Advertisement

ಶಿಕ್ಷಕರ ಸಮಸ್ಯೆ ಆಲಿಸುವವರೇ ಇಲ್ಲ!

10:21 PM Sep 06, 2019 | Lakshmi GovindaRaju |

ಸಂತೆಮರಹಳ್ಳಿ: ಯಳಂದೂರು ತಾಲೂಕು ಜಿಲ್ಲೆಯಲ್ಲಿ ಅತ್ಯಂತ ಚಿಕ್ಕ ತಾಲೂಕಾಗಿದೆ. ಇಲ್ಲಿ ಪ್ರತ್ಯೇಕ ಶೈಕ್ಷಣಿಕ ಬ್ಲಾಕ್‌ ಇದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಹಲವು ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಈ ಬ್ಲಾಕ್‌ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಗಳಿಸಿದೆ. ಆದರೆ, ಪ್ರತಿನಿತ್ಯ ಸಾವಿರಾರು ವಿದ್ಯಾರ್ಥಿಗಳಿಗೆ ಬೋಧನೆ ಮಾಡುವ ನೂರಾರು ಶಿಕ್ಷಕರ ಬಹುದಿನಗಳ ಬೇಡಿಕೆಯಾದ ಗುರು ಭವನವೇ ಯಳಂದೂರು ತಾಲೂಕಿನಲ್ಲಿ ಇಲ್ಲ.

Advertisement

2003ರಲ್ಲಿ ಗುರುಭವನಕ್ಕೆ ಭೂಮಿ ಪೂಜೆ: ತಾಲೂಕಿನಲ್ಲಿ ಪ್ರಾಥಮಿಕ ಶಾಲೆಯಲ್ಲಿ 270 ಹಾಗೂ ಪ್ರೌಢಶಾಲೆಯಲ್ಲಿ 70 ಶಿಕ್ಷಕರು ತಾಲೂಕಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 2003ರಲ್ಲಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬಳಿ ಇರುವ ಸ್ಥಳದಲ್ಲಿ ಗುರು ಭವನವನ್ನು ನಿರ್ಮಾಣ ಮಾಡಲು ಅಂದಿನ ಸಚಿವರೂ ಆಗಿದ್ದ ಸಂಸದ ವಿ.ಶ್ರೀನಿವಾಸ್‌ ಪ್ರಸಾದ್‌ ಭೂಮಿ ಪೂಜೆಯನ್ನು ನೆರವೇರಿಸಿದ್ದರು. ಅಂದಿನ ಶಾಸಕರಾಗಿ ಜಿ.ಎನ್‌. ನಂಜುಂಡಸ್ವಾಮಿ ಅವರು ಉಪಸ್ಥಿತರಿದ್ದರು. ಆದರೆ, ಈ ಸ್ಥಳ ಲೋಕೋಪಯೋಗಿ ಇಲಾಖೆಗೆ ಸೇರಿದ್ದು. ಇಲ್ಲಿ ಶಿಕ್ಷಕರ ಭವನ ನಿರ್ಮಾಣಕ್ಕೆ ಹಲವು ತಾಂತ್ರಿಕ ತೊಡಕುಗಳು ಆದವು ಈ ಹಿನ್ನೆಲೆಯಲ್ಲಿ ಇದು ನೆನೆಗುದಿಗೆ ಬಿತ್ತು.

