚ್ಚು ವೀಕ್ಷಣೆಯಾಗಿದ್ದು, ಕನ್ನಡದಲ್ಲಿ ಈವರೆಗೆ 75 ಲಕ್ಷ ಮಂದಿ ವೀಕ್ಷಿಸಿದ್ದಾರೆ.
ಇದನ್ನು ಗಮನಿಸಿದ ತೆಲುಗು ಹಂಚಿಕೆದಾರ ದಿಲ್ರಾಜು ಅವರು “ಐ ಲವ್ಯು’ ಮೇಲೆ ಕಣ್ಣುಹಾಕಿ, ಚಿತ್ರದ ಬಿಡುಗಡೆಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಈ ಹಿಂದೆ ಕನ್ನಡದ ಹಲವು ಚಿತ್ರಗಳು ತೆಲುಗಿನಲ್ಲಿ ಯಶಸ್ಸು ಪಡೆದ ಹಿನ್ನೆಲೆಯಲ್ಲೇ ಅಲ್ಲಿನ ಹಂಚಿಕೆದಾರರು, ಈ ಚಿತ್ರದ ಮೇಲೂ ವಿಶ್ವಾಸ ಇಟ್ಟು, ಹಂಚಿಕೆಗೆ ಮುಂದಾಗಿದ್ದಾರೆ ಎಂಬುದು ನಿರ್ದೇಶಕರ ಮಾತು. ಅದೇನೆ ಇರಲಿ, ಈಗ ಚಿತ್ರ ಬಿಡಗುಡೆಗೆ ತಯಾರಾಗಿದ್ದು, ಏಪ್ರಿಲ್ನಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ.