ಮೆಲ್ಬರ್ನ್: ಟಿ20 ವಿಶ್ವಕಪ್ ಕೂಟದಲ್ಲಿ ಬುಧವಾರ ಎರಡು ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯವು ಇಂಗ್ಲೆಂಡ್ ಮತ್ತು ಐರ್ಲೆಂಡ್ ಹಾಗೂ ಇನ್ನೊಂದು ಪಂದ್ಯವು ನ್ಯೂಜಿಲ್ಯಾಂಡ್ ಮತ್ತು ಅಘಾ^ನಿಸ್ಥಾನ ನಡುವೆ ನಡೆಯಲಿದೆ.
ಬೆಳಗ್ಗೆ ನಡೆಯುವ ಪಂದ್ಯದಲ್ಲಿ ಇಂಗ್ಲೆಂಡ್ ಗೆಲ್ಲುವ ಫೇವರಿಟ್ ತಂಡವಾಗಿದೆ. ಆರಂಭಿಕ ಪಂದ್ಯದಲ್ಲಿ ಅಘಾನಿಸ್ಥಾನವನ್ನು ಕಠಿನ ಹೋರಾಟದಲ್ಲಿ ಸೋಲಿಸಿ ಗೆಲುವಿನೊಂದಿಗೆ ವಿಶ್ವಕಪ್ ಅಭಿಯಾನ ಆರಂಭಿಸಿದ್ದ ಇಂಗ್ಲೆಂಡ್ ತಂಡವು ಐರ್ಲೆಂಡ್ ತಂಡವನ್ನು ಹಗುರವಾಗಿ ಕಾಣುವುದಿಲ್ಲ ಎಂದು ಹೇಳಿದೆ. ಐರ್ಲೆಂಡ್ ಬಗ್ಗೆ ನಮಗೆ ದೊಡ್ಡ ಗೌರವವಿದೆ. ಆದರೆ ಈ ಪಂದ್ಯವನ್ನು ಗೆಲ್ಲಲು ಶಕ್ತಿಮೀರಿ ಪ್ರಯತ್ನಿಸಲಿದ್ದೇವೆ ಎಂದು ನಾಯಕ ಜಾಸ್ ಬಟ್ಲರ್ ಹೇಳಿದ್ದಾರೆ.
ಐರ್ಲೆಂಡ್ ಈ ಹಿಂದೆ ವಿಶ್ವಕಪ್ ಪಂದ್ಯಗಳಲ್ಲಿ ಅಚ್ಚರಿಯ ಫಲಿತಾಂಶಕ್ಕೆ ಕಾರಣವಾದ ತಂಡಗಳಲ್ಲಿ ಒಂದಾಗಿದೆ. 2011ರ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಅದು ಇಂಗ್ಲೆಂಡ್ ತಂಡವನ್ನು ಸೋಲಿಸಿತ್ತು. ಇನ್ನೊಮ್ಮೆ ವೆಸ್ಟ್‌ಇಂಡೀಸ್ ತಂಡವನ್ನು ದ್ವಿತೀಯ ಸುತ್ತಿನಿಂದಲೇ ಹೊರಹಾಕಿತ್ತು.
