ಪೀಲೀಭೀತ್/ಚಂಡೀಗಢ: ಇತ್ತೀಚೆಗೆ ಪಂಜಾಬ್‌ನ ಗುರುದಾಸಪುರ್‌ನಲ್ಲಿ ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಶಂಕಿತ ಖಲಿಸ್ಥಾನಿ ಉಗ್ರರನ್ನು ಸೋಮವಾರ ಉತ್ತರ ಪ್ರದೇಶದ ಪೀಲೀಭೀತ್‌ನಲ್ಲಿ ಎನ್‌ಕೌಂಟರ್ ಮಾಡಲಾಗಿದೆ.
ಉತ್ತರ ಪ್ರದೇಶ ಮತ್ತು ಪಂಜಾಬ್ ಪೊಲೀಸರು ಜಂಟಿಯಾಗಿ ಈ ಕಾರ್ಯಾಚರಣೆ ಕೈಗೊಂಡಿದ್ದರು. ಇದು ಪಾಕಿಸ್ಥಾನ ಪ್ರಾಯೋಜಿತ ಖಲಿಸ್ಥಾನ್ ಜಿಂದಾಬಾದ್ ಫೋರ್ಸ್ ವಿರುದ್ಧ ನಡೆದ ಅತೀ ದೊಡ್ಡ ಕಾರ್ಯಾಚರಣೆಯಾಗಿದೆ ಎಂದು ಪಂಜಾಬ್ ಪೊಲೀಸ್ ಮಹಾ ನಿರ್ದೇಶಕ ಗೌರವ್ ಯಾದವ್ ತಿಳಿಸಿದ್ದಾರೆ.
ಎನ್‌ಕೌಂಟರ್‌ನಲ್ಲಿ ಹತ್ಯೆಗೀಡಾದ ಶಂಕಿತ ಉಗ್ರರನ್ನು ಗುರ್ವಿಂದೇರ್ ಸಿಂಗ್ (25), ವಿರೇಂದೇರ್ ಸಿಂಗ್ ಅಲಿಯಾಸ್ ರವಿ (23) ಮತ್ತು ಜಸ್‌ಪ್ರೀತ್ ಸಿಂಗ್ ಅಲಿಯಾಸ್ ಪ್ರತಾಪ್ ಸಿಂಗ್ (18) ಎಂದು ಗುರುತಿಸಲಾಗಿದ್ದು, ಇವರೆಲ್ಲರೂ ಪಂಜಾಬ್‌ನ ಗುರುದಾಸಪುರ್ ನಿವಾಸಿಗಳಾಗಿದ್ದಾರೆ.
ಪೀಲೀಭೀತ್‌ನ ಪುರಾನಪುರ ಪ್ರದೇಶದಲ್ಲಿ ಉತ್ತರ ಪ್ರದೇಶ ಮತ್ತು ಪಂಜಾಬ್ ಪೊಲೀಸರು ಹಾಗೂ ಶಂಕಿತರ ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಈ ವೇಳೆ ಮೂವರು ಶಂಕಿತರಿಗೆ ತೀವ್ರ ಗಾಯಗಳಾಗಿದ್ದವು. ಅವರನ್ನು ಕೂಡಲೇ ಸ್ಥಳೀಯ ಪುರಾನಪುರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಬಳಿಕ ಅವರು ಮೃತರಾದರು ಎಂದು ಪೊಲೀಸರು ತಿಳಿಸಿದ್ದಾರೆ.
ಶಂಕಿತ ಖಲಿಸ್ಥಾನಿ ಉಗ್ರರ ಬಳಿ ಇದ್ದ ಎ.ಕೆ. 47 ರೈಫಲ್, ಎರಡು ಗ್ಲಾಕ್ ಪಿಸ್ತೂಲ್‌ಗಳು ಮತ್ತು ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶಂಕಿತ ಉಗ್ರರ ಹತ್ಯೆ ಬೆನ್ನಲ್ಲೇ ಇಡೀ ಉಗ್ರ ಜಾಲವನ್ನು ಭೇದಿಸುವ ಕುರಿತು ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.