Advertisement

WI vs ENG: 219 ರನ್‌ ಬೆನ್ನಟ್ಟಿ ಗೆದ್ದ ವಿಂಡೀಸ್‌

10:44 PM Nov 17, 2024 | Team Udayavani |

ಗ್ರಾಸ್‌ ಐಲೆಟ್‌ (ಸೇಂಟ್‌ ಲೂಸಿಯ): ಇಂಗ್ಲೆಂಡ್‌ ವಿರುದ್ಧದ ಟಿ20 ಸರಣಿ ಕಳೆದು ಕೊಂಡ ಬಳಿಕ ಲಯಕ್ಕೆ ಮರಳಿದ ವೆಸ್ಟ್‌ ಇಂಡೀಸ್‌, 4ನೇ ಮುಖಾಮುಖಿಯಲ್ಲಿ ದಾಖಲೆ ಚೇಸಿಂಗ್‌ ನಡೆಸಿ ಗೆದ್ದು ಬಂದಿದೆ.

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ಇಂಗ್ಲೆಂಡ್‌ 5 ವಿಕೆಟಿಗೆ 218 ರನ್‌ ಪೇರಿಸಿದರೆ, ವೆಸ್ಟ್‌ ಇಂಡೀಸ್‌ 19 ಓವರ್‌ಗಳಲ್ಲಿ 5 ವಿಕೆಟಿಗೆ 221 ರನ್‌ ಬಾರಿಸಿತು. ಇದು ಇಂಗ್ಲೆಂಡ್‌ ವಿರುದ್ಧ ವಿಂಡೀಸ್‌ ಸಾಧಿಸಿದ ಅತ್ಯಧಿಕ ಮೊತ್ತದ ಯಶಸ್ವಿ ಚೇಸಿಂಗ್‌ ಆಗಿದೆ.
32 ಸಿಕ್ಸರ್‌ ಮತ್ತು 25 ಬೌಂಡರಿ ಸಿಡಿಯಲ್ಪಟ್ಟಿದ್ದು ಈ ಪಂದ್ಯದ ಬ್ಯಾಟಿಂಗ್‌ ಅಬ್ಬರಕ್ಕೆ ಸಾಕ್ಷಿ.

ಎರಡೂ ಕಡೆಗಳಿಂದ ತಲಾ 16 ಸಿಕ್ಸರ್‌ಗಳು ಬಾರಿಸಲ್ಪಟ್ಟವು. ಚೇಸಿಂಗ್‌ ವೇಳೆ ವಿಂಡೀಸ್‌ ಆರಂಭಿಕರಾದ ಎವಿನ್‌ ಲೂಯಿಸ್‌ ಮತ್ತು ಶೈ ಹೋಪ್‌ 9.1 ಓವರ್‌ಗಳಲ್ಲಿ 136 ರನ್‌ ಪೇರಿಸಿ ಪ್ರಚಂಡ ಆರಂಭ ಒದಗಿಸಿದರು. ಆದರೆ 10ನೇ ಓವರ್‌ನ ಸತತ 3 ಎಸೆತಗಳಲ್ಲಿ ಲೂಯಿಸ್‌, ಹೋಪ್‌ ಮತ್ತು ನಿಕೋಲಸ್‌ ಪೂರಣ್‌ ಔಟಾದಾಗ ವಿಂಡೀಸ್‌ ಮೇಲೆ ಒಮ್ಮೆಲೇ ಒತ್ತಡ ಬಿತ್ತು. ಇವರಲ್ಲಿ ಹೋಪ್‌ ರನೌಟಾದರೆ, ಲೂಯಿಸ್‌ ಮತ್ತು ಪೂರಣ್‌ ಲೆಗ್‌ಸ್ಪಿನ್ನರ್‌ ರೆಹಾನ್‌ ಅಹ್ಮದ್‌ ಅವರಿಗೆ ವಿಕೆಟ್‌ ಒಪ್ಪಿಸಿದರು.
ಬಳಿಕ ನಾಯಕ ಪೊವೆಲ್‌ (38) ಮತ್ತು ಶಫೇನ್‌ ರುದರ್‌ಫೋರ್ಡ್‌ (ಔಟಾಗದೆ 29) ಸೇರಿಕೊಂಡು ತಂಡವನ್ನು ಯಶಸ್ವಿಯಾಗಿ ದಡ ಮುಟ್ಟಿಸಿದರು. ಲೂಯಿಸ್‌ 31 ಎಸೆತಗಳಿಂದ 68 ರನ್‌ (4 ಬೌಂಡರಿ, 7 ಸಿಕ್ಸರ್‌) ಹೊಡೆದರೆ, ಹೋಪ್‌ ಕೇವಲ 24 ಎಸೆತಗಳಿಂದ 54 ರನ್‌ ಸಿಡಿಸಿ (7 ಬೌಂಡರಿ, 3 ಸಿಕ್ಸರ್‌) ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಇಂಗ್ಲೆಂಡ್‌ ಪರ ಫಿಲ್‌ ಸಾಲ್ಟ್ 55, ಜೇಕಬ್‌ ಬೆಥೆಲ್‌ ಔಟಾಗದೆ 62 ರನ್‌ ಹೊಡೆದರು (32 ಎಸೆತ, 4 ಬೌಂಡರಿ, 5 ಸಿಕ್ಸರ್‌). ಮೊದಲ 3 ಪಂದ್ಯಗಳನ್ನು ಇಂಗ್ಲೆಂಡ್‌ 8 ವಿಕೆಟ್‌, 7 ವಿಕೆಟ್‌, 3 ವಿಕೆಟ್‌ಗಳಿಂದ ಜಯಿಸಿತ್ತು.

ಸಂಕ್ಷಿಪ್ತ ಸ್ಕೋರ್‌: ಇಂಗ್ಲೆಂಡ್‌-5 ವಿಕೆಟಿಗೆ 218 (ಬೆಥೆಲ್‌ ಔಟಾಗದೆ 62, ಸಾಲ್ಟ್ 55, ಬಟ್ಲರ್‌ 38, ಮೋಟಿ 40ಕ್ಕೆ 2). ವೆಸ್ಟ್‌ ಇಂಡೀಸ್‌-19 ಓವರ್‌ಗಳಲ್ಲಿ 5 ವಿಕೆಟಿಗೆ 221 (ಲೂಯಿಸ್‌ 68, ಹೋಪ್‌ 54, ಪೊವೆಲ್‌ 38, ರೆಹಾನ್‌ ಅಹ್ಮದ್‌ 43ಕ್ಕೆ 3). ಪಂದ್ಯಶ್ರೇಷ್ಠ: ಶೈ ಹೋಪ್‌.

Advertisement
Advertisement

Udayavani is now on Telegram. Click here to join our channel and stay updated with the latest news.

Next