ವಿಶ್ವಕಪ್ ಗೆಲ್ಲುವ ಫೇವರಿಟ್ ತಂಡಗಳಲ್ಲಿ ಇಂಗ್ಲೆಂಡ್ ಒಂದಾಗಿದೆ. ಪಾಕಿಸ್ಥಾನ ಮತ್ತು ಆಸ್ಟ್ರೇಲಿಯ ವಿರುದ್ಧ ತಂಡದ ಅಮೋಘ ನಿರ್ವಹಣೆಯೇ ಇದಕ್ಕೆ ಕಾರಣವಾಗಿದೆ. ಅಘಾ^ನಿಸ್ಥಾನ ವಿರುದ್ಧವೂ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿ ತಂಡವನ್ನು ಕೇವಲ 112 ರನ್ನಿಗೆ ನಿಯಂತ್ರಿಸಿತ್ತು. ಫಾರ್ಮ್ನಲ್ಲಿರುವ ಸ್ಯಾಮ್ ಕರನ್ ಐದು ವಿಕೆಟ್ ಕಿತ್ತು ಮಿಂಚಿದರೆ ಬೆನ್ ಸ್ಟೋಕ್ಸ್ ಮತ್ತು ಮಾರ್ಕ್ ವುಡ್ ತಲಾ ಎರಡು ವಿಕೆಟ್ ಹಾರಿಸಿದ್ದರು. ಇಂಗ್ಲೆಂಡ್ ಬ್ಯಾಟಿಂಗ್‌ನಲ್ಲಿ ಸ್ವಲ್ಪಮಟ್ಟಿಗೆ ಎಡವಿದರೂ ಅಂತಿಮವಾಗಿ 5 ವಿಕೆಟ್‌ಗಳಿಂದ ಪಂದ್ಯ ಗೆಲ್ಲಲು ಯಶಸ್ವಿಯಾಗಿತ್ತು. ಲಿಯಮ್ ಲಿವಿಂಗ್‌ಸ್ಟೋನ್ ಅಜೇಯ 29 ರನ್ ಬಾರಿಸಿ ತಂಡದ ಗೆಲುವಿಗೆ ಕಾರಣರಾಗಿದ್ದರು.
ಐರ್ಲೆಂಡ್ ವಿರುದ್ಧವೂ ನಾವು ಬಹಳ ಎಚ್ಚರಿಕೆಯಿಂದ ಆಡಬೇಕಾಗಿದೆ. ಟಿ20 ಪಂದ್ಯದಲ್ಲಿ ಸ್ವಲ್ಪ ಎಡವಿದರೂ ಪಂದ್ಯವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ಹಾಗಾಗಿ ಪ್ರತಿಯೊಂದು ತಂಡವನ್ನು ಗಂಭೀರವಾಗಿ ತೆಗೆದುಕೊಂಡು ಜವಾಬ್ದಾರಿಯಿಂದ ಆಡಬೇಕಾಗಿದೆ ಎಂದು ಬಟ್ಲರ್ ಹೇಳಿದ್ದಾರೆ.
ಉತ್ತಮ ಸವಾಲು
ರೌಂಡ್ ರಾಬಿನ್ ಲೀಗ್‌ನಲ್ಲಿ ವೆಸ್ಟ್‌ಇಂಡೀಸ್ ಮತ್ತು ಸ್ಕಾಟ್ಲೆಂಡ್ ವಿರುದ್ಧ ಗೆಲುವು ಜಯ ಸಾಧಿಸಿದ್ದ ಐರ್ಲೆಂಡ್ ತಂಡವು ಸೂಪರ್ 12 ಹಂತದಲ್ಲೂ ಉತ್ತಮ ನಿರ್ವಹಣೆ ನೀಡಬಹುದೆಂದು ಅಭಿಮಾನಿಗಳು ನಿರೀಕ್ಷೆ ಮಾಡಿದ್ದರು. ಆದರೆ ಮೊದಲ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 9 ವಿಕೆಟ್‌ಗಳಿಂದ ಸೋತಿದ್ದ ಐರ್ಲೆಂಡ್ ತಂಡವು ಇಂಗ್ಲೆಂಡ್ ವಿರುದ್ಧ ಗೆಲ್ಲುವ ವಿಶ್ವಾಸದೊಂದಿಗೆ ಆಡಲಿದೆ.
ದೀರ್ಘ ಸಮಯದವರೆಗೆ ನಾವು ಬಿಳಿ ಚೆಂಡಿನೊಂದಿಗೆ ಆಡಿಲ್ಲ. ಹಾಗಾಗಿ ಇದೊಂದು ನಮ್ಮ ಪಾಲಿಗೆ ಉತ್ತಮ ಸವಾಲು. ಈಹೋರಾಟದಲ್ಲಿ ನಮ್ಮ ತಂಡ ಇಂಗ್ಲೆಂಡಿನ ಬ್ಯಾಟಿಂಗ್ ಶಕ್ತಿಗೆ ಕಡಿವಾಣ ಹಾಕಲು ಪ್ರಯತ್ನಿಸಲಿದೆ ಎಂದು ಐರ್ಲೆಂಡ್ ತಂಡದ ಕೋಚ್ ಹೆನ್ರಿಚ್ ಮಾಲನ್ ಹೇಳಿದ್ದಾರೆ.