Advertisement

India vs South Africa T20I: ಇಮ್ಮಡಿ ಉತ್ಸಾಹದಲ್ಲಿ ಭಾರತ

10:42 PM Nov 09, 2024 | Team Udayavani |

ಜೆಬೆರಾ: ಬಲಿಷ್ಠ ತಂಡವಾದ ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ಯುವ ತಂಡಕ್ಕೆ ಅಗ್ನಿಪರೀಕ್ಷೆ ಎದುರಾಗಲಿದೆ ಎಂಬ ನಿರೀಕ್ಷೆ ಹುಸಿಯಾಗಿದೆ. ಡರ್ಬನ್‌ನ ಕಿಂಗ್ಸ್‌ಮೀಡ್‌ ಮೈದಾನದಲ್ಲಿ ಸೂರ್ಯಕುಮಾರ್‌ ಯಾದವ್‌  ಪಡೆ ಸರ್ವಾಂಗೀಣ ಪ್ರದರ್ಶನದ ಮೂಲಕ ಹರಿಣಗಳನ್ನು ಬೇಟೆಯಾಡಿದೆ. ಆರಂಭಿಕ ಪಂದ್ಯದಲ್ಲೇ ಒಲಿದ 61 ರನ್ನುಗಳ ಗೆಲುವು ಸಹಜವಾಗಿಯೇ ಭಾರತದ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿದೆ. ಇದು ರವಿವಾರದ 2ನೇ ಪಂದ್ಯಕ್ಕೆ ಸ್ಫೂರ್ತಿ ತುಂಬುವುದರಲ್ಲಿ ಅನುಮಾನವಿಲ್ಲ.

Advertisement

ಇದು 4 ಪಂದ್ಯಗಳ ಮುಖಾಮುಖಿಯಾದ್ದರಿಂದ, ಸರಣಿ ವಶ ಪಡಿಸಿಕೊಳ್ಳಲು 3 ಪಂದ್ಯಗಳನ್ನು ಗೆಲ್ಲಲೇಬೇಕಿದೆ. ಆದರೆ 2 ಪಂದ್ಯ ಗೆದ್ದರೆ ಸರಣಿ ಸೋಲಿನ ಕಂಟಕ ಎದುರಾಗದು. ಈ ನಿಟ್ಟಿನಲ್ಲಿ ಭಾರತ ರವಿವಾರದ ಮುಖಾಮುಖಿಯನ್ನೂ ಗೆದ್ದು “ಸೇಫ್ ಝೋನ್‌’ನಲ್ಲಿ ಉಳಿಯುವುದು ಮುಖ್ಯ.

ಸಂಜು ಅಬ್ಬರದ ಆಟ:

ಡರ್ಬನ್‌ನ ಬೌನ್ಸಿ ಟ್ರ್ಯಾಕ್‌ ಮೇಲೆ ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ ಆತಿಥೇಯರ ವೇಗಕ್ಕೆ ತತ್ತರಿಸೀತು ಎಂಬ ಭಯ ಕಾಡಿದ್ದು ಸಹಜ. ಆದರೆ ಸಂಜು ಸ್ಯಾಮ್ಸನ್‌ ಸಿಡಿದು ನಿಂತು ಆತಿಥೇಯರ ಬೌಲಿಂಗ್‌ ಸಮತೋಲನವನ್ನೇ ತಪ್ಪಿಸಿದರು. 50 ಎಸೆತಗಳಿಂದ 107 ರನ್‌ ಸಿಡಿಸಿ ಭಾರತದ ಮೊತ್ತವನ್ನು ಇನ್ನೂರರಾಚೆ ವಿಸ್ತರಿಸುವಲ್ಲಿ ಯಶಸ್ವಿಯಾದರು.

