ನೆಲಮಂಗಲ: ಆಧುನಿಕತೆಯ ಪ್ರಭಾವದಿಂದ ಕಲಿಕೆಯ ಸಾಧನ ಸರಳವಾಗುತ್ತಿವೆ. ಅಂಗೈನಲ್ಲೇ ವಿಶ್ವದ ಸಮಾಚಾರ ತಿಳಿಯಬಹುದಾಗಿದೆ. ಯುವ ಸಮುದಾಯದ ಜ್ಞಾನಾರ್ಜನೆಗೆ ಗ್ರಾಪಂಗಳಲ್ಲಿ ತಂತ್ರಜ್ಞಾನದ ಸಹಕಾರದಿಂದ ಡಿಜಿಟಲ್ ಗ್ರಂಥಾಲಯಗಳು ಸಹಕಾರಿಯಾಗಲಿವೆ ಎಂದು ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿ ಎಲ್. ಮೋಹನ್ ಕುಮಾರ್ ಹೇಳಿದರು.
ತಾಲೂಕಿನ ತ್ಯಾಮಗೊಂಡ್ಲು ಗ್ರಾಪಂ ಹಾಗೂ ಎಲ್‌ಎಂ ವಿಂಡ್ ಪವರ್‌ನ ಸಿಎಸ್‌ಆರ್ ಅನುದಾನದಡಿಯಲ್ಲಿ ನಿರ್ಮಿಸಲಾಗಿರುವ ಡಿಜಿಟಲ್ ಗ್ರಂಥಾಲಯ ಹಾಗೂ ಸಮುದಾಯ ಸಂಪನ್ಮೂಲ ಕೇಂದ್ರ, ಸಮುದಾಯ ಶೌಚಾಲಯ ಮತ್ತು ರಾಜೀವ್ ಗಾಂಧಿ ಸೇವಾ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಅತಿಯಾಗುತ್ತಿರುವ ತಂತ್ರಜ್ಞಾನಕ್ಕೆ ಮಾರು ಹೋಗಿರುವ ಯುವ ಸಮುದಾಯಗಳು ಇಂದು ಮೊಬೈಲ್ ಮತ್ತು ಇತರೆ ದುಶ್ಚಟಗಳಿಗೆ ಹೆಚ್ಚು ದಾಸರಾಗುತ್ತಿದ್ದಾರೆ. ಪೋಷಕರು ಮಕ್ಕಳ ಮೇಲೆ ಗಮನಹರಿಸಬೇಕು ಎಂದರು.
ಸ್ಪರ್ಧಾತ್ಮಕ ಯುಗದಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಕಲಿಕಾಸ್ತಕಿ ಹೆಚ್ಚಾಗಿದ್ದು, ಗ್ರಾಪಂಗಳಲ್ಲಿ ಲಭ್ಯವಿರುವ ಗ್ರಂಥಾಲಯಗಳು ಅವರ ಕಲಿಕೆಗೆ ಮತ್ತಷ್ಟು ಬಲ ತುಂಬುತ್ತವೆ. ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದರು.
ಡಿಜಿಟಲ್ ಗ್ರಂಥಾಲಯ ಸ್ಥಾಪನೆ: ಗ್ರಾಮಾಂತರ ಜಿಲ್ಲೆಯ ಸಾರ್ವಜನಿಕ ಗ್ರಂಥಾಲಯ ಇಲಾಖೆ ಉಪನಿರ್ದೇಶಕ ದಿವಾಕರ್ ಮಾತನಾಡಿ, ನಮ್ಮ ಜಿಲ್ಲೆಯಲ್ಲಿ 68 ಗ್ರಾಪಂಗಳಲ್ಲಿ ಡಿಜಿಟಲ್ ಗ್ರಂಥಾಲಯ ಸ್ಥಾಪನೆ ಮಾಡಲಾಗಿದ್ದು, ಸ್ಥಳೀಯ ಕಂಪನಿ ಎಲ್‌ಎಂನ ಸಿಎಸ್‌ಆರ್ ಅನುದಾನದ 17 ಲಕ್ಷ ರೂ. ವೆಚ್ಚದಲ್ಲಿ ಉತ್ತಮ ಲೈಬ್ರರಿ ನಿರ್ಮಾಣ ವಾಗಿದೆ. ಸುತ್ತಮುತ್ತಲಿನ ಮೂರು ಸಾವಿರ ವಿದ್ಯಾರ್ಥಿಗಳಿಗೆ ಅನುಕೂಲವಾಗಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಿರುವ 10 ಲಕ್ಷಕ್ಕೂ ಹೆಚ್ಚು ಪುಸ್ತಕಗಳು ಮತ್ತು 63 ಸಾವಿರ ಮ್ಯಾಗ್‌ಜಿನ್ ಉಚಿತವಾಗಿ ಪಡೆಯಬಹುದುದಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ಗ್ರಾಪಂನಲ್ಲೂ ಡಿಜಿಟಲ್ ಗ್ರಂಥಾಲಯ ಸ್ಥಾಪಿಸಲಾಗುತ್ತದೆ ಎಂದರು.
ಕುಡಿಯುವ ನೀರಿನ ಘಟಕ: ಎಲ್‌ಎಂ ವಿಂಡ್ ಪವರ್‌ನ ಹಿರಿಯ ನಿರ್ದೇಶಕ ರಾಜೇಶ್ ಲೋಬೋ ಮಾತನಾಡಿ, ಕಂಪನಿಯ ಸಿಎಸ್‌ಆರ್ ಅನುದಾನದಲ್ಲಿ ಸುತ್ತಮುತ್ತಲಿನ ಗ್ರಾಮದ ಶಾಲೆಗಳಿಗೆ ಕುಡಿಯುವ ನೀರಿನ ಘಟಕ, ಗ್ರಂಥಾಲಯ, ಗ್ರಾಮಗಳಿಗೆ ನೀರಿನ ಪೂರೈಕೆ, ದಾಬಸ್‌ಪೇಟೆ ಭಾಗದ ಕೆರೆಯನ್ನು ಹೂಳು ಎತ್ತುವ ಮೂಲಕ ಉತ್ತಮವಾಗಿ ನಿರ್ವಹಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತೇವೆ ಎಂದರು.
ಗ್ರಾಪಂ ಆಡಳಿತಾಧಿಕಾರಿ ಎ. ನಟರಾಜು, ಪಿಡಿಒ ರೇಖಾ, ಜಿಪಂ ಮಾಜಿ ಸದಸ್ಯ ಕುಮಾರಸ್ವಾಮಿ ಮೊದಲಿಯರ್, ಹೊನ್ನಸಿದ್ದಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ಹನುಮಂತರಾಜು, ಟಿಎಪಿಎಂಸಿ ಅಧ್ಯಕ್ಷ ಗುರುಪ್ರಕಾಶ್, ಗುತ್ತಿಗೆದಾರ ಮಹಿಮಣ್ಣ, ತಾಪಂ ಮಾಜಿ ಅಧ್ಯಕ್ಷ ರಂಗಸ್ವಾಮಿ, ಎನ್‌ಡಿಎ ಸದಸ್ಯ ಜಗದೀಶ್ ಪ್ರಸಾದ್, ಸುಜಿತ್ ಕುಮಾರ್, ಆಂಜನಮೂರ್ತಿ, ಆರೀಪ್, ಹಿರಿಯ ನಿರ್ದೇಶಕ ಮಹದೇವ ಮೂರ್ತಿ, ಗುರುಪ್ರಸಾದ್, ಸಿಬ್ಬಂದಿ ಸೌಮ್ಯ, ರಾಧಿಕಾ, ಗ್ರಾಪಮ ಕಾರ್ಯದರ್ಶಿ
ಸೌಭಾಗ್ಯ, ಗಂಗಧರ್, ಶ್ರೀನಿವಾಸ್, ರಂಗನಾಥ್ ಹಾಗೂ ಮತ್ತಿತರರು ಇದ್ದರು.