ಮದುವೆ ಬಳಿಕ ನಟಿ ಪ್ರಿಯಾಮಣಿ ಮಾತಿಗೆ ಸಿಕ್ಕಿರಲಿಲ್ಲ. ಅವರು ಸಿನಿಮಾ ಮಾಡಲ್ಲ ಅಂತ ಎಲ್ಲೂ ಹೇಳಿರಲಿಲ್ಲ. ಮದುವೆಯಾದ ಮೂರೇ ದಿನಕ್ಕೆ ಅವರು ಮಲಯಾಳಂ ಸಿನಿಮಾದಲ್ಲಿ ನಟಿಸಿ ಬಂದಿದ್ದಾರೆ. ಅಷ್ಟೇ ಅಲ್ಲ, ಈಗ ಕನ್ನಡದಲ್ಲೂ ನಟಿಸುತ್ತಿದ್ದಾರೆ. “ನನ್ನ ಪ್ರಕಾರ’ ಅವರು ಮದುವೆಯ ಬಳಿಕ ನಟಿಸುತ್ತಿರುವ ಚಿತ್ರ. ಮದುವೆ ನಂತರದ ತಮ್ಮ ಸಿನಿ ಕೆರಿಯರ್ ಕುರಿತು ಪ್ರಿಯಾಮಣಿ ಮಾತನಾಡಿದ್ದಾರೆ.
ನಾನು ಮದುವೆಯಾದ ಮೂರೇ ದಿನಕ್ಕೆ ಸಿನಿಮಾದಲ್ಲಿ ಕೆಲಸ ಮಾಡಿದ್ದೇನೆ. ಮಲಯಾಳಂನ “ಆಶಿಕ್ ಬಂದ ದಿವಸಂ’ ಚಿತ್ರದಲ್ಲಿ ನಟಿಸಿದ್ದೆ. ಮದುವೆ ನಂತರ ಕನ್ನಡದ “ನನ್ನ ಪ್ರಕಾರ’ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಮದುವೆಯ ಬಳಿಕ ಮೂರು ಚಿತ್ರ ಒಪ್ಪಿಕೊಂಡಿದ್ದೇನೆ. ಕನ್ನಡ, ಮಲಯಾಳಂ ಹಾಗು ಹಿಂದಿಯಲ್ಲೊಂದು ಓಕೆಯಾಗಿದೆ. ಈ ಪೈಕಿ ಮಲಯಾಳಂ ಚಿತ್ರ ಮುಗಿದಿದೆ, ಈಗ ಕನ್ನಡ ಶುರುವಾಗುತ್ತಿದೆ.
ಇಷ್ಟರಲ್ಲೇ ಹಿಂದಿ ಸಿನಿಮಾ ಬಗ್ಗೆ ಹೇಳುತ್ತೇನೆ. ಮದುವೆ ನಂತರ ಒಳ್ಳೆಯ ಕಥೆ, ಪಾತ್ರ ಹುಡುಕಿ ಬರುತ್ತಿವೆ. ಹಾಗಂತ ಮೊದಲು ಬರುತ್ತಿರಲಿಲ್ಲವಂತಲ್ಲ. ಈಗ ನನಗೆ ಸರಿಹೊಂದುವ ಕಥೆ ಬರುತ್ತಿರುವುದರಿಂದ ಮಾಡುತ್ತಿದ್ದೇನೆ. ನಿಜ ಹೇಳುವುದಾದರೆ, ಈಗ ಸಿಕ್ಕಿರುವ ಪಾತ್ರದಲ್ಲಿ ತೂಕವಿದೆ. ಹಾಗಾಗಿ ನಾನು ಖುಷಿಯಾಗಿದ್ದೇನೆ. ಮದುವೆ ನಂತರ ನಾನು ಐದು ಕಥೆ ಬಿಟ್ಟಿದ್ದೇನೆ. ಕಾರಣ, ಇಷ್ಟವಾಗದ ಕಥೆ, ಪಾತ್ರ.
