ತುಮಕೂರು: ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿಯವರಿಗೆ ಚಾಕುವಿನಿಂದ ಇರಿದ ಪ್ರಕರಣದ ಸಂಬಂಧ ಗುರುವಾರ ಆರೋಪಿ ತೇಜ್‌ರಾಜ್ ಶರ್ಮನನ್ನು ಬೆಂಗಳೂರಿನಿಂದ ತುಮಕೂರಿಗೆ ಕರೆತಂದು ಅವನು ವಾಸವಿದ್ದ ಬಿದಿರು ಮಳೆ ತೋಟದ ಮನೆ ಮತ್ತು ಎಸ್.ಎಸ್.ಪುರಂನಲ್ಲಿ ಇದ್ದ ಮನೆಯನ್ನು ಪರಿಶೀಲಿಸಿ ಆತನಿಂದ ಮಾಹಿತಿ ಪಡೆದರು.
ಮಧ್ಯಾಹ್ನ 1 ಗಂಟೆಗೆ ಬೆಂಗಳೂರು ವಿಧಾನ ಸೌಧ ಠಾಣೆಯ ಸಿಪಿಐ ಶಂಕರಾಚಾರ್ ಮತ್ತು ತುಮಕೂರು ತಿಲಕ್ ಪಾರ್ಕ್ ಸಿಪಿಐ ರಾಧಕೃಷ್ಣ ನೇತೃತ್ವದಲ್ಲಿ ಒಂಬತ್ತು ಜನರ ತಂಡ ಆರೋಪಿ ತೇಜರಾಜ್ ಶರ್ಮನೊಂದಿಗೆ ಆಗಮಿಸಿದ ಪೊಲೀಸರು ಮೊದಲು ಆತ ಬಿದಿರು ಮಳೆ ತೋಟದ ಬಡಾವಣೆಯಲ್ಲಿ ವಾಸವಿದ್ದ ಮನೆಯನ್ನು ತಪಾಸಣೆ ಮಾಡಿದರು.
ಅರ್ಜಿ, ದೇವರ ಫೋಟೋ ಪತ್ತೆ: ಸುಮಾರು 20 ನಿಮಿಷಗಳ ಕಾಲ ತಪಾಸಣೆ ನಡೆಸಿದ ಪೊಲೀಸರಿಗೆ ಆತನ ಮನೆಯಲ್ಲಿ ವಿವಿಧ ಇಲಾಖೆಗಳಿಗೆ ಅರ್ಜಿ ಹಾಕಿದ ಪತ್ರಗಳು ಮತ್ತು ದೇವರ ಪುಸ್ತಕಗಳು, ಮಾಟ ಮಂತ್ರದ ಪುಸ್ತಕಗಳು, ಅದಕ್ಕೆ ಸಂಬಂಧಿಸಿ ಇತರೆ ವಸ್ತುಗಳು ದೊರೆತವು ಎಂದು ತಿಳಿದು ಬಂದಿದೆ.
ಇವೆಲ್ಲವನ್ನು ಮಹಜರು ಮಾಡಿದ ಪೊಲೀಸ್ ಅಧಿಕಾರಿಗಳು ತಕ್ಷಣ ಅಲ್ಲಿಂದ ಆತನನ್ನು ಹೊಸ ಬಡಾವಣೆ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಕೆಲವು ವಿಚಾರಣೆ ನಡೆಸಿದರು.ನಂತರ ಆತನಿಗೆ ತಿನ್ನಲು ಇಡ್ಲಿ ನೀಡಿದರು.
ಇಡ್ಲಿ ತಿಂದು ಕೆಲ ಹೊತ್ತು ಠಾಣೆಯಲ್ಲಿಯೇ ಇರಿಸಿ ಆನಂತರ ಎಸ್‌ಎಸ್‌ಪುರಂ ನಲ್ಲಿ ವಾಸವಿದ್ದ ಮನೆಯನ್ನು ತಪಾಸಣೆ ನಡೆಸಿದರು. ತಪಾಸಣೆ ವೇಳೆಯಲ್ಲಿ ಏನೆಲ್ಲಾ ದೊರೆತಿದೆ ಎನ್ನುವುದನ್ನು ಹೇಳಲು ಪೊಲೀಸರು ನಿರಾಕರಿಸಿದರು. ತಪಾಣೆಯ ವೇಳೆಯಲ್ಲಿ ಎರಡು ಮನೆಗಳಲ್ಲಿ ಮಹತ್ವದ ಮಾಹಿತಿಗಳನ್ನು ಕಲೆ ಹಾಕಿದ್ದಾರೆ ಎಂದು ತಿಳಿದು ಬಂದಿದೆ. ಎರಡು ಕಡೆ ತಪಾಸಣೆ ನಡೆಸಿದ ನಂತರ ಬೆಂಗಳೂರಿಗೆ ಆರೋಪಿಯನ್ನು ಕರೆದುಕೊಂಡು ಹೋದರು.
ಜನಜಂಗುಳಿ: ಆರೋಪಿ ತೇಜರಾಜ್‌ಶರ್ಮ ನನ್ನು ಆತ ವಾಸವಿದ್ದ ಮನೆಗಳ ಬಳಿ ತಪಾಸಣೆಗಾಗಿ ಕರೆದುಕೊಂಡು ಬರುತ್ತಾರೆ ಎನ್ನುವ ಸುದ್ದಿ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಜನ ಆತನನ್ನು ನೋಡಲು ನಿಂತಿದ್ದರು. ಈ ಸಂಬಂಧವಾಗಿ ಆತ ವಾಸವಿದ್ದ ಮನೆಯ ಬೀದಿಯ ಅಕ್ಕಪಕ್ಕ ಬ್ಯಾರಿಕೇಟ್‌ಗಳನ್ನು ಹಾಕಿ ಪೊಲೀಸ್ ಭದ್ರತೆ ಒದಗಿಸಿದ್ದರು.