ಗಯಾನಾ: ಐಸಿಸಿ ಟಿ20 ವಿಶ್ವಕಪ್ ನಲ್ಲಿ ಮತ್ತೊಂದು ದೊಡ್ಡ ತಂಡಕ್ಕೆ ಸೋಲಾಗಿದೆ. ಇಂದು ಬೆಳಗ್ಗೆ ನಡೆದ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ದ ಅಫ್ಘಾನಿಸ್ತಾನ ತಂಡವು ಭರ್ಜರಿ ಗೆಲುವು ಸಾಧಿಸಿದೆ.
ಗಯಾನಾದ ಪ್ರೊವಿಡೆನ್ಸ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನ್ ಆರು ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿದರೆ, ಕಿವೀಸ್ ತಂಡವು 15.2 ಓವರ್ ಗಳಲ್ಲಿ ಕೇವಲ 75 ರನ್ ಗೆ ಆಲೌಟಾಯಿತು. ಇದೊಂದಿಗೆ ರಶೀದ್ ಖಾನ್ ಬಳಗ ಅಮೋಘ 84 ರನ್ ಜಯ ಸಾಧಿಸಿತು.
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಅಫ್ಘಾನ್ ಗೆ ಗುರ್ಬಾಜ್ ಮತ್ತು ಇಬ್ರಾಹಿಂ ಜದ್ರಾನ್ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್ ಗೆ ಅವರು 103 ರನ್ ಜೊತೆಯಾಟವಾಡಿದರು. ಗುರ್ಬಾಜ್ ಅವರು 56 ಎಸೆತಗಳಲ್ಲಿ 80 ರನ್ ಮಾಡಿದರೆ, ಜದ್ರಾನ್ 44 ರನ್ ಗಳಿಸಿದರು. ಉಳಿದಂತೆ ಅಜ್ಮತುಲ್ಲಾಹ್ 22 ರನ್ ಮಾಡಿದರು.
ಗುರಿ ಬೆನ್ನತ್ತಿದ ನ್ಯೂಜಿಲ್ಯಾಂಡ್ ಗೆ ಅಫ್ಘಾನ್ ಬೌಲರ್ ಫಾರೂಕಿ ಕಾಡಿದರು. ಕಳೆದ ಪಂದ್ಯದಲ್ಲಿ ಐದು ವಿಕೆಟ್ ಕಿತ್ತಿದ್ದ ಫಾರೂಕಿ ಕಿವೀಸ್ ವಿರುದ್ದ ನಾಲ್ಕು ವಿಕೆಟ್ ಕಬಳಿಸಿದರು. ಅದರಲ್ಲೂ ಇನ್ನಿಂಗ್ಸ್ ನ ಮೊದಲ ಎಸೆತದಲ್ಲೇ ಫಿನ್ ಅಲೆನ್ ಅವರನ್ನು ಬೌಲ್ಡ್ ಮಾಡಿ ಕಿವೀಸ್ ಕುಸಿತಕ್ಕೆ ಆರಂಭ ಹಾಡಿದರು.
ಗ್ಲೆನ್ ಫಿಲಿಪ್ಸ್ 18 ರನ್ ಮತ್ತು ಮ್ಯಾಟ್ ಹೆನ್ರಿ 12 ರನ್ ಗಳಿಸಿದ್ದೆ ಕಿವೀಸ್ ಸಾಧನೆ. ಉಳಿದ ಯಾರೂ ಎರಡಂಕಿ ಮೊತ್ತ ದಾಖಲಿಸಲಿಲ್ಲ. ಫಾರೂಕಿ ನಾಲ್ಕು ವಿಕೆಟ್, ನಾಯಕ ರಶೀದ್ ಖಾನ್ ನಾಲ್ಕು ವಿಕೆಟ್ ಮತ್ತು ನಬಿ ಎರಡು ವಿಕೆಟ್ ಪಡೆದರು.
80 ರನ್ ಗಳಿಸಿದ ಗುರ್ಬಾಜ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಎರಡರಲ್ಲಿ ಎರಡು ಪಂದ್ಯ ಗೆದ್ದ ಅಫ್ಘಾನ್ ಸಿ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿದೆ.