Advertisement

ತಾಂತ್ರಿಕ ಆಡಳಿತಾತ್ಮಕ ಅನುಮೋದನೆ ಅಧಿಕಾರ ವಿಕೇಂದ್ರಿಕರಣ

11:43 AM Nov 04, 2017 | Team Udayavani |

ಹುಬ್ಬಳ್ಳಿ: ಸ್ಮಾರ್ಟ್‌ ಸಿಟಿ ಯೋಜನೆ ಕಾಮಗಾರಿಯ ತಾಂತ್ರಿಕ ಹಾಗೂ ಹಣಕಾಸು ಅನುಮೋದನೆಗೆ ಸರಕಾರದ ಕಡೆ ನೋಡಬೇಕಿತ್ತು. ಇದೀಗ 5ಕೋಟಿ ರೂ.ವರೆಗಿನ ಕಾಮಗಾರಿ ತಾಂತ್ರಿಕ ಅನುಮೋದನೆ ಅಧೀಕ್ಷಕ ಅಭಿಯಂತರರಿಗೆ, 10ಕೋಟಿ ರೂ.ವರೆಗಿನ ಆಡಳಿತಾತ್ಮಕ ಅನುಮೋದನೆ ಅಧಿಕಾರ ಎಸ್‌ಪಿವಿ ವ್ಯವಸ್ಥಾಪಕ ನಿರ್ದೇಶಕರಿಗೆ ನೀಡುವ ಮೂಲಕ ಅಧಿಕಾರ ವಿಕೇಂದ್ರೀಕರಿಸಲಾಗಿದೆ. 

Advertisement

ಸ್ಮಾರ್ಟ್‌ ಸಿಟಿ ಯೋಜನೆ ಅನುಷ್ಠಾನದಲ್ಲಿ ವಿಳಂಬಕ್ಕೆ ಅವಕಾಶ ನೀಡದಂತೆ ಕಾಲಮಿತಿಯೊಳಗೆ ಕಾಮಗಾರಿ  ಪೂರ್ಣ ನಿಟ್ಟಿನಲ್ಲಿ ತಾಂತ್ರಿಕ ಹಾಗೂ ಹಣಕಾಸು ಅನುಮೋದನೆ ಅಧಿಕಾರವನ್ನು ಸ್ಥಳೀಯ ಮಟ್ಟಕ್ಕೆ ನೀಡುವ ಮೂಲಕ ಯೋಜನೆ ಅನುಷ್ಠಾನ ತೀವ್ರಕ್ಕೆ ಸ್ಮಾರ್ಟ್‌ ಸಿಟಿ ಮಿಷನ್‌ ಮುಂದಾಗಿದೆ. ನಗರಾಭಿವೃದ್ಧಿ ಸಚಿವರ ಅಧ್ಯಕ್ಷತೆಯಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳ ಕಮಿಟಿಯೂ ಅಸ್ತಿತ್ವಕ್ಕೆ ಬಂದಿದೆ. 

ಯಾರಿಗೆ ಎಷ್ಟು ಅಧಿಕಾರ: ಸ್ಮಾರ್ಟ್‌ ಸಿಟಿ ಯೋಜನೆ ತ್ವರಿತ ಅನುಷ್ಠಾನ ನಿಟ್ಟಿನಲ್ಲಿ ತಾಂತ್ರಿಕ ಹಾಗೂ ಹಣಕಾಸು ಅಧಿಕಾರ ವಿಕೇಂದ್ರೀಕರಣ ನಿಟ್ಟಿನಲ್ಲಿ ರಾಜ್ಯ ಸರಕಾರ ಸೆಪ್ಟಂಬರ್‌ 15ರಂದು ಆದೇಶ ಹೊರಡಿಸಿದೆ(ಆದೇಶ ಸಂಖ್ಯೆ:ಯುಡಿಡಿ 2016, ಪ್ಯಾರಾ-6). ಆದೇಶದಂತೆ ಯಾರು ಎಷ್ಟು ಮೊತ್ತದ ಯೋಜನೆಗೆ ಅನುಮೋದನೆ ನೀಡಬಹುದು ಎಂಬುದನ್ನು ಸ್ಪಷ್ಟಪಡಿಸಲಾಗಿದೆ. 

