Advertisement

ರಸ್ತೆ ಬದಿ ತ್ಯಾಜ್ಯ ರಾಶಿ ಬೀಳದಂತೆ ಕ್ರಮ ಕೈಗೊಳ್ಳಿ : ಪಿಡಿಒಗಳಿಗೆ ಜಿ.ಪಂ. ಸಿಇಒ ಸೂಚನೆ

12:02 AM May 16, 2024 | Team Udayavani |

ಮಂಗಳೂರು: ರಸ್ತೆ ಬದಿ, ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ರಾಶಿ ಹಾಕಿ ಬ್ಲ್ಯಾಕ್ ಸ್ಪಾಟ್‌ ನಿರ್ಮಾಣಗೊಂಡಿದ್ದು, ಅವುಗಳನ್ನು ತೆರವುಗೊಳಿಸುವತ್ತ ಸಂಬಂಧಪಟ್ಟ ಗ್ರಾಮ ಪಂಚಾಯತ್‌ ಕ್ರಮ ಕೈಗೊಳ್ಳಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ ಸಿಇಒ ಡಾ| ಆನಂದ್‌ ಕೆ. ಅವರು ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Advertisement

ನೀರುಮಾರ್ಗ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ದಿನದಿಂದ ದಿನಕ್ಕೆ ತ್ಯಾಜ್ಯ ರಾಶಿ ಹೆಚ್ಚುತ್ತಿರುವ ಬಗ್ಗೆ “ಉದಯವಾಣಿ’ಯ “ಸುದಿನ’ ಆವೃತ್ತಿಯಲ್ಲಿ ಮೇ 14ರಂದು ವರದಿ ಪ್ರಕಟಿಸಿತ್ತು. ಈ ವರದಿಯನ್ನು ಉಲ್ಲೇಖೀಸಿ ಸಿಇಒ ಅವರು, ರಸ್ತೆಬದಿ ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ಸುರಿಯಲಾಗಿರುವ ತ್ಯಾಜ್ಯವನ್ನು ಮಳೆಗಾಲ ಪ್ರಾರಂಭವಾಗುವ ಮುಂಚಿತವಾಗಿ ವಿಲೇವಾರಿ ಗೊಳಿಸಬೇಕಿದೆ. ಈ ಬಗ್ಗೆ ಕೈಗೊಂಡ ಕ್ರಮಗಳ ಕುರಿತು ಛಾಯಾಚಿತ್ರ ಸಹಿತ ವರದಿಯನ್ನು ಮೇ 20ರೊಳಗೆ ಕಚೇರಿಗೆ ಸಲ್ಲಿಸಬೇಕು ಎಂದು ಆದೇಶಿಸಿದ್ದಾರೆ.

ಶ್ರಮದಾನದ ಮೂಲಕ ಶುಚಿ
ಪ್ರತೀ ತಾಲೂಕಿನಲ್ಲಿ ಅ ಧಿಕವಾಗಿ ತ್ಯಾಜ್ಯ ಬೀಳುವ 5 ಗ್ರಾ.ಪಂ.ಗಳಲ್ಲಿ ಸೂಕ್ತ ಕ್ರಮಕ್ಕೆ ನಿರ್ದೇಶನ ನೀಡಲಾಗಿದೆ. ಗ್ರಾ.ಪಂ.ನ ಎಲ್ಲ ಭಾಗೀದಾರರು ಮತ್ತು ಸಾರ್ವಜನಿಕರನ್ನು ಶ್ರಮದಾನದಲ್ಲಿ ಭಾಗವಹಿಸಲು ಪ್ರೇರೇಪಿಸಬೇಕು. ಗ್ರಾ.ಪಂ. ವ್ಯಾಪ್ತಿಯಲ್ಲಿ ಕಸ ಬೀಳುವ ಎಲ್ಲ ಪ್ರದೇಶಗಳನ್ನು ಗುರುತಿಸಿ ಆ ಪ್ರದೇಶಗಳನ್ನು ಶುಚಿಗೊಳಿಸಿ, ಸುಂದರವಾಗಿಸಲು ಯೋಜನೆ ರೂಪಿಸಬೇಕು. ತ್ಯಾಜ್ಯ ಉತ್ಪಾದನೆಯಾಗುವ ಮನೆ ಮತ್ತು ವಾಣಿಜ್ಯ ಅಂಗಡಿಗಳ ಹಂತದಲ್ಲೇ ಹಸಿ ಮತ್ತು ಒಣ ತ್ಯಾಜ್ಯವನ್ನು ವಿಂಗಡಿಸಬೇಕು. ತ್ಯಾಜ್ಯ ಸಂಗ್ರಹಣೆ ಮಾಡಲು ಕ್ರಮ ಕೈಗೊಳ್ಳಬೇಕು. ಸ್ವಚ್ಛ ಸಂಕೀರ್ಣ ಘಟಕದಲ್ಲಿ ವ್ಯವಸ್ಥಿತವಾಗಿ ಮತ್ತು ವೈಜ್ಞಾನಿಕವಾಗಿ ನಿರ್ವಹಿಸಬೇಕಾಗಿದ್ದು, ಒಣಕಸವನ್ನು ವಿಂಗಡಿಸಿ ಎಂಆರ್‌ಎಫ್‌ ಘಟಕಕ್ಕೆ ರವಾನಿಸಲು ಶೇಖರಿಸಿ ಇಡಬೇಕು. ಗ್ರಾ.ಪಂ. ವ್ಯಾಪ್ತಿಯ ಸಾರ್ವಜನಿಕ ಪ್ರದೇಶಗಳಲ್ಲಿ ಮತ್ತು ರಸ್ತೆ ಬದಿಗಳಲ್ಲಿ ತ್ಯಾಜ್ಯ ಬೀಳದಂತೆ ಕ್ರಮ ಕೈಗೊಳ್ಳಬೇಕು. ಗ್ರಾ.ಪಂ. ವ್ಯಾಪ್ತಿಯಲ್ಲಿ ಸಾರ್ವಜನಿಕರು ಅಥವಾ ಗ್ರಾ.ಪಂ.ಗಳು ಸಂಗ್ರಹಿಸುವ ತ್ಯಾಜ್ಯವನ್ನು, ಸುಡುವುದಕ್ಕೆ ಮತ್ತು ಭೂಭರ್ತಿ ಮಾಡುವುಕ್ಕೆ ಅವಕಾಶ ನೀಡಬಾರದು. ಗ್ರಾ.ಪಂ. ವ್ಯಾಪ್ತಿಯಲ್ಲಿ ಸ್ವತ್ಛತೆಯ ಜಾಗೃತಿಯನ್ನು ಮೂಡಿಸುವ ಸಲುವಾಗಿ ಪ್ರತೀ ಗ್ರಾ.ಪಂ.ಗೆ ಒಂದು ಕಾಲೇಜು/ವಿದ್ಯಾಸಂಸ್ಥೆ/ಸರಕಾರೇತರ ಸಂಸ್ಥೆಯನ್ನು ಗೊತ್ತುಪಡಿಸಿ, ಅವುಗಳಿಗೆ ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳಡಿ ಗ್ರಾ.ಪಂ.ಗಳನ್ನು ದತ್ತು ನೀಡುವ ಮೂಲಕ ಆ ಸಂಸ್ಥೆಯ ವಿದ್ಯಾರ್ಥಿಗಳು/ ಸ್ವಯಂ ಸೇವಕರ ಮೂಲಕ ಶ್ರಮದಾನ ಮತ್ತು ಸಮುದಾಯಕ್ಕೆ ಅರಿವು ಮೂಡಿಸುವ ಸಲುವಾಗಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಉಲ್ಲೇಖ ಮಾಡಲಾಗಿದೆ.

