ಮುಂಬೈ: ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ 17 ವರ್ಷದ ಬಳಿಕ ಟಿ20 ವಿಶ್ವಕಪ್ ಗೆಲುವು ಸಾಧಿಸಿದೆ. ಅತ್ಯಂತ ರೋಮಾಂಚನಕಾರಿಯಾಗಿ ಸಾಗಿದ ಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ಬಳಗ ಏಳು ರನ್ ಅಂತರದ ಗೆಲುವು ಸಾಧಿಸಿದೆ.
ಕೊನೆಯ ಓವರ್ ನಲ್ಲಿ ದ.ಆಫ್ರಿಕಾ ಗೆಲುವಿಗೆ 17 ರನ್ ಅಗತ್ಯವಿದ್ದಾಗ ಹಾರ್ದಿಕ್ ಎಸೆದ ಚೆಂಡನ್ನು ಮಿಲ್ಲರ್ ಲಾಂಗ್ ಆನ್ ಕಡೆಗೆ ಬಾರಿಸಿದರು. ಸಿಕ್ಸ್ ಹೋಗುತ್ತಿದ್ದ ಚೆಂಡನ್ನು ಅತ್ಯಂತ ರೋಚಕವಾಗಿ ಹಿಡಿದ ಸೂರ್ಯಕುಮಾರ್ ಯಾದವ್ ಭಾರತದ ಕಡೆಗೆ ಪಂದ್ಯವನ್ನು ತಿರುಗಿಸಿದರು.
ಸೂರ್ಯ ಕ್ಯಾಚ್ ವಿಡಿಯೋ ವೈರಲ್ ಆಗುತ್ತಿದ್ದಂತೆ ವಿವಾದಕ್ಕೂ ಕಾರಣವಾಗಿತ್ತು. ಬೌಂಡರಿ ಲೈನ್ ಗೆ ಬಳಸುವ ಕುಶನ್ ಹಿಂದಕ್ಕೆ ತಳ್ಳಲಾಗಿತ್ತು. ಭಾರತದ ಬೌಲಿಂಗ್ ವೇಳೆ ಬೇಕಂತಲೇ ಕುಶನ್ ಹಿಂದಕ್ಕೆ ದೂಡಲಾಗಿತ್ತು ಎಂದು ಹಲವರು ಆರೋಪಿಸಿದ್ದರು. ಒಂದು ವೇಳೆ ಕುಶನ್ ನಿಗದಿತ ಸ್ಥಳದಲ್ಲಿ ಇದ್ದರೆ ದಕ್ಷಿಣ ಆಫ್ರಿಕಾ ಗೆಲುವು ಸಾಧಿಸುತ್ತಿತ್ತು ಎಂದು ಹಲವರು ವಾದಿಸುತ್ತಿದ್ದಾರೆ. ಇದಕ್ಕೆ ಇದೀಗ ಸ್ಪಷ್ಟನೆಯೊಂದು ಸಿಕ್ಕಿದೆ.
ಕ್ರಿಕೆಟ್ ಸಂಖ್ಯಾಶಾಸ್ತ್ರಜ್ಞ ರಜನೀಶ್ ಗುಪ್ತಾ ಎಂಬವರು ಇದಕ್ಕೆ ಸ್ಪಷ್ಟನೆ ನೀಡಿದ್ದಾರೆ. “ನಾನು ಅಂದು ಮೈದಾನದ ಟಿವಿ ಕಾಮೆಂಟರಿ ಬಾಕ್ಸ್‌ನಲ್ಲಿದ್ದೆ. ಹೀಗಾಗಿ ಇಲ್ಲಿ ಪ್ರಶ್ನೆಯಲ್ಲಿರುವ ಬಿಳಿ ಗೆರೆಯು ಬೌಂಡರಿಯಾಗಿರಲಿಲ್ಲ ಎಂದು ಹೇಳಬಲ್ಲೆ. ಬೌಂಡರಿ ರೋಪ್ ವೆಡ್ಜ್ ಆ ಬಿಳಿ ಗೆರೆಯ ಹಿಂದೆ ಇತ್ತು. ಪಂದ್ಯದ ಆರಂಭದಿಂದಲೂ ಹಾಗೆಯೇ ಇತ್ತು. ಪಿಚ್ ಅನ್ನು ಬದಲಾಯಿಸಿದಾಗ, ಬೌಂಡರಿಗಳನ್ನು ಸರಿಹೊಂದಿಸಲಾಗುತ್ತದೆ. ಇದು ಸಾಮಾನ್ಯ ಎಂದಿದ್ದಾರೆ.
ಪಂದ್ಯದ ಬಳಿಕ ಮಾತನಾಡಿದ್ದ ಸೂರ್ಯಕುಮಾರ್ ಯಾದವ್, “ಆ ಕ್ಷಣದಲ್ಲಿ ಇದ್ದು ದೇಶಕ್ಕೆ ವಿಶೇಷವಾದುದನ್ನ ನೀಡಲು ಸಾಧ್ಯವಾಗಿದ್ದಕ್ಕೆ ನಾನು ಧನ್ಯ. ಇದು ದೇವರ ಯೋಜನೆ” ಎಂದಿದ್ದರು.