ನನಗೆ ಕಥೆ ಇಷ್ಟವಾದಲ್ಲಿ ಮಾತ್ರ ಒಪ್ಪುತ್ತೇನೆ. ಇಲ್ಲವಾದರೆ ಇಲ್ಲ. ಈಗ ಕಥೆಯಲ್ಲಿ ಗಟ್ಟಿತನವಿರಬೇಕು. ಎಲ್ಲೂ ವಲ್ಗರ್ ಅನಿಸಬಾರದು. ಕಿಸ್ಸಿಂಗ್, ಹಗ್ಗಿಂಗ್ ಬಗ್ಗೆಯೂ ಎಚ್ಚರವಹಿಸಿಕೊಂಡು ಪಾತ್ರ ಒಪ್ಪಬೇಕು. ನಮ್ಮ ಪತಿ ಹಾಗು ಕುಟುಂಬದ ಸಹಕಾರ ಇರದಿದ್ದರೆ ನಾನು ಸಿನಿಮಾ ಮಾಡುತ್ತಿರಲಿಲ್ಲ. ಅವರ ಸಹಕಾರದಿಂದಲೇ ನಾನು ಕೆಲಸ ಮಾಡುತ್ತಿದ್ದೇನೆ. ಒಳ್ಳೆಯ ಕಥೆ ಬಂದರೆ ಸಿನಿಮಾ ಮಾಡು ಅಂತ ಹೇಳಿದ್ದಾರೆ.
ಇರುವುದು ಒಂದೇ ಲೈಫು. ಇರುವ ಈ ಲೈಫ್ನಲ್ಲಿ ನನಗೆ ಇಷ್ಟ ಬಂದಂತೆ ಇರಬೇಕು ಎಂಬುದು ಮನೆಯವರ ಆಸೆ. ಹಾಗಾಗಿ ಮಾಡುತ್ತಿದ್ದೇನೆ. ನಾನು ಇಷ್ಟು ವರ್ಷಗಳಿಂದಲೂ ಸಿನಿಮಾ ರಂಗದಲ್ಲಿದ್ದೇನೆ. ತಕ್ಷಣವೇ ಬಿಡುವುದಕ್ಕೆ ಆಗೋದಿಲ್ಲ. ಮದುವೆ ಬಳಿಕ ಕೆಲವರು ಬ್ರೇಕ್ ತಗೊಂಡಿದ್ದಾರೆ. ಆಮೇಲೆ ಬಂದಿದ್ದಾರೆ. ನಾನು ಮದುವೆಯಾದ ಮೂರೇ ದಿನಕ್ಕೆ ಸಿನಿಮಾ ಮಾಡಿದ್ದೇನೆ ಅಂದರೆ, ಅದು ನನಗಿರುವ ಸಿನಿಮಾ ಪ್ರೀತಿಯಷ್ಟೇ.
ನಾನು ಬ್ರೇಕ್ ತೆಗೆದುಕೊಳ್ಳದೆ ಕೆಲಸ ಮಾಡ್ತೀನಿ. ಇಷ್ಟು ಬೇಗ ಸಿನಿಮಾಗೆ ಟಾಟಾ ಹೇಳ್ಳೋದಿಲ್ಲ. ಮದುವೆಯಾಗಿದ್ದೇನೆ ಅಂತ ಕಥೆಗಳು ಬರುವುದು ನಿಂತಿಲ್ಲ. ಈಗಲೂ ತೆಲುಗು, ಕನ್ನಡ, ಮಲಯಾಳಂನಿಂದ ಕಥೆ ಬರುತ್ತಿವೆ. ಒಳ್ಳೆಯ ಕಥೆ ಇದ್ದರೆ ಆಯ್ಕೆ ಮಾಡಿಕೊಂಡು ಸಿನಿಮಾ ಮಾಡ್ತೀನಿ. ನಾನಿನ್ನೂ ಇಂಡಸ್ಟ್ರಿಯಲ್ಲಿರಬೇಕು. ನನ್ನ ಪತಿ ಹಿಂದಿಯಲ್ಲೊಂದು ಸಿನಿಮಾ ಮಾಡಿದ್ದಾರೆ. ಮುಂದೆ ಪ್ರೊಡಕ್ಷನ್ ಮಾಡುವ ಯೋಚನೆ ಇದೆ. ಆದರೆ, ಯಾವಾಗ, ಏನು ಎಂಬುದು ಗೊತ್ತಿಲ್ಲ. ಇಬ್ಬರು ಚರ್ಚಿಸಬೇಕಿದೆ.