ಅಬುಧಾಬಿ: ಶ್ರೀಲಂಕಾ ಎದುರಿನ ಗುರುವಾರದ ಮಾಡು-ಮಡಿ ಪಂದ್ಯದಲ್ಲಿ 20 ರನ್ ಅಂತರದ ಸೋಲನುಭವಿಸಿದ ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸ್ ಕೂಟದಿಂದ ಹೊರಬಿದ್ದಿದೆ.
ಈಗಾಗಲೇ ಟೂರ್ನಿಯಿಂದ ನಿರ್ಗಮಿಸಿರುವ ಶ್ರೀಲಂಕಾ ತನ್ನ ಕೊನೆಯ ಸೂಪರ್-12 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿ 3 ವಿಕೆಟಿಗೆ 189 ರನ್ ಪೇರಿಸಿತು. ಜವಾಬಿತ್ತ ವೆಸ್ಟ್ ಇಂಡೀಸ್ 8 ವಿಕೆಟಿಗೆ 169 ರನ್ ಮಾಡಿ ಕೂಟಕ್ಕೆ ಗುಡ್‌ಬೈ ಹೇಳಿತು.
ನಿಕೋಲಸ್ ಪೂರಣ್ ಮತ್ತು ಶಿಮ್ರನ್ ಹೆಟ್‌ಮೈರ್ ಹೊರತುಪಡಿಸಿದರೆ ವಿಂಡೀಸಿನ ಉಳಿದ ಯಾವುದೇ ಆಟಗಾರರು ಲಂಕಾ ದಾಳಿಯನ್ನು ತಡೆದು ನಿಲ್ಲಲಿಲ್ಲ. ಕೊನೆಯ ಹಂತದಲ್ಲಿ ಸಿಡಿದು ನಿಂತ ಹೆಟ್‌ಮೈರ್ 54 ಎಸೆತಗಳಿಂದ 81 ರನ್ ಬಾರಿಸಿ ಅಜೇಯರಾಗಿ ಉಳಿದರು (8 ಬೌಂಡರಿ, 4 ಸಿಕ್ಸರ್).
ಪ್ರಚಂಡ ಫಾರ್ಮ್ನಲ್ಲಿರುವ ಚರಿತ ಅಸಲಂಕ ಮತ್ತು ಆರಂಭಕಾರ ಪಾಥುಮ್ ನಿಸ್ಸಂಕ ಅರ್ಧ ಶತಕ ಲಂಕಾ ಸರದಿಯ ಆಕರ್ಷಣೆಯಾಗಿತ್ತು. ವನ್‌ಡೌನ್‌ನಲ್ಲಿ ಬ್ಯಾಟ್ ಹಿಡಿದು ಬಂದ ಅಸಲಂಕ ಗರಿಷ್ಠ 68 ರನ್ ಹೊಡೆದು ಮಿಂಚಿದರು. 41 ಎಸೆತಗಳ ಈ ರಂಜನೀಯ ಆಟದಲ್ಲಿ 8 ಬೌಂಡರಿ, ಒಂದು ಸಿಕ್ಸರ್ ಒಳಗೊಂಡಿತ್ತು. ನಿಸ್ಸಂಕ 41 ಎಸೆತ ಎದುರಿಸಿ 51 ರನ್ ಬಾರಿಸಿದರು (5 ಬೌಂಡರಿ). ಈ ಜೋಡಿಯಿಂದ ದ್ವಿತೀಯ ವಿಕೆಟಿಗೆ 10.1 ಓವರ್‌ಗಳಿಂದ 91 ರನ್ ಹರಿದು ಬಂತು.
ಸಂಕ್ಷಿಪ್ತ ಸ್ಕೋರ್: ಶ್ರೀಲಂಕಾ-3 ವಿಕೆಟಿಗೆ 189 (ಅಸಲಂಕ 68, ನಿಸ್ಸಂಕ 51, ಶಣಕ ಔಟಾಗದೆ 25, ಪೆರೆರ 29, ರಸೆಲ್ 33ಕ್ಕೆ 2). ವೆಸ್ಟ್ ಇಂಡೀಸ್-8 ವಿಕೆಟಿಗೆ 169 (ಹೆಟ್‌ಮೈರ್ ಅಜೇಯ 81 , ಪೂರಣ್ 46, ಹಸರಂಗ 19ಕ್ಕೆ 2, ಫೆರ್ನಾಂಡೊ 24ಕ್ಕೆ 2, ಕರುಣರತ್ನೆ 43ಕ್ಕೆ 2).