Advertisement

ಭಾರತದ ಆತಿಥ್ಯದ ಟಿ20 ವಿಶ್ವಕಪ್‌ ಕೂಟಕ್ಕೂ ಕಂಟಕ

10:54 PM May 04, 2021 | Team Udayavani |

ಹೊಸದಿಲ್ಲಿ: ಕೋವಿಡ್‌ ಕಾರಣದಿಂದ 14ನೇ ಐಪಿಎಲ್‌ ಪಂದ್ಯಾವಳಿ ಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ ಬೆನ್ನಲ್ಲೇ ಭಾರತದ ಆತಿಥ್ಯದಲ್ಲೇ ವರ್ಷಾಂತ್ಯ ನಡೆಯುವ ಐಸಿಸಿ ಟಿ20 ವಿಶ್ವಕಪ್‌ ಮೇಲೆ ಕರಿನೆರಳು ಬಿದ್ದಿದೆ. ಆಗ ಕೋವಿಡ್‌ “ಮೂರನೇ ಅಲೆ’ಯ ಭೀತಿ ಇರುವುದರಿಂದ ಈ ಪಂದ್ಯಾವಳಿ ಯುಎಇಗೆ ಸ್ಥಳಾಂತರಗೊಳ್ಳುವುದು ಬಹುತೇಕ ಖಚಿತಗೊಂಡಿದೆ. ಬಿಸಿಸಿಐ ಕೂಡ ಇದೇ ಲೆಕ್ಕಾಚಾರದಲ್ಲಿದೆ. ಜೂನ್‌ನಲ್ಲಿ ಐಸಿಸಿ ಸಭೆ ನಡೆಯಲಿದ್ದು, ಆಗ ಟಿ20 ಆತಿಥ್ಯ ಯಾರದಾಗಲಿದೆ ಎಂಬುದು ಇತ್ಯರ್ಥವಾಗಲಿದೆ.

Advertisement

ಅಕ್ಟೋಬರ್‌-ನವಂಬರ್‌ ತಿಂಗಳಲ್ಲಿ ನಡೆಯುವ ಟಿ20 ವಿಶ್ವಕಪ್‌ ಪಂದ್ಯಾವಳಿಯಲ್ಲಿ 16 ದೇಶಗಳ ತಂಡಗಳು ಭಾಗವಹಿಸಲಿವೆ. ದೇಶದ 9 ಕೇಂದ್ರಗಳಲ್ಲಿ ಪಂದ್ಯಗಳನ್ನು ನಡೆಸುವುದು ಬಿಸಿಸಿಐ ಯೋಜನೆಯಾಗಿತ್ತು. ಆದರೆ ಕೊರೊನಾ ಕಾರಣದಿಂದ ಈ ತಾಣಗಳನ್ನು 4 ಅಥವಾ 5ಕ್ಕೆ ಸೀಮಿತಗೊಳಿಸಲಿಕ್ಕೂ ತೀರ್ಮಾನಿಸಲಾಗಿತ್ತು.

ಸದ್ಯ ಕೋವಿಡ್ ಭೀತಿಯ ಕಾರಣ ವಿದೇಶಿ ಕ್ರಿಕೆಟಿಗರು ಭಾರತಕ್ಕೆ ಆಗಮಿ ಸುವುದು ಸೂಕ್ತವಲ್ಲ ಎಂದು ಬಿಸಿಸಿಐ ಮನಗಂಡಿದೆ. ಹೀಗಾಗಿ ಪರ್ಯಾಯ ಆಯ್ಕೆಯಾಗಿರುವ ಯುಎಇಯಲ್ಲಿ ಟಿ20 ವಿಶ್ವಕಪ್‌ ನಡೆಯುವ ಸಾಧ್ಯತೆಯೇ ಹೆಚ್ಚು. ಪಿಟಿಐ ವಾರ್ತಾಸಂಸ್ಥೆಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ, ಈಗಾಗಲೇ ಬಿಸಿಸಿಐ ಕೇಂದ್ರ ಸರಕಾರದೊಂದಿಗೆ ಈ ಕುರಿತು ಮಾತುಕತೆ ನಡೆಸಿದೆ ಹಾಗೂ ಪಂದ್ಯಾವಳಿಯನ್ನು ಯುಎಇಗೆ ಸ್ಥಳಾಂತರಿಸಲು ಸಮ್ಮತಿಸಿದೆ.

