Advertisement

ತೊಡಕು ನಿವಾರಣೆಯಾಗಿದೆ, ವರ್ಗಾವಣೆ ಪ್ರಕ್ರಿಯೆ ಆರಂಭವಾಗಲಿ

01:49 AM May 01, 2021 | Team Udayavani |

ಕಾನೂನಿನ ತೊಡಕು, ಚುನಾವಣೆ ನೀತಿ ಸಂಹಿತೆ ಮೊದಲಾದ ಕಾರಣಗಳಿಂದ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಕೆಲವು ವರ್ಷಗಳಿಂದ ಸಮರ್ಪಕವಾಗಿ ನಡೆದಿಲ್ಲ. ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) ಕಾಯ್ದೆ-2021ಅನ್ನು ಇತ್ತೀಚಿಗಷ್ಟೇ ರಾಜ್ಯ ಸರಕಾರ ಅನುಷ್ಠಾನಕ್ಕೆ ತಂದಿತ್ತು. ನಿಯಮ ರೂಪಿಸುವ ಸಂದರ್ಭದಲ್ಲಿ ಕಾಯ್ದೆಯಲ್ಲಿ ಇಲ್ಲದ ಅಂಶಗಳನ್ನು ಸೇರಿಸಿದ್ದಾರೆ ಎಂಬ ಕಾರಣಕ್ಕೆ ಶಿಕ್ಷಕರಲ್ಲಿ ಕೆಲವರು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ(ಕೆಎಟಿ) ಮೆಟ್ಟಿಲೇರಿದ್ದರು. ಕೆಎಟಿ ಶಿಕ್ಷಕರ ಅರ್ಜಿ ಮಾನ್ಯ ಮಾಡಿತ್ತು.

Advertisement

ಕೆಎಟಿ ಆದೇಶ ಪ್ರಶ್ನಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಹೈಕೋರ್ಟ್‌ ಮೇಟ್ಟಿಲೇರಿತ್ತು. ಹೈಕೋರ್ಟ್‌ ಕೂಡ ಕೆಎಟಿ ಆದೇಶ ಎತ್ತಿಹಿಡಿದಿದ್ದರಿಂದ ವರ್ಗಾವಣೆ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ಹೇಗಾದರೂ ಮಾಡಿ ಪ್ರಸಕ್ತ ಸಾಲಿನಲ್ಲಿ ಶಿಕ್ಷಕರ ವರ್ಗಾವಣೆಯನ್ನು ಸಮರ್ಪಕವಾಗಿ ಮಾಡಬೇಕು ಎಂದು ಪಟ್ಟು ಹಿಡಿದ ಸಾರ್ವಜನಿಕ ಶಿಕ್ಷಣ ಇಲಾಖೆ, ಅಧ್ಯಾದೇಶದ ಮೂಲಕ ಕಾಯ್ದೆಗೆ ತಿದ್ದುಪಡಿ ತರಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತು.

ಇಲಾಖೆಯ ಪ್ರಸ್ತಾವನೆಯಂತೆ ಕಳೆದ ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅಧ್ಯಾದೇಶದ ಮೂಲಕ ಕಾಯ್ದೆಗೆ ತಿದ್ದುಪಡಿ ತರಲು ನಿರ್ಧರಿಸಲಾಯಿತು. ಅನಂತರ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಅವರು ಅತ್ಯಂತ ಮುತುವರ್ಜಿ ವಹಿಸಿ ಶೀಘ್ರವೇ ತಿದ್ದುಪಡಿ ಆಧ್ಯಾದೇಶವನ್ನು ರಾಜ್ಯಪಾಲರಿಗೆ ಕಳುಹಿಸಿದರು. ಅದರಂತೆ ರಾಜ್ಯಪಾಲರಿಂದ ಆಧ್ಯಾದೇಶಕ್ಕೆ ಅಂಕಿತವೂ ಬಿದ್ದು ರಾಜ್ಯಪತ್ರದಲ್ಲೂ ಹೊರಡಿಸಲಾಗಿದೆ. ಹೊಸದಾಗಿ ಆಗಿರುವ ತಿದ್ದುಪಡಿಯಂತೆ ವರ್ಗಾವಣೆ ಪ್ರಕ್ರಿಯೆಯನ್ನು ಆನ್‌ಲೈನ್‌ ಮೂಲಕವೇ ನಡೆಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. 2019-20ರಲ್ಲಿ ಕಡ್ಡಾಯ ಹಾಗೂ ಹೆಚ್ಚುವರಿ ವರ್ಗಾವಣೆಯಿಂದ ತಾಲೂಕು, ಜಿಲ್ಲೆಗಳಿಂದ ವರ್ಗಾವಣೆ ಹೊಂದಿರುವವರು ಪುನಃ ತವರು ತಾಲೂಕು ಅಥವಾ ಜಿಲ್ಲೆಗೆ ವರ್ಗಾವಣೆ ಪಡೆಯಲು ಆದ್ಯತೆ ನೀಡುವ ತಿದ್ದುಪಡಿ ಇದಾಗಿದೆ. ಈ ಹಿಂದೆ ಕಡ್ಡಾಯ ವರ್ಗಾವಣೆಯ ಶಿಕ್ಷೆ ಅನುಭವಿಸಿರುವ ಬಹುತೇಕ ಶಿಕ್ಷಕರಿಗೆ ಇದರಿಂದ ಅನುಕೂಲವಾಗಲಿದೆ. ತವರು ಜಿಲ್ಲೆ ತಾಲೂಕುಗಳಲ್ಲಿ ಹುದ್ದೆ ಖಾಲಿ
ಯಿದ್ದರೆ ಸುಲಭವಾಗಿ ವರ್ಗಾವಣೆ ಪಡೆಯಲು ಅನುಕೂಲವಾಗಲಿದೆ.

