Advertisement

ಅಫ್ಘಾನ್ ನಲ್ಲಿ ಭಾರತೀಯರ ಅಪಹರಣ ಸಾಧ್ಯತೆ? ತಾಲಿಬಾನ್ ಉಗ್ರರಿಂದ ಬಲವಂತದ ವಿವಾಹ!

01:47 PM Aug 13, 2021 | Team Udayavani |

ಯುದ್ಧ ಗ್ರಸ್ಥ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಬಂಡುಕೋರರು ವಿಧ್ವಂಸಕ ಕೃತ್ಯಗಳನ್ನು ಮುಂದುವರೆಸುವ ಮೂಲಕ ಒಂದೊಂದೇ ಪ್ರಾಂತೀಯ ರಾಜಧಾನಿಗಳನ್ನು ತಮ್ಮ ವಶಕ್ಕೆ ಪಡೆಯುತ್ತಿದ್ದಾರೆ. ಏತನ್ಮಧ್ಯೆ ಅತೀ ದೊಡ್ಡ ನಗರವಾದ ಕಂದಹಾರ್, ಲಷ್ಕರ್ ಘಾ ನಗರವನ್ನು ತನ್ನ ಹಿಡಿತಕ್ಕೆ ಪಡೆದಿದೆ ಎಂದು ವರದಿ ತಿಳಿಸಿದೆ.

Advertisement

ಕಂದಹಾರ್ ಮತ್ತು ಲಷ್ಕರ್ ಘಾ ನಗರಗಳನ್ನು ತಾಲಿಬಾನ್ ಬಂಡುಕೋರರು ತಮ್ಮ ವಶಕ್ಕೆ ಪಡೆದ ನಂತರ ಅವಿವಾಹಿತ ಯುವತಿಯರು ತಾಲಿಬಾನ್ ಉಗ್ರರನ್ನು ಮದುವೆಯಾಗುವಂತೆ ಬಲವಂತಪಡಿಸುವ ಮೂಲಕ ಲೈಂಗಿಕ ಹಿಂಸಾಚಾರಕ್ಕೆ ಇಳಿದಿರುವುದಾಗಿ ಮಾನವ ಹಕ್ಕು ಸಂಘಟನೆ ಆರೋಪಿಸಿದೆ.

ತಾಲಿಬಾನ್ ಬಂಡುಕೋರರು ದಕ್ಷಿಣದ ಪ್ರಮುಖ ನಗರವಾದ ಲಷ್ಕರ್ ಘಾ ಪ್ರದೇಶವನ್ನು ವಶಕ್ಕೆ ಪಡೆದಿರುವುದಾಗಿ ಅಫ್ಘಾನಿಸ್ತಾನದ ಹಿರಿಯ ಭದ್ರತಾ ಅಧಿಕಾರಿಯೊಬ್ಬರು ಎಎಫ್ ಪಿಗೆ ತಿಳಿಸಿದ್ದಾರೆ. ಉಗ್ರರು ನಗರವನ್ನು ವಶಕ್ಕೆ ಪಡೆದ ನಂತರ ಸೈನಿಕರು ಮತ್ತು ಸರ್ಕಾರಿ ಅಧಿಕಾರಿಗಳನ್ನು ನಗರದಿಂದ ಹೊರ ಕಳುಹಿಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ.

ಭಾರತೀಯ ಪ್ರಜೆಗಳ ಅಪಹರಣ ಸಾಧ್ಯತೆ?

Advertisement

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸದ ನಡುವೆ ಭಾರತ ಕೂಡಾ ಕಳವಳ ವ್ಯಕ್ತಪಡಿಸಿದ್ದು, ಅಫ್ಘಾನಿಸ್ತಾನದಲ್ಲಿ ಅಂದಾಜು 1,500 ಮಂದಿ ಭಾರತೀಯ ಪ್ರಜೆಗಳಿದ್ದಾರೆ. ಅಲ್ಲದೇ ಭಾರತೀಯ ಪ್ರಜೆಗಳ ಅಪಹರಣ ಸಾಧ್ಯತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಕೂಡಲೇ ಭಾರತೀಯ ಪ್ರಜೆಗಳು ವಾಣಿಜ್ಯ (ಕಮರ್ಷಿಯಲ್) ವಿಮಾನದಲ್ಲಿ ತಾಯ್ನಾಡಿಗೆ ವಾಪಸ್ ಆಗುವಂತೆ ಕೇಂದ್ರ ಸರ್ಕಾರ ಮನವಿ ಮಾಡಿಕೊಂಡಿದೆ. ಈಗಾಗಲೇ ಕಾಬೂಲ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಈ ಬಗ್ಗೆ ಕಾರ್ಯ ಪ್ರವೃತ್ತವಾಗಿದೆ ಎಂದು ತಿಳಿಸಿದೆ.

