ಕಾಬೂಲ್: ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದ ಬಳಿಕ ತಾಲಿಬಾನ್ ಉಗ್ರರ ಅಟ್ಟಹಾಸ ಮುಂದುವರಿದಿದ್ದು, ಇದೀಗ ಅಫ್ಘಾನಿಸ್ತಾನದ ನಾಗರಿಕರು ದೇಶ ಬಿಟ್ಟು ತೆರಳದಂತೆ ಕಟ್ಟಪ್ಪಣೆ ಹೊರಡಿಸಿದೆ. ಆ ನಿಟ್ಟಿನಲ್ಲಿ ಕಾಬೂಲ್ ವಿಮಾನ ನಿಲ್ದಾಣಕ್ಕೆ ಹೋಗದಂತೆ ತಡೆಯೊಡ್ಡುತ್ತಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ತಾಲಿಬಾನ್‌ಗೆ ಚೀನ ನೆರವು ಘೋಷಣೆ!
ಕಾಬೂಲ್ ವಿಮಾನ ನಿಲ್ದಾಣದಿಂದ ವಿದೇಶಿ ಪ್ರಜೆಗಳು ತೆರಳಬಹುದಾಗಿದೆ ಎಂದು ತಾಲಿಬಾನ್ ಉಗ್ರ ಸಂಘಟನೆಯ ವಕ್ತಾರ ಜಬೀವುಲ್ಲಾ ಮುಜಾಹಿದ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದು, ಅಫ್ಘಾನಿಸ್ತಾನ್ ಪ್ರಜೆಗಳು ದೇಶ ಬಿಟ್ಟು ತೆರಳದಂತೆ ತಡೆಯೊಡ್ಡಲು ವಿಮಾನ ನಿಲ್ದಾಣಕ್ಕೆ ಹೋಗುವ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಆದರೆ ವಿದೇಶಿ ಪ್ರಜೆಗಳು ಈ ರಸ್ತೆಯಲ್ಲಿ ತೆರಳಬಹುದಾಗಿದೆ ಎಂದು ತಿಳಿಸಿರುವುದಾಗಿ ಸಿಎನ್ ಎನ್ ವರದಿ ವಿವರಿಸಿದೆ.
ಅಫ್ಘಾನ್ ನಾಗರಿಕರಿಗೆ ತಾಲಿಬಾನ್ ನಿಂದ ಯಾವುದೇ ತೊಂದರೆ ಎದುರಾಗುವುದಿಲ್ಲ ಎಂದು ಭರವಸೆ ನೀಡಿರುವುದಾಗಿ ಜಬೀವುಲ್ಲಾ ತಿಳಿಸಿದ್ದು, ಯಾವುದೇ ಕಾರಣಕ್ಕೂ ವೈದ್ಯರು, ಉನ್ನತ ವ್ಯಾಸಂಗ ಮಾಡುವವರು ದೇಶ ಬಿಟ್ಟು ತೆರಳದಂತೆ ಎಚ್ಚರಿಕೆ ನೀಡಿರುವುದಾಗಿ ವರದಿ ಹೇಳಿದೆ.
ಈಗಾಗಲೇ ಅಮೆರಿಕ ಘೋಷಿಸಿರುವಂತೆ ಆಗಸ್ಟ್ 31ರೊಳಗೆ ಕಾಬೂಲ್ ವಿಮಾನ ನಿಲ್ದಾಣದಿಂದ ಜನರನ್ನು ಏರ್ ಲಿಫ್ಟ್ ಮಾಡಬೇಕು, ಅಲ್ಲದೇ ಸೇನೆಯನ್ನು ಸಂಪೂರ್ಣವಾಗಿ ಹಿಂಪಡೆಯಬೇಕು. ಅಷ್ಟೇ ಅಲ್ಲ ಅಂತಿಮ ಗಡುವನ್ನು ವಿಸ್ತರಿಸುವುದಿಲ್ಲ ಎಂದು ತಾಲಿಬಾನ್ ತಿಳಿಸಿದೆ.
ಆಗಸ್ಟ್ 31ರ ಬಳಿಕ ಜನರ ಸ್ಥಳಾಂತರಕ್ಕೆ ನಾವು ಅವಕಾಶ ನೀಡುವುದಿಲ್ಲ. ವೈದ್ಯರು, ತಂತ್ರಜ್ಞರು ದೇಶದಲ್ಲಿಯೇ ಇದ್ದು ತಮ್ಮ ಕೆಲಸವನ್ನು ಮುಂದುವರಿಸಬೇಕು ಎಂದು ತಾಲಿಬಾನ್ ಕಟ್ಟಪ್ಪಣೆ ಹೊರಡಿಸಿದೆ.