ಹೊಸದಿಲ್ಲಿ: ವಿಶ್ವದ ನಂಬರ್ ವನ್ ಆಟಗಾರ್ತಿ ತೈವಾನಿನ ತೈ ಟ್ಸು ವಿಂಗ್ ಅವರು ಸದ್ಯ ಸೈನಾ ನೆಹ್ವಾಲ್ ಪಾಲಿಗೆ ಸಿಂಹಸ್ವಪ್ನರಾಗಿರಬಹುದು. ಆದರೆ ಅವರು ಅಜೇಯರಲ್ಲ. ಸರಿಯಾದ ಸಮಯ ಬರಲಿ ಅವರನ್ನು ಸೋಲಿಸುವ ದೃಢ ವಿಶ್ವಾಸ ನನಗಿದೆ ಎಂದು ಭಾರತೀಯ ಶಟ್ಲರ್ ಸೈನಾ ನೆಹ್ವಾಲ್ ಹೇಳಿದ್ದಾರೆ.
ತೈ ಟ್ಸು ಕಳೆದ ವರ್ಷ ಐದು ಪ್ರಶಸ್ತಿ ಗೆದ್ದುಕೊಂಡಿದ್ದಾರೆ ಮತ್ತು ಸೈನಾ ಜತೆ ನಡೆದ 10 ಮುಖಾಮುಖೀಗಳಲ್ಲಿ ಟ್ಸು 9 ಬಾರಿ ಗೆಲುವು ಒಲಿಸಿಕೊಂಡಿದ್ದಾರೆ. ಇದರಲ್ಲಿ ಮೂರು ಹೋರಾಟ ತೀವ್ರ ಪೈಪೋಟಿಯಿಂದ ಸಾಗಿತ್ತು. ಎರಡು ದಿನಗಳ ಹಿಂದೆ ನಡೆದ ಇಂಡೋನೇಶ್ಯ ಮಾಸ್ಟರ್ ಕೂಟದ ಫೈನಲ್‌ನಲ್ಲೂ ಸೈನಾ ಅವರು ತೈವಾನಿನ ಆಟಗಾರ್ತಿಗೆ ಶರಣಾಗಿದ್ದರು. ಇದು ಸೈನಾರ ಸತತ ಏಳನೇ ಸೋಲು ಆಗಿದೆ.
ಕಳೆದ ವರ್ಷ ಅವರು ಗೆದ್ದ ಪ್ರಶಸ್ತಿಗಳನ್ನು ನೋಡಿದರೆ ಅವರೆದುರು ಕೇವಲ ಭಾರತೀಯರು ಮಾತ್ರ ಸೋತಿಲ್ಲ. ಉಳಿದವರೂ ಸೋತಿದ್ದಾರೆ. ಅವರೀಗ ವಿಶ್ವದ ಶ್ರೇಷ್ಠ ಆಟಗಾರ್ತಿ. ಆಟದ ಬಗ್ಗೆ ತೀವ್ರ ಗಮನ ನೀಡುವ ಅವರು ಸ್ಥಿರವಾದ ನಿರ್ವಹಣೆಯಿಂದ ಹೆಚ್ಚಿನ ಕೂಟಗಳಲ್ಲಿ ಫೈನಲಿಗೇರಿದ ಸಾಧನೆ ಮಾಡಿದ್ದಾರೆ. ಅವರ ಆಟದ ವೈಖರಿಯನ್ನು ನಾವು ಗಮನಿಸಬೇಕಾಗಿದೆ ಎಂದು ಸೈನಾ ತಿಳಿಸಿದರು.
ಅಗ್ರ 15 ಆಟಗಾರರು ಇದೀಗ ಉತ್ತಮ ನಿರ್ವಹಣೆ ನೀಡುತ್ತಿದ್ದಾರೆ. ಕೆಲವು ಆಟಗಾರರು ತೈ ಟ್ಸು ಜತೆ ತೀವ್ರ ಪೈಪೋಟಿ ನೀಡುತ್ತಿದ್ದಾರೆ. ಆದರೆ ಅವರನ್ನು ಸೋಲಿಸಲು ಸಾಧ್ಯವಿಲ್ಲ ಎಂದರ್ಥವಲ್ಲ. ಇಂಡೋನೇಶ್ಯದಲ್ಲಿ ಮೊದಲ ಸುತ್ತಿನಲ್ಲಿಯೇ ತೈ ಟ್ಸು ಸೋಲುವ ಸಾಧ್ಯತೆಯಿತ್ತು. ಮಿಚೆಲಿ ಲಿ ಅಮೋಘವಾಗಿ ಆಡಿದ್ದರು. ಹಾಗಾಗಿ ಅವರನ್ನು ಸೋಲಿಸಲು ನಾವು ಉಪಾಯ ಹುಡುಕಬೇಕಾಗಿದೆ. ಸಮಯ ಬರಲಿ ಅವರನ್ನು ಸೋಲಿಸುವೆ ಎಂದು ಸೈನಾ ವಿವರಿಸಿದರು.
ಒಲಿಂಪಿಕ್ ಬೆಳ್ಳಿ ವಿಜೇತೆ ಪಿವಿ ಸಿಂಧು ಕೂಡ ತೈ ಟ್ಸು ವಿರುದ್ಧ ಗೆಲುವು ಸಾಧಿಸಲು ಒದ್ದಾಡುತ್ತಿದ್ದಾರೆ. ಅವರಿಬ್ಬರು 11 ಬಾರಿ ಆಡಿದ್ದು ಸಿಂಧು 8 ಬಾರಿ ಸೋಲನ್ನು ಕಂಡಿದ್ದಾರೆ. 23ರ ಹರೆಯದ ತೈ ಟ್ಸು ಕಳೆದ ನಾಲ್ಕು ಹೋರಾಟಗಳಲ್ಲಿ ಸಿಂಧು ವಿರುದ್ಧ ಜಯ ಸಾಧಿಸಿದ್ದಾರೆ.
ಸೋಲಿನ ಕುರಿತು ಮಾತನಾಡುವಾಗ ತೈ ಟ್ಸು ಖಂಡಿತವಾಗಿಯೂ ಉತ್ತಮವಾಗಿ ಆಡುತ್ತಿದ್ದಾರೆ. ಆದರೆ ನಾನು ಪಿಬಿಎಲ್‌ನಲ್ಲಿ ಅವರನ್ನು ಒಮ್ಮೆ ಸೋಲಿಸಿದ್ದೇವೆ ಎಂದು ಸಿಂಧು ತಿಳಿಸಿದರು.