ನವಲಗುಂದ: ಪುರಸಭೆ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಸಂಬಂಧ ಸೋಮವಾರ ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ಮಧ್ಯ ಜಟಾಪಟಿ ನಡೆಯಿತು.
ಸಭೆ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯರು ಏದ್ದು ನಿದ್ದು, ನಾವು ಬೆಂಬಲ ನೀಡಿದ್ದರಿಂದ ಪುರಸಭೆ ಉಪಾಧ್ಯಕ್ಷ ಸ್ಥಾನ ಅಲಂಕರಿಸಿದ್ದೀರಿ. ಆದ್ದರಿಂದ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಸಭೆ ನಡೆಸಬೇಕೆಂದು ಪಟ್ಟು ಹಿಡಿದರು.
ಅಧ್ಯಕ್ಷ ಮಂಜುನಾಥ ಜಾಧವ ಮಾತನಾಡಿ, ಪಟ್ಟಣದ ಅಭಿವೃದ್ಧಿಗಾಗಿ ಎಲ್ಲ ಸದಸ್ಯರು ಹಾಜರಾಗಿ ಚರ್ಚೆಯಲ್ಲಿ ಪಾಲ್ಗೊಳ್ಳುವುದನ್ನು ಬಿಟ್ಟು ಈ ರೀತಿ ರಾಜಕೀಯ ಮಾಡುತ್ತಿರುವುದು ಸರಿಯಲ್ಲ. ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕಾಗಿ ಕಾಂಗ್ರೆಸ್ ಯಾವ ಬಿಜೆಪಿ ಸದಸ್ಯರ ಮನೆಗೂ ಬಂದು ಬೆಂಬಲ ಕೊಡಿ ಎಂದು ಕೇಳಿಲ್ಲ. ಜೆಡಿಎಸ್ ಅಧಿಕಾರ ಗದ್ದುಗೆ ಹಿಡಿಯಬಾರದೆಂದು ತಾವೇ ಬೇಷರತ್ ಬೆಂಬಲ ನೀಡಿದ್ದು, ಈಗ ರಾಜಕೀಯ ಮಾಡುತ್ತಿದ್ದೀರಿ ಎಂದು ಮಾತಿಗಿಳಿದರು.
ಬಿಜೆಪಿ ಸದಸ್ಯ ಮಹಾಂತೇಶ ಕಲಾಲ ಹಾಗೂ ಶರಣಪ್ಪ ಹಕ್ಕರಕಿ ಮಾತನಾಡಿ, ಬಿಜೆಪಿ ಬೆಂಬಲ ಒಪ್ಪಂದದಂತೆ ಅಧ್ಯಕ್ಷ-ಉಪಾಧ್ಯಕ್ಷರಾಗಿದ್ದು ರಾಜೀನಾಮೆ ನೀಡಿ ಸಭೆ ನಡೆಸಬೇಕೆಂದು ಪಟ್ಟು ಹಿಡಿದು ಕುಳಿತರು.
ಇದೇ ವಿಷಯವಾಗಿ ಎರಡೂ ಪಕ್ಷದ ಸದಸ್ಯರಲ್ಲಿ ಮಾತಿಗೆ ಮಾತು ಬೆಳೆದು ಗದ್ದಲದ ವಾತಾವರಣ ಸೃಷ್ಟಿಯಾಯಿತು. ಬಿಜೆಪಿ ಸದಸ್ಯರು ಸಭೆಗೆ ಹಾಜರಾದರೂ ಸಹಿ ಮಾಡಿರಲಿಲ್ಲ.
ಇದನ್ನು ಗಮನಿಸಿದ ಕೆಲವು ಕಾಂಗ್ರೆಸ್ ಸದಸ್ಯರು, ಸಹಿ ಮಾಡದೇ ಇದ್ದರೆ ಸಂಜೆವರೆಗೂ ಇಲ್ಲಿಯೇ ಇರಬೇಕಾಗುತ್ತದೆ. ಸಹಿ ಮಾಡದ ಸದಸ್ಯರನ್ನು ಗೈರೆಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತೆಗೆದುಕೊಂಡು ಬರಲು ತಿಳಿಸಿದರು. ಆಗ ಸಭೆಯಲ್ಲಿದ್ದ ಬಿಜೆಪಿ ಸದಸ್ಯರೆಲ್ಲರೂ ಸಹಿ ಮಾಡಿ ಸಭೆ ಮುಗಿಯುವವರೆಗೂ ಇದ್ದರು. ಇನ್ನು ಎರಡೂ ಪಕ್ಷದವರ ವಾಗ್ವಾದದಿಂದಾಗಿ ಮುಖ್ಯಾಧಿಕಾರಿ ವೀರೇಶ ಹಸಬಿ ಹಾಗೂ ಅಧಿಕಾರಿಗಳು ದಿಕ್ಕು ತೋಚದಂತಾಗಿದ್ದರು.