ಸಿಡ್ನಿ: ಬಾರ್ಡರ್ ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಭಾರತ ತಂಡವು 3-1 ಅಂತರದಿಂದ ಸೋಲು ಕಂಡಿದೆ. ಸಿಡ್ನಿಯಲ್ಲಿ ಪಂದ್ಯವನ್ನು ಸೋಲುವುದರ ಮೂಲಕ ಭಾರತವು ಬಿಜಿಟಿ ಸರಣಿಯನ್ನು ದಶಕದ ಬಳಿಕ ಕಳೆದುಕೊಂಡಿದೆ. 162 ರನ್ ಗುರಿ ಪಡೆದ ಆಸ್ಟ್ರೇಲಿಯಾ ತಂಡವು ನಾಲ್ಕು ವಿಕೆಟ್ ಕಳೆದುಕೊಂಡು ಜಯ ಸಾಧಿಸಿತು.
ರೋಹಿತ್ ಶರ್ಮಾ ಮತ್ತು ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ ಮೈದಾನದಲ್ಲಿ ನಾಯಕತ್ವ ಜವಾಬ್ದಾರಿ ಹೊತ್ತಿದ್ದ ವಿರಾಟ್ ಕೊಹ್ಲಿ (Virat Kohli) ಅವರು ಆಸ್ಟ್ರೇಲಿಯನ್ನರಿಗೆ ಸ್ಯಾಂಡ್ ಪೇಪರ್ ಹಗರಣದ (Sandpaper Case) ನೆನಪು ಮಾಡಿದರು. ಸಿಡ್ನಿಯಲ್ಲಿ ಭಾರತ ತಂಡವನ್ನು ಅಣಕವಾಡಿದ ಪ್ರೇಕ್ಷಕರನ್ನು ಸ್ಯಾಂಡ್ ಪೇಪರ್ ಹಗರಣದ ನೆನಪು ಮಾಡಿಸಿ ಬಾಯಿ ಮುಚ್ಚಿಸಿದರು.
ಆಸ್ಟ್ರೇಲಿಯನ್ ಕ್ರಿಕೆಟಿಗರಾದ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ಮತ್ತು ಕ್ಯಾಮರೂನ್ ಬ್ಯಾಂಕ್ರಾಫ್ಟ್ ಅವರು 2018 ರಲ್ಲಿ ‘ಸ್ಯಾಂಡ್ ಪೇಪರ್ ಹಗರಣ’ದಲ್ಲಿ ಭಾಗಿಯಾಗಿ ಎರಡು ವರ್ಷ ನಿಷೇಧಕ್ಕೆ ಒಳಗಾಗಿದ್ದರು. ಸಿಡ್ನಿ ಟೆಸ್ಟ್ನ 2 ನೇ ದಿನದ ಆಟದ ನಂತರ, ಕೆಲವು ಅಭಿಮಾನಿಗಳು ಭಾರತ ತಂಡವು ಇದೇ ರೀತಿ ಮಾಡುತ್ತಿದೆ ಎಂದು ಆರೋಪಿಸಿದ್ದರು. ಆಟಗಾರನ ಬೂಟುಗಳಿಂದ ಹೊರಬರುವ ಕಾಗದದ/ಬಟ್ಟೆಯ ತುಣುಕುಗಳ ವೀಡಿಯೊಗಳು ಹೊರಹೊಮ್ಮಿದ ನಂತರ ಇದೇ ರೀತಿಯ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ನಡೆದಿತ್ತು.
ಮೂರನೇ ದಿನದಾಟದಲ್ಲಿ ಸಿಡ್ನಿ ಪ್ರೇಕ್ಷಕರು ಇದೇ ವಿಚಾರವಾಗಿ ಅಣಕವಾಡಿದಾಗ ವಿರಾಟ್ ಕೊಹ್ಲಿ ಮೈದಾನದಲ್ಲಿಯೇ ಉತ್ತರ ನೀಡಿದ್ದಾರೆ.
ತನ್ನ ಪ್ಯಾಂಟ್ ಕಿಸೆಯನ್ನು ಹೊರಕ್ಕೆಳೆದು ಅದರಲ್ಲಿ ಏನೂ ಇಲ್ಲ ಎಂದು ತೋರಿಸಿದರು. ಅಲ್ಲದೆ ನನ್ನಲ್ಲಿ ಏನೂ ಇಲ್ಲ, ನಾವು ಸ್ಯಾಂಡ್ ಪೇಪರ್ ಬಳಕೆ ಮಾಡುವುದಿಲ್ಲ ಎಂದು ಸಂಜ್ಞೆಯ ಮೂಲಕ ತೋರಿಸಿದರು. ಇಂತಹ ಕೃತ್ಯಗಳ ವಿಚಾರದಲ್ಲಿ ಭಾರತೀಯರು ಆಸ್ಟ್ರೇಲಿಯನ್ನರಂತೆ ಅಲ್ಲ ಎಂದು ಸನ್ನೆ ಮಾಡಿದರು.
2018ರ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಆಸ್ಟ್ರೇಲಿಯಾ ತಂಡದ ಕ್ಯಾಮರೂನ್ ಬ್ಯಾಂಕ್ರಾಫ್ಟ್ ಅವರು ಸ್ಯಾಂಡ್ ಪೇಪರ್ ಬಳಸಿ ಚೆಂಡನ್ನು ವಿರೂಪ ಮಾಡಿ ಕಳ್ಳಾಟವಾಡಿದ್ದರು. ಇದನ್ನು ಕ್ಯಾಮರಾ ಸೆರೆ ಹಿಡಿದಿದ್ದರು. ಬಳಿಕ ಆಗ ನಾಯಕರಾಗಿದ್ದ ಸ್ಟೀವ್ ಸ್ಮಿತ್, ಉಪ ನಾಯಕ ಡೇವಿಡ್ ವಾರ್ನರ್ ಮತ್ತು ಕ್ಯಾಮರೂನ್ ಬ್ಯಾಂಕ್ರಾಫ್ಟ್ ರನ್ನು ಎರಡು ವರ್ಷಗಳ ಕಾಲ ಕ್ರಿಕೆಟ್ ಆಸ್ಟ್ರೇಲಿಯಾ ಬ್ಯಾನ್ ಮಾಡಿತ್ತು.