Advertisement

Basroor: ಎರಡು ದಶಕಗಳಿಂದ ಪಾಳು ಬಿದ್ದ ಮಾರ್ಗೋಳಿ ಸಮಾಜ ಮಂದಿರ

11:56 AM Oct 25, 2024 | Team Udayavani |

ಬಸ್ರೂರು: ಇಲ್ಲಿನ ಮಾರ್ಗೋಳಿ ಯಲ್ಲಿರುವ ಸಮಾಜ ಮಂದಿರವೊಂದು ಕಳೆದೆರಡು ದಶಕಗಳಿಂದ ಪಾಳುಬಿದ್ದ ಸ್ಥಿತಿಯಲ್ಲಿದ್ದು, ಶಿಥಿಲಾವಸ್ಥೆಯಲ್ಲಿರುವ ಈ ಕಟ್ಟಡದಲ್ಲಿ ಯಾವುದೇ ಕಾರ್ಯಕ್ರಮಗಳು ನಡೆಯದೇ ನಿಷ್ಪ್ರಯೋಜಕವಾಗಿದೆ. ಇದನ್ನು ದುರಸ್ತಿಪಡಿಸಿ, ಒಂದಷ್ಟು ಅಭಿವೃದ್ಧಿಪಡಿಸಿದರೆ, ಜನೋಪಯೋಗಿಯಾಗಲಿದೆ ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

Advertisement

ಈ ಸಮಾಜ ಮಂದಿರವನ್ನು ಬಸ್ರೂರಿನ ಪ.ಜಾತಿ ಹಾಗೂ ಪ.ಪಂಗಡದ ಜನರ ಕಾರ್ಯ ಚಟುವಟಿಕೆ ಗಳಿಗಾಗಿ ನಿರ್ಮಿಸಲಾಗಿತ್ತು. ಕೆಲವು ವರ್ಷಗಳಿಂದ ಇಲ್ಲಿ ಯಾವುದೇ ಚಟುವಟಿಕೆ ನಡೆಯದೇ ಪ್ರಸ್ತುತ ಪಾಳುಬಿದ್ದಿದೆ. ಇದು ಬಸ್ರೂರು ಗ್ರಾ.ಪಂ. ವ್ಯಾಪ್ತಿಗೆ ಒಳಪಟ್ಟಿದ್ದು, 36 ಸೆಂಟ್ಸ್‌ ವಿಸ್ತೀರ್ಣದಲ್ಲಿದೆ.

ಅಂಬೇಡ್ಕರ್‌ ಭವನ ಮಾಡಿ
ಬಸ್ರೂರು ಗ್ರಾ.ಪಂ.ನಲ್ಲಿ ಅಂಬೇಡ್ಕರ್‌ ಭವನ ಇಲ್ಲದಿರುವ ಹಿನ್ನೆಲೆಯಲ್ಲಿ ಇದನ್ನೇ ದುರಸ್ತಿಯೊಂದಿಗೆ, ಅಭಿವೃದ್ಧಿಪಡಿಸಿ, ಅಂಬೇಡ್ಕರ್‌ ಭವನವನ್ನಾಗಿ ನಿರ್ಮಾಣ ಮಾಡಬೇಕೆಂದು ದಲಿತ ಸಂಘರ್ಷ ಸಮಿತಿ (ಭೀಮಘರ್ಜನೆ)ಯ ಮಾಜಿ ಸಂಚಾಲಕ ಗೋವಿಂದ ಮಾರ್ಗೋಳಿ ಆಗ್ರಹಿಸಿದ್ದಾರೆ. ಈ ಬಗ್ಗೆ ಈಗಾಗಲೇ ಸಮಿತಿಯ ವತಿಯಿಂದ ಜಿಲ್ಲಾಧಿಕಾರಿ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಹಾಗೂ ಬಸ್ರೂರು ಗ್ರಾ.ಪಂ.ಗೆ ಮನವಿ ಸಲ್ಲಿಸಿದ್ದರೂ ಯಾವುದೇ ಉತ್ತರ ಬಂದಿಲ್ಲ.

ತಾಲೂಕು ಸಮಾಜ ಕಲ್ಯಾಣಾಧಿಕಾರಿ ಒಮ್ಮೆ ಇಲ್ಲಿಗೆ ಭೇಟಿ ನೀಡಿದ್ದು ಬಿಟ್ಟರೆ ಯಾವ ಕಾರ್ಯವೂ ನಡೆದಿಲ್ಲ. 10-15 ವರ್ಷಗಳಿಂದ ಈ ಬಗ್ಗೆ ಮನವಿ ಸಲ್ಲಿಸುತ್ತಿದ್ದಾರಾದರೂ ಏನೂ ಪ್ರಯೋಜನ ವಾಗಿಲ್ಲ. ಈ ಹಿಂದೆ ಶಾಸಕರಿಂದ 1.50 ಲಕ್ಷ ರೂ. ಹಾಗೂ ಗ್ರಾ.ಪಂ.ನಿಂದ 50 ಸಾವಿರ ರೂ. ಹಣ ಮಂಜೂರಾಗಿದ್ದರೂ ಅಭಿವೃದ್ಧಿ ಮಾತ್ರ ಆಗಿಲ್ಲ.

ಮನವಿ ಸಲ್ಲಿಸಲಾಗಿದೆ
ಅಂಬೇಡ್ಕರ್‌ ಭವನವನ್ನಾಗಿ ನಿರ್ಮಿಸಿ ಎಂಬ ಜನರ ಆಶಯಕ್ಕೆ ಅನುಗುಣವಾಗಿ ಸಮಾಜ ಕಲ್ಯಾಣಾಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಆದರೆ ಈ ಕಟ್ಟಡದ ಒಂದು ಬದಿ ರಾ.ಹೆ.ಗೆ ತಗಲಿದ್ದು, ಸರ್ವೇ ಮಾಡಲಾಗಿದೆ. ಸರ್ವೇ ವರದಿಯನ್ನು ಸಮಾಜ ಕಲ್ಯಾಣಾಧಿಕಾರಿಗಳು ಪರಿಶೀಲಿಸಿ ಕ್ರಮ ತೆಗೆದು ಕೊಳ್ಳುತ್ತಾರೆ.
– ಚಂದ್ರ ಬಿಲ್ಲವ, ಪಿಡಿಒ, ಬಸ್ರೂರು ಗ್ರಾ.ಪಂ.

Advertisement

-ದಯಾನಂದ ಬಳ್ಕೂರು 

Advertisement

Udayavani is now on Telegram. Click here to join our channel and stay updated with the latest news.

Next