Advertisement

ಆಗ್ನೇಯ ಶಿಕ್ಷಕರ ಕ್ಷೇತ್ರದ ಫ‌ಲಿತಾಂಶ: ಜೆಡಿಎಸ್‌ ಅಭ್ಯರ್ಥಿ ಮೇಲುಗೈ

03:45 AM Feb 07, 2017 | Team Udayavani |

ಬೆಂಗಳೂರು: ರಾಜ್ಯ ವಿಧಾನಪರಿಷತ್ತಿನ ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯ ಮತ ಎಣಿಕೆ ಮಧ್ಯರಾತ್ರಿವರೆಗೂ ಮುಂದುವರಿದಿದೆ.

Advertisement

ಯಾವುದೇ ಅಭ್ಯರ್ಥಿ ಗೆಲ್ಲಲು ಬೇಕಾದ ಶೇ.50 ರಷ್ಟು ಮೊದಲ ಪ್ರಾಶಸ್ತ್ಯ ಗಳಿಸದ ಕಾರಣ ಎರಡು ಹಾಗೂ ಮೂರನೇ ಪ್ರಾಶಸ್ತ್ಯ ಮತಗಳ ಎಣಿಕೆ ನಡೆಯುತ್ತಿರುವುದರಿಂದ ಫ‌ಲಿತಾಂಶ ತಡವಾಗಿದೆ.

ಮೊದಲ ಸುತ್ತಿನ ಮತ ಎಣಿಕೆ ಮುಗಿದಾಗ 5,247 ಮತಗಳನ್ನು ಪಡೆದುಕೊಂಡಿದ್ದ ಜೆಡಿಎಸ್‌ನ ರಮೇಶ ಬಾಬು, ಬಿಜೆಪಿ ಅಭ್ಯರ್ಥಿ ಬಸವರಾಜು ಎದುರು ಮೇಲುಗೈ ಸಾಧಿಸಿದ್ದರು. ಎರಡನೇ ಸುತ್ತಿನಲ್ಲೂ ಅವರೇ ಮುನ್ನಡೆ ಸಾಧಿಸಿದ್ದರು.
ಮೊದಲ ಪ್ರಾಶಸ್ತ್ಯದ ಮತ ಎಣಿಕೆ ಮುಕ್ತಾಯಗೊಂಡಾಗ ರಮೇಶ ಬಾಬು 5,247 ಮತ ಪಡೆದಿದ್ದರೆ, ಬಿಜೆಪಿಯ ಬಸವರಾಜು 4, 947 ಮತ ಗಳಿಸಿದರು. ಆಡಳಿತಾರೂಢ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಟಿ.ಎಸ್‌. ನಿರಂಜನ್‌ ಕೇವಲ 496 ಮತಗಳನ್ನಷ್ಟೇ ಪಡೆದುಕೊಳ್ಳುವ ಮೂಲಕ ಠೇವಣಿ ಕಳೆದುಕೊಂಡರು. ಜೆಡಿಎಸ್‌ ಬಂಡಾಯ ಅಭ್ಯರ್ಥಿ ಎಚ್‌.ಎಸ್‌. ಅರವಿಂದ್‌ 746 ಮತಗಳನ್ನು ಪಡೆದಿದದರು. 1,237 ಮತಗಳು ತಿರಸ್ಕೃತಗೊಂಡಿದ್ದವು.

ಗೆಲುವಿಗೆ ಅಗತ್ಯವಿರುವ ಒಟ್ಟು ಚಲಾವಣೆಯಾದ ಮತಗಳ ಪೈಕಿ ಶೇ.50ರಷ್ಟು ಮತಗಳು ಮೊದಲ ಸುತ್ತಿನಲ್ಲಿ ಯಾವುದೇ ಅಭ್ಯರ್ಥಿಗಳು ಪಡೆದುಕೊಳ್ಳದಿರುವ ಕಾರಣಕ್ಕೆ ಎರಡನೇ ಸುತ್ತಿನ ಮತ ಎಣಿಕೆಗೆ ನಿರ್ಧರಿಸಲಾಯಿತು.

ಆಗ್ನೇಯ ಶಿಕ್ಷಕರ ಕ್ಷೇತ್ರ ಪ್ರತಿನಿಧಿಸುತ್ತಿದ್ದ ಬಿಜೆಪಿಯ ವೈ.ಎ. ನಾರಾಯಣಸ್ವಾಮಿ ಹೆಬ್ಟಾಳ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದರಿಂದ ಆಗ್ನೇಯ ಶಿಕ್ಷಕರ ಕ್ಷೇತ್ರ ತೆರವಾಗಿತ್ತು. ಈ ಕ್ಷೇತ್ರಕ್ಕೆ ಫೆ.3ರಂದು ಮತದಾನ ನಡೆದಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next