ಮುಂಬೈ: ಜುಲೈ 6ರಿಂದ ನಡೆಯಲಿರುವ ಜಿಂಬಾಬ್ವೆ ವಿರುದ್ದದ ಟಿ20 ಸರಣಿಗೆ ಭಾರತ ತಂಡವನ್ನು ಆಯ್ಕೆ ಮಾಡಲಾಗಿದೆ. ಸೀನಿಯರ್ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದ್ದು, ಯುವ ತಂಡವನ್ನು ಕಟ್ಟಲಾಗಿದೆ. ಯುವ ಬ್ಯಾಟರ್ ಶುಬ್ಮನ್ ಗಿಲ್ ಅವರು ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.
ಸದ್ಯ ಟಿ20 ವಿಶ್ವಕಪ್ ತಂಡದಲ್ಲಿರುವ ಇಬ್ಬರನ್ನು ಮಾತ್ರ ಜಿಂಬಾಬ್ವೆ ಸರಣಿಗೆ ಆಯ್ಕೆ ಮಾಡಲಾಗಿದೆ. ವಿಶ್ವಕಪ್ ನಲ್ಲಿ ಇದುವರೆಗೆ ಅವಕಾಶ ಪಡೆಯದ ಯಶಸ್ವಿ ಜೈಸ್ವಾಲ್ ಮತ್ತು ಸಂಜು ಸ್ಯಾಮ್ಸನ್ ಅವರು ಈ ತಂಡದಲ್ಲಿದ್ದಾರೆ.
ಈ ಬಾರಿಯ ಐಪಿಎಲ್ ನಲ್ಲಿ ಮಿಂಚಿದ್ದ ಅಭಿಷೇಕ್ ಶರ್ಮಾ, ನಿತೀಶ್ ರೆಡ್ಡಿ, ರಿಯಾನ್ ಪರಾಗ್ ಮತ್ತು ತುಷಾರ್ ದೇಶಪಾಂಡೆ ಅವರಿಗೆ ಮೊದಲ ಬಾರಿಗೆ ರಾಷ್ಟ್ರೀಯ ತಂಡದ ಕರೆ ನೀಡಲಾಗಿದೆ. ಅಲ್ಲದೆ ಟೆಸ್ಟ್ ತಂಡದಲ್ಲಿ ಆಡಿರುವ ಧ್ರುವ್ ಜುರೆಲ್ ಅವರಿಗೆ ಟಿ20 ತಂಡಕ್ಕೆ ಆಯ್ಕೆ ಮಾಡಲಾಗಿದೆ.
ಭಾರತ ತಂಡವು ಜಿಂಬಾಬ್ವೆ ವಿರುದ್ದ ಐದು ಟಿ20 ಪಂದ್ಯಗಳನ್ನು ಆಡಲಿದೆ. ಎಲ್ಲಾ ಪಂದ್ಯಗಳು ಹರಾರೆ ಸ್ಪೋರ್ಸ್ಟ್ ಕ್ಲಬ್ ನಲ್ಲಿ ನಡೆಯಲಿದೆ. ಜುಲೈ 6ರಂದು ಆರಂಭವಾಗುವ ಸರಣಿ ಜುಲೈ 14ವರೆಗೆ ನಡೆಯಲಿದೆ.
ತಂಡ: ಶುಬ್ಮನ್ ಗಿಲ್ (ನಾಯಕ), ಯಶಸ್ವಿ ಜೈಸ್ವಾಲ್, ರುತುರಾಜ್ ಗಾಯಕ್ವಾಡ್, ಅಭಿಷೇಕ್ ಶರ್ಮಾ, ರಿಂಕು ಸಿಂಗ್, ಸಂಜು ಸ್ಯಾಮ್ಸನ್ (ವಿ.ಕೀ), ಧ್ರುವ್ ಜುರೆಲ್ (ವಿ.ಕೀ), ನಿತೀಶ್ ರೆಡ್ಡಿ, ರಿಯಾನ್ ಪರಾಗ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅವೇಶ್ ಖಾನ್, ಖಲೀಲ್ ಅಹ್ಮದ್ ಮುಖೇಶ್ ಕುಮಾರ್, ತುಷಾರ್ ದೇಶಪಾಂಡೆ.