ನಗರ: ಇಂದು ಹಣದ ಲಾಲಸೆ ಮಾನವೀಯ ಸಂಬಂಧಗಳಿಗೆ ಅಡ್ಡಿಯಾಗುತ್ತಿದೆ. ಎಳವೆಯಿಂದಲೇ ಮಕ್ಕಳನ್ನು ಆರ್ಥಿಕ ಸಂಪಾದನೆಯ ಕುರಿತಾಗಿ ಚಿಂತನೆಗೆ ಹಚ್ಚುವ ಬದಲು ಮೌಲ್ಯಗಳ ಬಗೆಗೆ ಕಲಿಸಿಕೊಡಬೇಕಿದೆ ಎಂದು ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ ಹೇಳಿದರು.
ವಿವೇಕಾನಂದ ವಿದ್ಯಾವರ್ಧಕ ಸಂಘ ಪ್ರವರ್ತಿತ ನಗರದ ನಿವೇದಿತಾ ಶಿಶುಮಂದಿರದ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಆಧುನಿಕ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲೂ ಜೀವನ ನಡೆಸಬಹುದಾದಷ್ಟು ಆದಾಯವನ್ನು ಕಾಣಬಹುದಾಗಿದೆ. ಹೆತ್ತ ತಂದೆ-ತಾಯಿ ಹಾಗೂ ಜನ್ಮಭೂಮಿಯನ್ನು ದೂರ ಮಾಡಿ ನಗರಗಳೆಡೆಗೆ ವಲಸೆ ಹೋಗುವುದು ಅಕ್ಷಮ್ಯ ಎಂದು ಹೇಳಿದರು.
ಕೋಶಾಧಿಕಾರಿ ರಾಧೇಶ್ಯಾಂ ವಾರ್ಷಿಕ ವರದಿ ವಾಚಿಸಿದರು. ಶಿಶುಮಂದಿರದ ಆಡಳಿತ ಮಂಡಳಿಯ ಸಮಿತಿಯ ಸದಸ್ಯೆ ಲಕ್ಷ್ಮೀ ವಿ.ಜಿ. ಭಟ್ ವಿಜ್ಞಾಪನ ಪತ್ರ ಮಂಡಿಸಿದರು. ಹಿರಿಯ ವಿದ್ಯಾರ್ಥಿ ಚಿರಂತನ್ ಚೆಂಡೆ ನುಡಿಸಿದರು. ಶಿಶುಮಂದಿರದ ಅಧ್ಯಕ್ಷ ರಘುನಾಥ ಬಿ. ಅತಿಥಿಗಳನ್ನು ಸ್ವಾಗತಿ ಸಿದರು. ಕಾರ್ಯದರ್ಶಿ ಶ್ರೀಧರ ಕುಂಜಾರು ವಂದಿಸಿದರು. ಶಿಶುಮಂದಿರದ ಮಾತೃ ಮಂಡಳಿಯ ಸದಸ್ಯೆ ಸೌಮ್ಯಾ ಡಿ. ಕಾರ್ಯಕ್ರಮ ನಿರ್ವಹಿಸಿದರು.
ಸಭೆಯ ಬಳಿಕ ಶಿಶುಮಂದಿರದ ಪುಟಾಣಿಗಳು, ಬಾಲ ಗೋಕುಲದ ವಿದ್ಯಾರ್ಥಿಗಳು, ಮಾತೃಮಂಡಳಿಯ ಮಾತೆಯ ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಪ್ರಾರ್ಥನೆ, ಪಂಚಾಂಗ, ಅಮೃತಬಿಂದು, ಅಮೃತವಚನ, ಗಾದೆಮಾತುಗಳು, ಕಬೀರದೋಹೆ, ಸರ್ವಜ್ಞನ ವಚನ ಹಾಗೂ ಭಗವದ್ಗೀತಾ ಪಠಣ ವನ್ನು ಶಿಶುಮಂದಿರದ ಪುಟಾಣಿಗಳು ನಡೆಸಿಕೊಟ್ಟರು.
ಸದ್ವಿಚಾರ ಕಲಿಸಿ
ಅಧ್ಯಕ್ಷತೆ ವಹಿಸಿದ ವಿವೇಕಾನಂದ ಅದ್ಯಯನ ಕೇಂದ್ರ ಯಶಸ್‌ನ ಆಡಳಿತ ಸಮಿತಿಯ ಸದಸ್ಯೆ ವಿದ್ಯಾ ಆರ್. ಗೌರಿ ಮಾತ ನಾಡಿ, ಎಳವೆಯಲ್ಲಿ ಮಕ್ಕಳಿಗೆ ಸದ್ವಿಚಾರಗಳನ್ನು ಕಲಿಸಬೇಕು. ಮಕ್ಕಳಲ್ಲಿರುವ ಕುತೂಹಲ ಭರಿತ ವಿಷಯಗಳಿಗೆ ಸರಿಯಾದ ರೀತಿಯಲ್ಲಿ ಸ್ಪಂದಿಸಬೇಕು. ಆಗ ಮಕ್ಕಳ ಸರ್ವ ತೋಮುಖ ಬೆಳವಣಿಗೆ ಸಾಧ್ಯವಾಗುತ್ತದೆ. ನಿವೇದಿತಾ ಶಿಶು ಮಂದಿರ ಮಕ್ಕಳ ಆರೋಗ್ಯಪೂರ್ಣ ಬೆಳವಣಿಗೆ, ಭಾರತೀಯ ಶಿಕ್ಷಣವನ್ನು ಒದಗಿಸಿಕೊಡುತ್ತಿದೆ ಎಂದು ಹೇಳಿದರು.