ಬೆಂಗಳೂರು: “ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ಬೇಕಾದರೆ ನ.2ರಿಂದ ನಡೆಯಲಿರುವ ಬಿಜೆಪಿಯ ನವ ಕರ್ನಾಟಕ ಪರಿವರ್ತನಾ ರಥಯಾತ್ರೆ ಯಶಸ್ವಿಗೊಳಿಸಿ’ ಎಂಬ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅಲಿಖೀತ ನಿರ್ದೇಶನ ಅಭ್ಯರ್ಥಿ ಆಕಾಂಕ್ಷಿಗಳಲ್ಲಿ ತಳಮಳ ಹುಟ್ಟಿಸಿದೆ.
ಕಳೆದ ಜೂನ್‌ನಲ್ಲಿ ವಿಸ್ತಾರಕ್ ಯೋಜನೆ ರೂಪಿಸಿದ್ದ ಬಿಜೆಪಿ, ಅಭ್ಯರ್ಥಿ ಆಕಾಂಕ್ಷಿಗಳಿಗೆ ತಮ್ಮ ಕ್ಷೇತ್ರವಲ್ಲದೆ, ಅಕ್ಕಪಕ್ಕದ ಕ್ಷೇತ್ರಗಳಲ್ಲೂ ಪ್ರಭಾವ ಹೊಂದಿರುವವರಿಗೆ ಟಿಕೆಟ್ ಹಂಚಿಕೆ ವೇಳೆ ಆದ್ಯತೆ ನೀಡುವುದಾಗಿ ಹೇಳಿತ್ತು. ಆ ಮೂಲಕ ಪಕ್ಕದ ಕ್ಷೇತ್ರದಲ್ಲಿ 15 ದಿನ ಬೂತ್ ಮಟ್ಟದಲ್ಲಿ ಪಕ್ಷ ಸಂಘಟಿಸುವ ಟಾಸ್ಕ್ ನೀಡಿ ಕೆಲಸ ತೆಗೆದುಕೊಂಡಿತ್ತು. ಇದೀಗ ನವ ಕರ್ನಾಟಕ ಪರಿವರ್ತನಾ ಯಾತ್ರೆ ಯಶಸ್ವಿಗೊಳಿಸುವ ಹೊಸ ಜವಾಬ್ದಾರಿ ವಹಿಸಿದೆ. ಈ ಜವಾಬ್ದಾರಿ ಅಭ್ಯರ್ಥಿ ಆಕಾಂಕ್ಷಿಗಳಲ್ಲಿ ತಳಮಳ ಸೃಷ್ಟಿಸಿದೆ. ಕಾರಣ, ಇನ್ನೊಂದೆಡೆ ಪ್ರಮುಖ ಮುಖಂಡರ ಕ್ಷೇತ್ರಗಳನ್ನು ಹೊರತುಪಡಿಸಿದ ಕ್ಷೇತ್ರಗಳಲ್ಲಿ ಮುಂದಿನ ಅಭ್ಯರ್ಥಿ ಯಾರಾಗಬಹುದು ಎಂಬ ಕನಿಷ್ಠ ಮುನ್ಸೂಚನೆಯೂ ಸಿಗದಿರುವುದು. ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ತಮ್ಮದೇ ಮೂಲಗಳಿಂದ ಸಮೀಕ್ಷೆ ನಡೆಸುತ್ತಿದ್ದರೆ, ಬಿಎಸ್‌ವೈ ಕೂಡ ತಮ್ಮದೇ ಮೂಲಗಳಿಂದ ಪಟ್ಟಿ ತರಿಸಿಕೊಳ್ಳುತ್ತಿದ್ದಾರೆ. ಈ ಎರಡನ್ನೂ ಸಮೀಕರಿಸಿ ಅಂತಿಮವಾಗಿ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲು ಬಿಜೆಪಿ ತೀರ್ಮಾನಿಸಿದೆ.