ಶಿಕ್ಷಕರ ವರ್ಗಾವಣೆ ವಿಚಾರವಾಗಿ ಸರಕಾರ ವಾರದೊಳಗೆ ಅಧ್ಯಾದೇಶದ ನಿರ್ಧಾರ ತೆಗೆದುಕೊಂಡು, ರಾಜ್ಯಪಾಲರಿಂದಲೂ ಅಂಕಿತ ಪಡೆದಿದೆ. ಅಷ್ಟೇ ವೇಗವಾಗಿ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಯನ್ನು ಮುಗಿಸಬೇಕು. ಮತ್ತೂಮ್ಮೆ ಕಾನೂನಿನ ತೊಡಕು ಅಥವಾ ಬೇರೆ ಯಾವುದೇ ತೊಂದರೆ, ಅಡ್ಡಿ, ಆತಂಕವಿಲ್ಲದೇ ಶೀಘ್ರವಾಗಿ ವರ್ಗಾವಣೆ ಪ್ರಕ್ರಿಯೆ ಮುಗಿಸಬೇಕು. ಈಗಾಗಲೇ ಶಾಲೆಗಳಿಗೆ ಬೇಸಗೆ ರಜಾ ಘೋಷಣೆ ಮಾಡಿರುವುದರಿಂದ ಕೂಡಲೆ ವರ್ಗಾವಣೆ ಪ್ರಕ್ರಿಯೆ ಆರಂಭಿಸಿದರೆ, ಮುಂದಿನ ಶೈಕ್ಷಣಿಕ ವರ್ಷಕ್ಕೆ ಸರಿಯಾಗಿ ಹೊಸ ಸ್ಥಳದಲ್ಲಿ ಕಾರ್ಯಾರಂಭಕ್ಕೆ ಶಿಕ್ಷಕರಿಗೂ ಅನುಕೂಲವಾಗಲಿದೆ.

ಪ್ರಸಕ್ತ ಸಾಲಿನಲ್ಲಿ ವರ್ಗಾವಣೆಗೆ 72 ಸಾವಿರಕ್ಕೂ ಅಧಿಕ ಅರ್ಜಿಗಳು ಈಗಾಗಲೇ ಸಲ್ಲಿಕೆಯಾಗಿವೆ. ಕೌನ್ಸೆಲಿಂಗ್‌ ಹಾಗೂ ಸ್ಥಳ ನಿಯುಕ್ತಿ ಆದೇಶ ಪ್ರಕ್ರಿಯೆ ಆನ್‌ಲೈನ್‌ ಮೂಲಕವೇ ನಡೆಯುವುದರಿಂದ ಆದಷ್ಟು ಬೇಗ ಪ್ರಕ್ರಿಯೆ ಆರಂಭಿಸಬೇಕು ಮತ್ತು ಶಿಕ್ಷಕ ಮಿತ್ರ ಆ್ಯಪ್‌ನಲ್ಲಿಯೂ ಯಾವುದೇ ತಾಂತ್ರಿಕ ದೋಷ ಉಂಟಾಗದಂತೆಯೂ ಸಾರ್ವಜನಿಕ ಶಿಕ್ಷಣ ಇಲಾಖೆ ಎಚ್ಚರ ವಹಿಸಬೇಕು. ಕಳೆದ ಅನೇಕ ವರ್ಷಗಳಿಂದ ವರ್ಗಾವಣೆಗಾಗಿ ಕಾಯುತ್ತಿರುವ ಅದೆಷ್ಟೋ ಶಿಕ್ಷಕರು ಇದರಿಂದ ನಿಟ್ಟುಸಿರು ಬಿಡಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next