5 ಕೋಟಿ ರೂ.ಒಳಗಿನ ಕಾಮಗಾರಿಗಳಿಗೆ ತಾಂತ್ರಿಕ ಅನುಮೋದನೆ ಅಧಿಕಾರವನ್ನು ಸ್ಮಾರ್ಟ್‌ಸಿಟಿ ಎಸ್‌ಪಿವಿ ಅಧೀಕ್ಷಕ ಅಭಿಯಂತಗೆ ನೀಡಲಾಗಿದೆ. ಅದೇ ರೀತಿ 5ಕೋಟಿಗಿಂತ ಹೆಚ್ಚಿನ ಮೊತ್ತದ ಕಾಮಗಾರಿ ಅನುಷ್ಠಾನಕ್ಕೆ ಸ್ಮಾರ್ಟ್‌ ಸಿಟಿ ಎಸ್‌ಪಿವಿ ಮುಖ್ಯ ಅಭಿಯಂತರು ತಾಂತ್ರಿಕ ಅನುಮೋದನೆ ನೀಡಬಹುದಾಗಿದೆ. 

ಸರಕಾರದ ಆದೇಶದಂತೆ ಸ್ಮಾರ್ಟ್‌ ಸಿಟಿ ಯೋಜನೆ ಕಾಮಗಾರಿಗಳ ಅನುಷ್ಠಾನಕ್ಕೆ ಆಡಳಿತಾತ್ಮಕ ಹಾಗೂ ಇತರೆ ಅಧಿಕಾರಗಳನ್ನು ಸಹ ವಿಕೇಂದ್ರೀಕರಿಸಲಾಗಿದೆ. 10ಕೋಟಿ ರೂ.ವರೆಗಿನ ಮೊತ್ತದವರೆಗೆ ಕಾಮಗಾರಿ ಕೈಗೊಳ್ಳುವುದು, ಸಾಮಗ್ರಿ ಖರೀದಿ, ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಇನ್ನಿತರ ವಿಷಯಗಳ ಆಡಳಿತಾತ್ಮಕ ಅನುಮೋದನೆ ಅಧಿಕಾರ ಸ್ಮಾರ್ಟ್‌ ಸಿಟಿ ಯೋಜನೆ ಎಸ್‌ಪಿವಿ ವ್ಯವಸ್ಥಾಪಕ ನಿರ್ದೇಶಕರಿಗೆ ನೀಡಲಾಗಿದೆ.

Advertisement

ಹುಬ್ಬಳ್ಳಿ-ಧಾರವಾಡ ಎಸ್‌ಪಿವಿ ವ್ಯವಸ್ಥಾಪಕ ನಿರ್ದೇಶಕ ಜವಾಬ್ದಾರಿಯನ್ನು ಹೆಚ್ಚುವರಿಯಾಗಿ ಮಹಾನಗರ ಪಾಲಿಕೆ ಆಯುಕ್ತ ಸಿದ್ದಲಿಂಗಯ್ಯ ಹಿರೇಮಠ ಅವರಿಗೆ ನೀಡಲಾಗಿದೆ. 10ಕೋಟಿ ರೂ.ಹೆಚ್ಚಿನ ಹಾಗೂ 50ಕೋಟಿ ರೂ. ವರೆಗಿನ ಮೊತ್ತದ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ಅಧಿಕಾರ ಸ್ಮಾರ್ಟ್‌ ಸಿಟಿ ಯೋಜನೆ ವಿಶೇಷ ವಾಹಕ(ಎಸ್‌ಪಿವಿ) ಆಡಳಿತ ಮಂಡಳಿಗೆ ನೀಡಲಾಗಿದೆ.

50ಕೋಟಿ ರೂ. ಮೇಲ್ಪಟ್ಟು, 200 ಕೋಟಿ ರೂ.ವರೆಗಿನ ಕಾಮಗಾರಿಗಳ ಆಡಳಿತಾತ್ಮಕ ಅನುಮೋದನೆ ಅಧಿಕಾರ ರಾಜ್ಯದ ಉನ್ನತಾಧಿಕಾರ ಕಮಿಟಿಗಿದೆ. 200ಕೋಟಿ ರೂ. ಮೇಲ್ಪಟ್ಟ ಕಾಮಗಾರಿಗಳಿಗೆ ರಾಜ್ಯ ಸರಕಾರ ಅನುಮೋದನೆ ನೀಡಲಿದೆ. ಹೊಸ ಯೋಜನೆಗಳ ಅನುಮೋದನೆ ನಿಟ್ಟಿನಲ್ಲಿ 20ಕೋಟಿ ರೂ.ಒಳಗಿನ ಮೊತ್ತದ ಕಾಮಗಾರಿಗಳಿಗೆ ಎಸ್‌ಪಿವಿ ಆಡಳಿತ ಮಂಡಳಿಗೆ ಅಧಿಕಾರವಿದ್ದರೆ,