45 ಗ್ರಾ.ಪಂ.ಗಳಲ್ಲಿ ಬ್ಲ್ಯಾಕ್‌ಸ್ಪಾಟ್‌: ದಕ್ಷಿಣ ಕನ್ನಡ ಜಿಲ್ಲೆಯ 9 ತಾಲೂಕು ವ್ಯಾಪ್ತಿಯ 45 ಗ್ರಾ.ಪಂ. ವ್ಯಾಪ್ತಿ ಬ್ಲ್ಯಾಕ್‌ಸ್ಪಾಟ್‌ ಪ್ರದೇಶ ಎಂದು ಗುರುತಿಸಲಾಗಿದೆ. ಬಂಟ್ವಾಳ ತಾಲೂಕಿನ ಕನ್ಯಾನ, ಸಜಿನ ಮುನ್ನೂರು, ಮಾಣಿ, ಪುದು, ನರಿಕೊಂಬು, ಬೆಳ್ತಂಗಡಿ ತಾಲೂಕಿನ ಮಾಲಾಡಿ, ಕುವೆಟ್ಟು, ತಣ್ಣೀರುಪಂತ, ಚಾರ್ಮಾಡಿ, ಉಜಿರೆ, ಕಡಬ ತಾಲೂಕಿನ ಸುಬ್ರಹ್ಮಣ್ಯ,ಶಿರಾಡಿ, ಆಲಂಕಾರು, ನೆಲ್ಯಾಡಿ, ಸವಣೂರು, ಮಂಗಳೂರು ತಾಲೂಕಿನ ಅಡ್ಯಾರು, ನೀರುಮಾರ್ಗ, ಗಂಜಿಮಠ, ಗುರುಪುರ, ಮೂಡುಶೆಡ್ಡೆ, ಮೂಡು ಬಿದಿರೆ ತಾಲೂಕಿನ ಪುತ್ತಿಗೆ, ಬೆಳುವಾಯಿ, ತೆಂಕಮಿಜಾರು, ಪಡುಮಾರ್ನಾಡು, ಕಲ್ಲಮುಂಡ್ಕೂರು, ಮೂಲ್ಕಿಯ ಹಳೆಯಂಗಡಿ, ಪಡು ಪಣಂಬೂರು, ಕೆಮ್ರಾಲ್‌, ಕಿಲ್ಪಾಡಿ, ಬಳ್ಕುಂಜೆ, ಪುತ್ತೂರು ತಾಲೂಕಿನ ಕಬಕ, ಆರ್ಯಾಪು, ಉಪ್ಪಿನಂಗಡಿ, ನೆಕ್ಕಿಲಾಡಿ, ಒಳಮೊಗರು, ಸುಳ್ಯ ತಾಲೂಕಿನ ಕನಕಮಜಲು, ಜಾಲ್ಸೂರು, ಸಂಪಾಜೆ, ಬೆಳ್ಳಾರೆ, ಆಲೆಟ್ಟಿ, ಉಳ್ಳಾಲ ತಾಲೂಕಿನ ಅಂಬ್ಲಿಮೊಗರು, ಕೊಣಾಜೆ, ಪಜೀರು, ಮಂಜನಾಡಿ, ಬೆಳ್ಮ ಗ್ರಾ. ಪಂ.ಗಳನ್ನು ಗುರುತು ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next