ತಡವಾದರೆ ಕಷ್ಟ: ಆಕಾಂಕ್ಷಿಗಳ ಆತಂಕವೆಂದರೆ, ಪರಿವರ್ತನಾ ಯಾತ್ರೆ ಪೂರ್ಣಗೊಳ್ಳುವುದು 2018ರ ಜ.28ಕ್ಕೆ. ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ಚುನಾವಣೆ ನಡೆಯಲಿದ್ದು, ತಮಗೆ ಯಾವುದೇ ಮುನ್ಸೂಚನೆ ಸಿಗದೇ ಇದ್ದರೆ ಕ್ಷೇತ್ರದಲ್ಲಿ ಸಿದ್ಧತೆ ಕೈಗೊಳ್ಳುವುದು ಹೇಗೆಂಬುದು. ಈಗಾಗಲೇ ಈ ವಿಚಾರವನ್ನು ಕೆಲವು ಆಕಾಂಕ್ಷಿಗಳು ಬಿಎಸ್‌ವೈ ಗಮನಕ್ಕೆ ತಂದಿದ್ದಾರೆ. ಆದರೆ, ಈ ಕುರಿತು ಅಮಿತ್ ಶಾ ಅವರೇ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ತಮ್ಮ ಕೈಯಲ್ಲೇನೂ ಇಲ್ಲ. ಇಲ್ಲಿ ಯಾರು ಅಭ್ಯರ್ಥಿ ಎನ್ನುವುದಕ್ಕಿಂತ ಪಕ್ಷ ಗೆಲ್ಲಿಸುವುದು ಮುಖ್ಯ. ಆ ನಿಟ್ಟಿನಲ್ಲಿ ಕೆಲಸ ಮಾಡಿ ಎಂದು ಹೇಳಿ ಕಳುಹಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಆಕಾಂಕ್ಷಿಗಳು ಟಿಕೆಟ್‌ಗಾಗಿ ಪ್ರಯತ್ನಿಸುವುದೋ ಅಥವಾ ಯಾತ್ರೆಗಾಗಿ ಓಡಾಟ ನಡೆಸುವುದೋ ಎಂಬ ಇಕ್ಕಟ್ಟಿನಲ್ಲಿ ಆಕಾಂಕ್ಷಿಗಳು ಸಿಲುಕಿದ್ದಾರೆ.
ಬಿಎಸ್‌ವೈ ಮೇಲೆಯೇ ನಂಬಿಕೆ: ಯಾರು ಅಭ್ಯರ್ಥಿಗಳು ಎಂಬುದನ್ನು ಸಮೀಕ್ಷೆ ಆಧರಿಸಿ ನಿರ್ಧರಿಸಲಾಗುವುದು, ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಅಮಿತ್ ಶಾ ಅವರೇ ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಹೇಳುವ ಮೂಲಕ ಟಿಕೆಟ್‌ಗಾಗಿ ನಡೆಯುವ ಲಾಬಿ, ಒತ್ತಡಗಳಿಂದ ಪಾರಾಗಲು ಬಿಎಸ್‌ವೈ ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರಾದರೂ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುವ ಸಂದರ್ಭದಲ್ಲಿ ಅಮಿತ್ ಶಾ ರಾಜ್ಯಾಧ್ಯಕ್ಷರ ಅಭಿಪ್ರಾಯ ಕೇಳಿಯೇ ಕೇಳುತ್ತಾರೆ ಎಂಬುದು ಆಕಾಂಕ್ಷಿಗಳ ನಂಬಿಕೆ. ಹೀಗಾಗಿ ಬಿಎಸ್‌ವೈ ಮನಗೆಲ್ಲಲು ಶತಪ್ರಯತ್ನ ಮಾಡುತ್ತಿದ್ದಾರೆ. ಈ ಕುರಿತಂತೆ ಪ್ರತಿಕ್ರಿಯಿಸಿರುವ ಆಕಾಂಕ್ಷಿಯೊಬ್ಬರು ಜಗದೀಶ್ ಶೆಟ್ಟರ್, ಕೆ.ಎಸ್. ಈಶ್ವರಪ್ಪ, ಆರ್.ಅಶೋಕ್, ಸಿ.ಟಿ.ರವಿ, ಅರವಿಂದ ಲಿಂಬಾವಳಿ ಮತ್ತಿತರ ಹಲವು ಪ್ರಮುಖರನ್ನು ಹೊರತುಪಡಿಸಿ ಬಹುತೇಕ ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಅಮಿತ್ ಶಾ ಅವರು ಪಕ್ಷದ ರಾಜ್ಯಾಧ್ಯಕ್ಷರ ಅಭಿಪ್ರಾಯಕ್ಕೆ ಮನ್ನಣೆ ನೀಡುತ್ತಾರೆ. ಸ್ಥಳೀಯ ಪರಿಸ್ಥಿತಿಗಳು ಗೊತ್ತಿರುವುದರಿಂದ ಯಡಿಯೂರಪ್ಪ ಅವರು ಅಭ್ಯರ್ಥಿ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸುವುದು ಖಚಿತ. ಹೀಗಾಗಿ ಅವರ ಮನಗೆಲ್ಲಲು ಪ್ರಯತ್ನಿಸುತ್ತಿದ್ದೇನೆ ಎಂದು ಹೇಳುತ್ತಾರೆ.