ಸಮಸ್ಯೆ ಪರಿಹರಿಸಲು ವಿಫ‌ಲ: ಅಂದಿನಿಂದ ಇಂದಿನವೆರೆಗೂ ಅನೇಕ ಶಾಸಕರು ಹಾಗೂ ಸಂಸದರು ಆಗಿ ಹೋಗಿದ್ದರೂ ಈ ಸಮಸ್ಯೆಗೆ ಪರಿಹಾರ ದೊರಕಿಸಿಕೊಡುವಲ್ಲಿ ವಿಫ‌ಲರಾಗಿದ್ದಾರೆ. ಹಾಲಿ ಶಾಸಕ ಈ ಹಿಂದೆ ಶಿಕ್ಷಣ ಸಚಿವರಾಗಿದ್ದ ಎನ್‌.ಮಹೇಶ್‌ ಅವರಿಗೆ ಸಚಿವರಾಗಿದ್ದಾಗಲೂ ಶಿಕ್ಷಕರ ಸಂಘದ ಸದಸ್ಯರು ಗುರು ಭವನ ನಿರ್ಮಾಣ ಮಾಡುವಂತೆ ಮನವಿ ಸಲ್ಲಿಸಿದ್ದರೂ ಇದೂ ಕೂಡ ಈಡೇರಿಲ್ಲ.

ಭವನದ ಯೋಗ ಇನ್ನೂ ಕೂಡಿಬಂದಿಲ್ಲ: ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲೂ ಶಿಕ್ಷಕರ ಭವನಗಳಿದ್ದರೂ ಯಳಂದೂರಿಗೆ ಈ ಯೋಗ ಇನ್ನೂ ಕೂಡಿ ಬಂದಿಲ್ಲ. ಶಿಕ್ಷಕರ ಯಾವುದೇ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದರೂ ಶಾಲೆಯನ್ನೇ ಆಶ್ರಯಿಸುವ ಪರಿಸ್ಥಿತಿ ಇದೆ. ಪ್ರತಿ ವರ್ಷ ಶಿಕ್ಷರ ದಿನಾಚರಣೆಯನ್ನು ಕೆಲವೊಂದು ಸೌಲಭ್ಯಗಳುಳ್ಳ ಶಾಲೆಗಳಲ್ಲಿ ಆಚರಿಸಲಾಗುತ್ತದೆ. ಇದಲ್ಲದೆ ಬೇರೆ ಸಭೆ, ಸಮಾರಂಭಗಳನ್ನು ನಡೆಸಲು ಖಾಸಗಿ ಅಥವಾ ಸರ್ಕಾರಿ ಶಾಲೆಗಳನ್ನೇ ಆಶ್ರಯಿಸುವ ಪರಿಸ್ಥಿತಿ ಇದೆ.

ಪ್ರತಿನಿಧಿಗಳು ಕಾಳಜಿ ವಹಿಸಿಲ್ಲ: ಯಳಂದೂರು ಜಿಲ್ಲೆಯಲ್ಲಿ ಪುಟ್ಟ ಶೈಕ್ಷಣಿಕ ಬ್ಲಾಕ್‌ನ್ನು ಹೊಂದಿದೆ. ಆದರೆ, ಇಲ್ಲಿಗೆ ಸುಸಜ್ಜಿತ ಗುರು ಭವನ ನಿರ್ಮಾಣ ಮಾಡುವಂತೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಆದರೂ ಕೂಡ ಯಾವೊಬ್ಬ ಜನಪ್ರತಿನಿಧಿಗಳು ಈ ಬಗ್ಗೆ ಹೆಚ್ಚು ಕಾಳಜಿ ವಹಿಸಿಲ್ಲ. ಈಗಲಾದರೂ ಸಂಬಂಧಪಟ್ಟ ಸಂಸದರು, ಶಾಸಕರು ನಮಗೆ ಜಾಗವನ್ನು ದೊರಕಿಸಿಕೊಟ್ಟು ಗುರು ಭವನ ನಿರ್ಮಾಣಕ್ಕೆ ಕ್ರಮ ವಹಿಸಬೇಕು ಎಂದು ಮನವಿ ಮಾಡುತ್ತೇನೆ ಎಂದು ಶಿಕ್ಷಕ ಹಾಗೂ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ವೈ.ಎಂ. ಮಂಜುನಾಥ್‌ ಆಗ್ರಹಿಸಿದ್ದಾರೆ.

Advertisement

* ಫೈರೋಜ್‌ ಖಾನ್‌

Advertisement

Udayavani is now on Telegram. Click here to join our channel and stay updated with the latest news.

Next