Advertisement
ರುಥರ್‌ಫೋರ್ಡ್ ಅವರ ಅವಿಸ್ಮರಣೀಯ ಆಟದಿಂದಾಗಿ ವೆಸ್ಟ್‌ಇಂಡೀಸ್ ತಂಡವು 9 ವಿಕೆಟಿಗೆ 149 ರನ್ನುಗಳ ಸವಾಲೆಸೆಯುವ ಮೊತ್ತ ಪೇರಿಸುವಲ್ಲಿ ಯಶಸ್ವಿಯಾಯಿತು. ಇದಕ್ಕುತ್ತರವಾಗಿ ಅಲ್ಜಾರಿ ಜೊಸೆಫ್ ಅವರ ದಾಳಿಗೆ ಕುಸಿದ ನ್ಯೂಜಿಲ್ಯಾಂಡ್ ನಿಗದಿತ ಓವರ್‌ಗಳಲ್ಲಿ 9 ವಿಕೆಟಿಗೆ 136 ರನ್ ಗಳಿಸಲಷ್ಟೇ ಶಕ್ತವಾಗಿ ಶರಣಾಯಿತು.ಈ ಕೂಟದಲ್ಲಿ ಸತತ ಮೂರನೇ ಗೆಲುವು ದಾಖ ಲಿಸಿದ ವೆಸ್ಟ್‌ಇಂಡೀಸ್ ಆರಂಕದೊಂದಿಗೆ ಸೂಪರ್ 8ಕ್ಕೇರಿತು. ಸತತ ಎರಡು ಪಂದ್ಯಗಳಲ್ಲಿ ಸೋತ ನ್ಯೂಜಿಲ್ಯಾಂಡ್ ಕೂಟದಿಂದ ಹೊರಬಿತ್ತು. ನ್ಯೂಜಿ ಲ್ಯಾಂಡ್ ಇನ್ನೆರಡು ಪಂದ್ಯಗಳಲ್ಲಿ ಗೆದ್ದರೂ ನಾಲ್ಕಂಕ ಪಡೆಯಬಹುದು. ಅಷ್ಟೇ ಅಂಕವನ್ನು ಇದೀಗ ಅಫ್ಘಾನಿಸ್ಥಾನ ಹೊಂದಿದೆ. ಅಫ್ಘಾನಿಸ್ಥಾನಕ್ಕೂ ಇನ್ನೆರಡು ಪಂದ್ಯ ಆಡಲಿಕ್ಕಿದೆ ಮಾತ್ರವಲ್ಲದೇ ಈಗಾಗಲೇ ಪ್ಲಸ್ 5.225 ರನ್‌ಧಾರಣೆಯನ್ನು ಕೂಡ ಹೊಂದಿದೆ.
ವೆಸ್ಟ್‌ಇಂಡೀಸ್‌ನ ಆರಂಭ ಉತ್ತಮವಾಗಿರಲಿಲ್ಲ. ಟ್ರೆಂಟ್ ಬೌಲ್ಟ್, ಟಿಮ್ ಸೌಥಿ ದಾಳಿಗೆ ಕುಸಿದ ವೆಸ್ಟ್ ಇಂಡೀಸ್ 12.3 ಓವರ್ ಮುಗಿದಾಗ 7 ವಿಕೆಟಿಗೆ ಕೇವಲ 76 ರನ್ ಗಳಿಸಿ ಒದ್ದಾಡುತ್ತಿತ್ತು. ಆದರೆ ಶೆರ್ಫಾನೆ ರುಥರ್‌ಫೋರ್ಡ್ ಅವರ ಅದ್ಭುತ ಆಟದಿಂದಾಗಿ ತಂಡ ತಿರುಗೇಟು ನೀಡಿತಲ್ಲದೇ ಉತ್ತಮ ಮೊತ್ತ ಪೇರಿಸಲು ಯಶಸ್ವಿಯಾಯಿತು. ನ್ಯೂಜಿಲ್ಯಾಂಡ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಅವರು 39 ಎಸೆತ ಎದುರಿಸಿ 68 ರನ್ ಗಳಿಸಿ ಅಜೇಯರಾಗಿ ಉಳಿದರು. ಎರಡು ಬೌಂಡರಿ ಮತ್ತು ಆರು ಸಿಕ್ಸರ್ ಬಾರಿಸಿದರು. ಅವರ ಸಾಹಸದ ಬ್ಯಾಟಿಂಗ್‌ನಿಂದಾಗಿ ವೆಸ್ಟ್‌ಇಂಡೀಸ್ 9 ವಿಕೆಟಿಗೆ 149 ರನ್ ಗಳಿಸುವಂತಾಯಿತು.
