ಹೈದರಾಬಾದ್ : ಮಕ್ಕಳು ಬೆನ್ನಿಗೇರಿಸಿಕೊಳ್ಳುವ ಶಾಲಾ ಚೀಲದ ಭಾರ ದಿನೇ ದಿನೇ ಹೆಚ್ಚುತ್ತಿರುವುದರಿಂದ ಮಕ್ಕಳಲ್ಲಿ ತೀವ್ರ ಆರೋಗ್ಯ ಸಮಸ್ಯೆ ತಲೆದೋರುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ತೆಲಂಗಾಣ ಸರಕಾರ ಶಾಲಾ ಮಕ್ಕಳ ಚೀಲ, ತರಗತಿಗೆ ಅನುಸಾರವಾಗಿ ಎಷ್ಟಿರಬೇಕು ಎಂಬುದನ್ನು ತೀರ್ಮಾನಿಸಿದೆ.
ಸರಕಾರ ಹೊರಡಿಸಿರುವ ಆದೇಶದ ಪ್ರಕಾರ 1 ಮತ್ತು 2ನೇ ತರಗತಿ ಮಕ್ಕಳ ಶಾಲಾ ಚೀಲ ಪಠ್ಯ ಪುಸ್ತಕ ಮತ್ತು ನೋಟ್ಸ್ ಪುಸ್ತಕ ಸೇರಿ ಒಂದೂವರೆ ಕಿಲೋ ಮೀರಬಾರದು. ಮೂರು ಮತ್ತು ನಾಲ್ಕನೇ ತರಗತಿ ಮಕ್ಕಳ ಶಾಲಾ ಚೀಲ 3ರಿಂದ 4 ಕಿಲೋ ಮೀರಬಾರದು.
ಆರು ಮತ್ತು ಏಳನೇ ತರಗತಿ ಮಕ್ಕಳ ಶಾಲಾ ಚೀಲ ನಾಲ್ಕು ಕಿಲೋ ಮೀರ ಕೂಡದು; ಎಂಟು ಮತ್ತು ಒಂಬತ್ತನೇ ತರಗತಿ ಮಕ್ಕಳ ಶಾಲಾ ಚೀಲ 4.50 ಕಿಲೋ ಮೀರಕೂಡದು. ಹತ್ತನೇ ತರಗತಿಯ ಮಕ್ಕಳ ಶಾಲಾ ಚೀಲ 5 ಕಿಲೋ ಮೀರಬಾರದು ಎಂದು ಆದೇಶ ಸ್ಪಷ್ಟಪಡಿಸಿದೆ.
ಒಂದು ಅಂದಾಜಿನ ಪ್ರಕಾರ ಕೆಲವು ಜಿಲ್ಲೆಗಳಲ್ಲಿನ ಪ್ರಾಥಮಿಕ ಮಟ್ಟದ ಶಾಲಾ ಮಕ್ಕಳ ಚೀಲದ ಭಾರ 6ರಿಂದ 12 ಕಿಲೋ ಇದೆ. ಹೈಸ್ಕೂಲು ಮಟ್ಟದ ವಿದ್ಯಾರ್ಥಿಗಳ ಶಾಲಾ ಚೀಲ 17 ಕಿಲೋ ಭಾರ ಇದೆ.
ಹಲವು ಶಾಲೆಗಳು ಬಹು ಮಹಡಿ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವುದರಿಂದ ಅಲ್ಲಿನ ವಿದ್ಯಾರ್ಥಿಗಳು ಕಿಲೋಗಟ್ಟಲೆ ತೂಕದ ತಮ್ಮ ಚೀಲಗಳನ್ನು ಹೊತ್ತು ಆರೋಗ್ಯ ಸಮಸ್ಯೆಯನ್ನು ತಂದುಕೊಡಿರುವುದು ಬೆಳಕಿಗೆ ಬಂದಿದೆ.
ಒಂದರಿಂದ ನಾಲ್ಕನೇ ತರಗತಿ ವರೆಗಿನ ಮಕ್ಕಳಿಗೆ ಯಾವುದೇ ಹೋಮ್ ವರ್ಕ್ ಕೂಡ ಕೊಡಬಾರದು ಎಂದು ಸರಕಾರಿ ಆದೇಶ ಹೇಳಿದೆ.