ಅ.2ರಿಂದ ಹಮ್ಮಿಕೊಳ್ಳುತ್ತಿರುವ ನವಕರ್ನಾಟಕ ಪರಿವರ್ತನಾ ರಥಯಾತ್ರೆಯನ್ನು ಸವಾಲಾಗಿ ಸ್ವೀಕರಿಸಿರುವ ಯಡಿಯೂರಪ್ಪ, ಯಾತ್ರೆ ವೇಳೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಬಹಿರಂಗ ಸಮಾವೇಶ ನಡೆಸುತ್ತಿದ್ದು, ಹೆಚ್ಚು ಜನ ಸೇರಿಸಬೇಕೆಂದು ಈಗಾಗಲೇ ಸೂಚನೆ ನೀಡಿದ್ದಾರೆ.
ಯಾತ್ರೆ ಮಧ್ಯೆಯೇ ಅಭ್ಯರ್ಥಿ ಅಂತಿಮ ಸಾಧ್ಯತೆ
ಇದೆಲ್ಲದರ ಮಧ್ಯೆ ಯಡಿಯೂರಪ್ಪ ಅವರು ಕೈಗೊಂಡಿರುವ ನವಕರ್ನಾಟಕ ಪರಿವರ್ತನಾ ರಥಯಾತ್ರೆ ಮಧ್ಯೆಯೇ ಅಭ್ಯರ್ಥಿಗಳ ಪಟ್ಟಿ ಬಹುತೇಕ ಅಂತಿಮಗೊಳ್ಳಬಹುದು. ಇದನ್ನು ಅಧಿಕೃತವಾಗಿ ಪ್ರಕಟಿಸದಿದ್ದರೂ ಬಹುತೇಕರಿಗೆ ಮುನ್ಸೂಚನೆ ನೀಡಬಹುದು ಎಂದು ಹೇಳಲಾಗುತ್ತಿದೆ. ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಫೆಬ್ರವರಿಯಿಂದಲೇ ಅಭ್ಯರ್ಥಿಗಳು ಕೆಲಸ ಆರಂಭಿಸಬೇಕಾಗುತ್ತದೆ. ಹೀಗಾಗಿ ಯಾತ್ರೆ ಮಧ್ಯೆ ಪ್ರತಿ ವಾರಕ್ಕೆ ಒಂದು ದಿನ ವಿಶ್ರಾಂತಿ ಇದ್ದು, ಈ ಅವಧಿಯಲ್ಲಿ ಅಮಿತ್ ಶಾ ಅವರೊಂದಿಗೆ ಯಡಿಯೂರಪ್ಪ ಸಮಾಲೋಚಿಸಿ ಅಭ್ಯರ್ಥಿಗಳ ಆಯ್ಕೆ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದು. ಯಾತ್ರೆ ಪೂರ್ಣಗೊಳ್ಳುವ ಮುನ್ನ ಬಹುತೇಕ ಕ್ಷೇತ್ರಗಳ ಪಟ್ಟಿ ಅಂತಿಮಗೊಳ್ಳಬಹುದು ಎನ್ನಲಾಗಿದೆ.