ಭಾರತ ಸೂಕ್ತ ತಾಣವಲ್ಲ :

“ಕೇವಲ ನಾಲ್ಕೇ ವಾರಗಳಲ್ಲಿ ಐಪಿಎಲ್‌ ಪಂದ್ಯಾವಳಿಯನ್ನು ನಿಲ್ಲಿಸುವ ಸ್ಥಿತಿ ಎದುರಾದುದನ್ನು ಕಂಡಾಗ ಟಿ20 ವಿಶ್ವಕಪ್‌ನಂತಹ ಜಾಗತಿಕ ಮಟ್ಟದ ಪಂದ್ಯಾವಳಿಯನ್ನು ಆಯೋಜಿಸಲು ಭಾರತ ಸೂಕ್ತವಲ್ಲ ಎಂದೇ ಭಾವಿಸ ಬೇಕಾಗುತ್ತದೆ. ದೇಶ ಕಳೆದ 70 ವರ್ಷಗಳಲ್ಲಿ ಕಂಡು ಕೇಳರಿಯದಂತಹ ಆರೋಗ್ಯ ಬಿಕ್ಕಟ್ಟಿಗೆ ಸಿಲುಕಿದೆ. ನವಂಬರ್‌ನಲ್ಲಿ ಕೊರೊನಾ ಮೂರನೇ ಅಲೆ ಏಳುವ ಮುನ್ಸೂಚನೆಯೂ ಇದೆ. ಹೀಗಾಗಿ ಟಿ20 ವಿಶ್ವಕಪ್‌ ಯುಎಇಗೆ ಸ್ಥಳಾಂತರಗೊಳ್ಳುವ ಬಗ್ಗೆ ಅನುಮಾನವೇ ಇಲ್ಲ’ ಎಂಬುದಾಗಿ ಬಿಸಿಸಿಐ ಮೂಲವೊಂದು ತಿಳಿಸಿದೆ.

Advertisement

ಆಗ ಶಾರ್ಜಾ, ದುಬಾೖ ಮತ್ತು ಅಬುಧಾಬಿಯಲ್ಲಿ ಪಂದ್ಯಗಳು ನಡೆಯಲಿವೆ. ಐಪಿಎಲ್‌ನ 6 ತಾಣಗಳಿಗೆ ಹೋಲಿಸಿದರೆ ಈ 3 ತಾಣಗಳೇ ಹೆಚ್ಚು ಸುರಕ್ಷಿತ ಎಂಬ ಲೆಕ್ಕಾಚಾರವೂ ಇಲ್ಲಿದೆ.

ಐಪಿಎಲ್‌ ಆತಿಥ್ಯದ ವೈಫಲ್ಯ :

ಕೋವಿಡ್‌ ದ್ವಿತೀಯ ಅಲೆಯ ನಡುವೆಯೂ ಐಪಿಎಲ್‌ ಪಂದ್ಯಾವಳಿಯನ್ನು ಭಾರತ ಯಶಸ್ವಿಯಾಗಿ ನಡೆಸಿದ್ದರೆ ಅದು ಮುಂಬರುವ ಟಿ20 ವಿಶ್ವಕಪ್‌ ಪಂದ್ಯಾವಳಿಯ ಆತಿಥ್ಯಕ್ಕೊಂದು ರಹದಾರಿ ಆಗುತ್ತಿತ್ತು. ಆದರೆ ಜೈವಿಕ ಸುರಕ್ಷಾ ವಲಯದಲ್ಲೂ ಕೊರೊನಾ ದಾಂಗುಡಿಯಿರಿಸಿದ್ದರಿಂದ ಎಲ್ಲ ಯೋಜನೆ ತಲೆಕೆಳಗಾಗಿದೆ.

ಐಪಿಎಲ್‌ನಲ್ಲಿ ಕೋವಿಡ್‌ ಕಾಣಿಸಿಕೊಳ್ಳುವುದಕ್ಕಿಂತ ಮೊದಲೇ ಆಸ್ಟ್ರೇಲಿಯದ ಕೆಲವು ಆಟಗಾರರು ವಿಮಾನ ಏರಿದ್ದರು. ಡೆಲ್ಲಿ ತಂಡದ ಸ್ಪಿನ್ನರ್‌ ಆರ್‌. ಅಶ್ವಿ‌ನ್‌, ಅಂಪಾಯರ್‌ ನಿತಿನ್‌ ಮೆನನ್‌ ಕೂಡ ಕೊರೊನಾ ಕಾರಣವನ್ನು ಮುಂದೊಡ್ಡಿ ಐಪಿಎಲ್‌ ತ್ಯಜಿಸಿದ್ದರು. ಪರಿಸ್ಥಿತಿ ಇಷ್ಟು ಗಂಭೀರವಾಗಿರುವಾಗ ಇನ್ನು ಆರು ತಿಂಗಳಲ್ಲಿ ಟಿ20 ವಿಶ್ವಕಪ್‌ ಆಡಲು ವಿದೇಶಿ ತಂಡಗಳು ಭಾರತಕ್ಕೆ ಬರಲಿವೆ ಎನ್ನುವುದು ಬರೀ ಭ್ರಮೆ!

Advertisement

Udayavani is now on Telegram. Click here to join our channel and stay updated with the latest news.

Next