ಕಳೆದ ಹತ್ತು ದಿನಗಳಲ್ಲಿ ತಾಲಿಬಾನ್ ಬಂಡುಕೋರರು ಕಂದಹಾರ್ ಸೇರಿದಂತೆ ಬಹುತೇಕ ಪ್ರಾಂತೀಯ ರಾಜಧಾನಿಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿವೆ. ಅಫ್ಘಾನ್ ಸರ್ಕಾರ ದೇಶದ ಬಹುತೇಕ ಭಾಗಗಳಲ್ಲಿನ ಹಿಡಿತವನ್ನು ಕಳೆದುಕೊಂಡಿದೆ. ಏತನ್ಮಧ್ಯೆ ಅಮೆರಿಕದ ನಡೆ ಅಚ್ಚರಿಗೆ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಅಮೆರಿಕವು ಊಹಿಸಿರದಷ್ಟು ವೇಗದಲ್ಲಿ ತಾಲಿಬಾನ್‌ ಉಗ್ರರು ಅಫ್ಘಾನ್‌ನ ಮೂರನೇ ಎರಡರಷ್ಟು ಭಾಗದಲ್ಲಿ ಹಿಡಿತ ಸಾಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಗುರುವಾರ ಪ್ರತಿಕ್ರಿಯಿಸಿರುವ ಶ್ವೇತಭವನ, “ಉಗ್ರರನ್ನು ಎದುರುಹಾಕಿಕೊಂಡು ಹೋರಾಡುವ ರಾಜಕೀಯ ಇಚ್ಛಾಶಕ್ತಿ ಇದೆಯೋ ಇಲ್ಲವೋ ಎಂಬುದನ್ನು ಅಫ್ಘಾನ್‌ ನಾಯಕತ್ವವೇ ನಿರ್ಧರಿಸಬೇಕು’ ಎಂದು ಹೇಳಿದೆ. ಅಷ್ಟೇ ಅಲ್ಲ, ಪರಿಸ್ಥಿತಿ ನೋಡಿದರೆ ಕಾಬೂಲ್‌ನ ಪತನವನ್ನು ತಪ್ಪಿಸಲು ಸಾಧ್ಯವೇ ಇಲ್ಲ ಎಂದೂ ಪೆಂಟಗನ್‌ನ ಮುಖ್ಯ ವಕ್ತಾರ ಜಾನ್‌ ಕಿರ್ಬಿ ಹೇಳಿದ್ದಾರೆ. ಈ ಮೂಲಕ ನಮಗೂ ಅಫ್ಘಾನ್‌ಗೂ ಸಂಬಂಧವೇ ಇಲ್ಲ ಎಂಬ ಸುಳಿವನ್ನು ಅಮೆರಿಕ ನೀಡಿದೆ. ಅಮೆರಿಕ ತಮ್ಮ ನೆರವಿಗೆ ಬರಲಿದೆ ಎಂದು ಕಾಯುತ್ತಿರುವ ಅಫ್ಘಾನ್‌ ಸಕಾರಕ್ಕೆ ಇದು ದೊಡ್ಡ ಹಿನ್ನಡೆ ಉಂಟು ಮಾಡಿದೆ.

ಅಫ್ಘಾನಿಸ್ತಾನದಲ್ಲಿನ ಸೇನಾಪಡೆಯನ್ನು ವಾಪಸ್ ಕರೆಯಿಸಿಕೊಂಡ ಪ್ರಕ್ರಿಯೆಗೆ ಟೀಕೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಅಮೆರಿಕ ವಿದೇಶಾಂಗ ಇಲಾಖೆಯ ವಕ್ತಾರ ನೆಡ್ ಪ್ರೈಸ್ ಶುಕ್ರವಾರ(ಆಗಸ್ಟ್ 13) ಸುದ್ದಿಗಾರರ ಜತೆ ಮಾತನಾಡುತ್ತ, ಇದು ಸೇನೆಯನ್ನು ಸಂಪೂರ್ಣ ತ್ಯಜಿಸುತ್ತೇವೆ ಅಂತಲ್ಲ, ಅಥವಾ ಸಂಪೂರ್ಣವಾಗಿ ಹಿಂತೆಗೆದುಕೊಳ್ಳುತ್ತೇವೆ ಎಂದರ್ಥವಲ್ಲ ಎಂದು ತಿಳಿಸಿದ್ದಾರೆ.

ಮುಂದಿನ 24ರಿಂದ 48 ಗಂಟೆಯೊಳಗೆ ಕಾಬೂಲ್ ಗೆ ಅಮೆರಿಕ 3,000 ಯೋಧರನ್ನು ಕಳುಹಿಸಲಿದೆ. ಆದರೆ ನಮ್ಮ ಸೇನೆಯನ್ನು ತಾಲಿಬಾನ್ ವಿರುದ್ಧ ದಾಳಿ ನಡೆಸಲು ಬಳಸುತ್ತಿಲ್ಲ ಎಂದು ಹೇಳುವ ಮೂಲಕ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಹೇಳಿಕೆಯನ್ನು ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next