20 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತದ ಎಲ್ಲ ಕಾಮಗಾರಿಗಳ ಅನುಮೋದನೆ ಅಧಿಕಾರ ಉನ್ನತಾಧಿಕಾರ ಕಮಿಟಿಗಿದೆ. ಟೆಂಡರ್‌ ಅನುಮೋದನೆಗೆ ಎಸ್‌ಪಿವಿ ವ್ಯವಸ್ಥಾಪಕ ನಿರ್ದೇಶಕರಿಗೆ ಒಟ್ಟು ಯೋಜನೆಯ ಶೇ.5ರಷ್ಟು ಮೊತ್ತಕ್ಕೆ ಅನುಮೋದನೆ ನೀಡಬಹುದಾಗಿದ್ದು, ಶೇ.5ಕಿಂತ ಹೆಚ್ಚಿನ ಶೇ.15ರವರೆಗೆ ಎಸ್‌ಪಿವಿ ಆಡಳಿತ ಮಂಡಳಿಗೆ, ಇದಕ್ಕಿಂತ ಮೇಲ್ಪಟ್ಟ ಕಾಮಗಾರಿಗಳಿಗೆ ಉನ್ನತಾಧಿಕಾರ ಕಮಿಟಿ ಅನುಮೋದನೆ ನೀಡಲಿದೆ. 

ತಾಂತ್ರಿಕ ಸಲಹಾ ಸಮಿತಿ ಅನುಮೋದಿಸಿದ ಕಾಮಗಾರಿ ವೆಚ್ಚದ ವ್ಯತ್ಯಾಸಗಳ ವಿಚಾರದಲ್ಲಿ ಕಾಮಗಾರಿ ವಿಸ್ತೃತ ಯೋಜನೆ(ಡಿಪಿಆರ್‌)ವೆಚ್ಚದ ಶೇ.5ರಷ್ಟು ಎಸ್‌ಪಿವಿ ವ್ಯವಸ್ಥಾಪಕ ನಿರ್ದೇಶಕರಿಗೆ, ಶೇ.5ಕ್ಕಿಂತ ಮೇಲ್ಪಟ್ಟು, ಶೇ.10ರವರೆಗೆ ಎಸ್‌ಪಿವಿ ಆಡಳಿತ ಮಂಡಳಿಗೆ, ಅದಕ್ಕಿಂತ ಮೇಲ್ಪಟ್ಟು ರಾಜ್ಯ ಉನ್ನತಾಧಿಕಾರ ಕಮಿಟಿಗೆ ಅನುಮೋದನೆ ಅಧಿಕಾರವಿದೆ.

ಸಲಹಾ ಏಜೆನ್ಸಿಗಳ ನೇಮಕ ವಿಚಾರದಲ್ಲಿ ನೇರ ನೇಮಕಕ್ಕೆ 5ಲಕ್ಷ ರೂ.ವರೆಗೆ, ಟೆಂಡರ್‌ ಮೂಲಕ 10ಲಕ್ಷ ರೂ.ವರೆಗೆ ಎಸ್‌ಪಿವಿ ವ್ಯವಸ್ಥಾಪಕ ನಿರ್ದೇಶಕರಿಗೆ, ಟೆಂಡರ್‌ ಮೂಲಕ 10ಲಕ್ಷ ರೂ.ಮೇಲ್ಪಟ್ಟು, 2ಕೋಟಿ ರೂ.ಒಳಗೆ ಎಸ್‌ಪಿವಿ ಆಡಳಿತ ಮಂಡಳಿಗೆ, ಇದಕ್ಕಿಂತ ಮೇಲ್ಪಟ್ಟ ಮೊತ್ತಕ್ಕೆ ಉನ್ನತಾಧಿಕಾರ ಕಮಿಟಿಗೆ ಅಧಿಕಾರ ನೀಡಲಾಗಿದೆ. ತಾಂತ್ರಿಕ ಹಾಗೂ ಆಡಳಿತಾತ್ಮಕ ಅನುಮೋದನೆಯ ಅಧಿಕಾರ ವಿಕೇಂದ್ರೀಕರಣದಿಂದಾಗಿ ಸ್ಮಾರ್ಟ್‌ ಸಿಟಿ ಯೋಜನೆ ಅನುಷ್ಠಾನ ಕಾರ್ಯ ಇನ್ನಷ್ಟು ಚುರುಕುಗೊಳ್ಳಲಿದೆ ಎಂಬ ಆಶಾಭಾವನೆ ವ್ಯಕ್ತವಾಗಿದೆ. 

* ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next