ಬೌಲಿಂಗ್‌ನಲ್ಲೂ ಭಾರತ ಮಿಂಚಿನ ದಾಳಿ ಸಂಘಟಿಸಿತು. ಸ್ಪಿನ್ನರ್‌ಗಳಾದ ವರುಣ್‌ ಚಕ್ರವರ್ತಿ, ರವಿ ಬಿಷ್ಣೋಯಿ ಅವರ ಎಸೆತಗಳನ್ನು ನಿಭಾಯಿಸಲಾಗದೆ ದಕ್ಷಿಣ ಆಫ್ರಿಕಾ ಚಡಪಡಿಸಿತು. ಮಾರ್ಕ್‌ರಮ್‌, ಸ್ಟಬ್ಸ್, ಕ್ಲಾಸೆನ್‌, ಮಿಲ್ಲರ್‌ ಅವರಂಥ ಬಿಗ್‌ ಹಿಟ್ಟರ್‌ಗಳನ್ನು ಹೊಂದಿಯೂ 17.5 ಓವರ್‌ಗಳಲ್ಲಿ 141ಕ್ಕೆ ಕುಸಿದದ್ದು ಅಚ್ಚರಿಯೇ ಸರಿ.

Advertisement

ಬೇಕಿದೆ ಮತ್ತದೇ ಆಟ…

ದ್ವಿತೀಯ ಪಂದ್ಯದಲ್ಲೂ ಹರಿಣಗಳಿಗೆ ತಲೆ ಎತ್ತಿ ನಿಲ್ಲದಂತೆ ಮಾಡಲು ಭಾರತದ ಪ್ರಯತ್ನ ಮುಂದುವರಿಯಬೇಕಿದೆ. ಇದಕ್ಕೆ ಮೊದಲ ಪಂದ್ಯದ ಆಟವನ್ನೇ ಪುನರಾವರ್ತಿಸುವುದು ಮುಖ್ಯ. ಬ್ಯಾಟಿಂಗ್‌ ವಿಷಯಕ್ಕೆ ಬರುವುದಾದರೆ, ಸ್ಯಾಮ್ಸನ್‌ ಮಾತ್ರವಲ್ಲ, ಉಳಿದವರ ಬ್ಯಾಟ್‌ನಿಂದಲೂ ರನ್‌ ಹರಿದು ಬರುವುದು ಮುಖ್ಯ. ಅಭಿಷೇಕ್‌ ಶರ್ಮ, ಸೂರ್ಯಕುಮಾರ್‌, ಪಾಂಡ್ಯ ಕ್ರೀಸ್‌ ಆಕ್ರಮಿಸಿಕೊಳ್ಳಬೇಕಾದ ಅಗತ್ಯವಿದೆ.

ಡರ್ಬನ್‌ನಲ್ಲಿ ಭಾರತ 8ಕ್ಕೆ 202 ರನ್‌ ರಾಶಿ ಹಾಕಿತೇನೋ ನಿಜ, ಆದರೆ ಅಂತಿಮ 6 ಓವರ್‌ಗಳಲ್ಲಿ ಬಂದದ್ದು 40 ರನ್‌ ಮಾತ್ರ ಎಂಬುದನ್ನು ಮರೆಯುವಂತಿಲ್ಲ. ಮಧ್ಯಮ ಹಾಗೂ ಕೆಳ ಕ್ರಮಾಂಕದ ಬ್ಯಾಟರ್‌ಗಳ ಪ್ರಯತ್ನ ಸಾಲದು ಎಂಬುದನ್ನು ಇದು ಸೂಚಿಸುತ್ತದೆ.

ದಕ್ಷಿಣ ಆಫ್ರಿಕಾ 4 ಮಂದಿ ಪ್ರಮುಖ ಆಟಗಾರರ ಸೇವೆಯಿಂದ ವಂಚಿತವಾಗಿದೆ. ಇವರೆಂದರೆ ಕ್ವಿಂಟನ್‌ ಡಿ ಕಾಕ್‌, ಕಾಗಿಸೊ ರಬಾಡ, ಆ್ಯನ್ರಿಚ್‌ ನೋರ್ಜೆ ಮತ್ತು ತಬ್ರೇಜ್‌ ಶಮ್ಸಿ. ಆದರೂ ಆತಿಥೇಯ ಪಡೆ ಭಾರತಕ್ಕಿಂತ ಹೆಚ್ಚು ಅನುಭವಿ ಎಂಬುದರಲ್ಲಿ ಅನುಮಾನವಿಲ್ಲ. ಅದೀಗ ಗಾಯಗೊಂಡ ಹುಲಿ!

Advertisement

Udayavani is now on Telegram. Click here to join our channel and stay updated with the latest news.

Next