Related Articles
ವಿಂಡೀಸ್‌ನಂತೆ ನ್ಯೂಜಿಲ್ಯಾಂಡ್ ಕೂಡ ರನ್ ಗಳಿಸಲು ಬಹಳಷ್ಟು ಒದ್ದಾಟ ನಡೆಸಿತು. ಬ್ಯಾಟಿಂಗಿಗೆ ಕಠಿನವೆನಿಸಿದ ಈ ಪಿಚ್‌ನಲ್ಲಿ ಪ್ರಮುಖ ಆಟಗಾರರೂ ಕೂಡ ರನ್ ಗಳಿಸಲು ಕಷ್ಟಪಟ್ಟರು. ಡೆವೋನ ಕಾನ್ವೆ, ಕೇನ್ ವಿಲಿಯಮ್ಸನ್, ರಚಿನ್ ರವೀಂದ್ರ ಅಲ್ಪ ಮೊತ್ತಕ್ಕೆ ಔಟಾದರು. ಗ್ಲೆನ್ ಫಿಲಿಪ್ಸ್ ಮಾತ್ರ ಸ್ವಲ್ಪಮಟ್ಟಿಗೆ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಅವರು 33 ಎಸೆತ ಎದುರಿಸಿ 40 ರನ್ ಗಹೊಡೆದರು.
Advertisement
ನ್ಯೂಜಿಲ್ಯಾಂಡ್ ಗೆಲ್ಲಲು ಅಂತಿಮ ಓವರಿನಲ್ಲಿ 33 ರನ್ ಗಳಿಸಬೇಕಾಗಿತ್ತು. ಮೊದಲ ನಾಲ್ಕು ಎಸೆತಗಳಲ್ಲಿ ಮಿಚೆಲ್ ಸ್ಯಾಂಟ್ನರ್ ಮೂರು ಸಿಕ್ಸರ್ ಬಾರಿಸಿದರು. ಮುಂದಿನೆರಡು ಎಸೆತಗಳಲ್ಲಿ ಒಂಟಿ ರನ್ ಮಾತ್ರ ಬಂತು. ಅಂತಿಮವಾಗಿ ತಂಡ 13 ರನ್ನುಗಳಿಂದ ಸೋಲನ್ನು ಕಂಡಿತು.
ಸಂಕ್ಷಿಪ್ತ ಸ್ಕೋರುವೆಸ್ಟ್ಇಂಡೀಸ್ 9 ವಿಕೆಟಿಗೆ 149 (ಶೆರ್ಫಾನೆ ರುಥರ್‌ಫೋರ್ಡ್ 68 ಔಟಾಗದೆ, ಟ್ರೆಂಟ್ ಬೌಲ್ಟ್ 16ಕ್ಕೆ 3, ಟಿಮ್ ಸೌಥಿ 21ಕ್ಕೆ 2, ಲೂಕಿ ಫೆರ್ಗ್ಯುಸನ್ 27ಕ್ಕೆ 2); ನ್ಯೂಜಿಲ್ಯಾಂಡ್ 9 ವಿಕೆಟಿಗೆ 136 (ಗ್ಲೆನ್ ಫಿಲಿಪ್ಸ್ 40, ಅಲ್ಜಾರಿ ಜೊಸೆಫ್ 19ಕ್ಕೆ 4, ಗುಡಕೇಶ್ ಮೋಟಿ 25ಕ್ಕೆ 3).
ಪಂದ್ಯಶ್ರೇಷ್ಠ: ರುಥರ್‌ಫೋರ್ಡ್