Advertisement
ಹೊಸದಿಲ್ಲಿಯಲ್ಲಿ ನಡೆದ ಪಂದ್ಯದಲ್ಲಿ ಆರಂಭಿಕ ಕಳಪೆ ಆಟದ ಬಳಿಕ ನಿತೀಶ್ ರೆಡ್ಡಿ, ರಿಂಕು ಸಿಂಗ್ ಅವರ ಉತ್ತಮ ಆಟದ ನೆರವಿನಿಂದ ಭಾರತ 9 ವಿಕೆಟಿಗೆ 221 ರನ್ನುಗಳ ಉತ್ತಮ ಮೊತ್ತ ಪೇರಿಸಿತ್ತು. ಇದಕ್ಕುತ್ತರವಾಗಿ ಬಾಂಗ್ಲಾದೇಶವು ಭಾರತದ ಎಲ್ಲ ಬೌಲರ್‌ಗಳ ಬಿಗು ದಾಳಿಗೆ ತತ್ತರಿಸಿ 20 ಓವರ್‌ಗಳಲ್ಲಿ 9 ವಿಕೆಟಿಗೆ 135 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲನ್ನು ಕಂಡಿತು. ಅನುಭವಿ ಮಹಮುದುಲ್ಲ ಮಾತ್ರ ಭಾರತದ ದಾಳಿಯನ್ನು ಸಮರ್ಥವಾಗಿ ಎದುರಿಸಿ 41 ರನ್ ಹೊಡೆದರು.
ಈ ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡವು ಆರಂಭದಲ್ಲಿ ನಿಧಾನಗತಿ ಯಲ್ಲಿ ಆಟವಾಡಿತು. ಆರಂಭಿಕರಾದ ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮ ಮತ್ತು ನಾಯಕ ಸೂರ್ಯಕುಮಾರ್ ಯಾದವ್ ಉತ್ತಮವಾಗಿ ಆಡಲು ವಿಫಲರಾದರು. ಇದರಿಂದಾಗಿ ಮೊದಲ ಆರು ಓವರ್‌ಗಳ ಮುಕ್ತಾಯಕ್ಕೆ ಭಾರತ 41 ರನ್ ಗಳಿಸುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿ ಇತ್ತು. ಆಬಳಿಕ ನಿತೀಶ್ ಕುಮಾರ್ ರೆಡ್ಡಿ, ರಿಂಕು ಸಿಂಗ್ ಭರ್ಜರಿಯಾಗಿ ಆಡಿದರು. ಭರ್ಜರಿಯಾಗಿ ಆಡಿದ ಅವರಿಬ್ಬರು ತಂಡದ ಉತ್ತಮ ಮೊತ್ತಕ್ಕೆ ಕಾರಣರಾದರು. ಬಾಂಗ್ಲಾ ದಾಳಿಯನ್ನು ಪುಡಿಗಟ್ಟಿದ ಅವರಿಬ್ಬರು ನಾಲ್ಕನೇ ವಿಕೆಟಿಗೆ 108 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡರು. ಈ ಹಂತದಲ್ಲಿ ತಂಡವು ನಿತೀಶ್ ರೆಡ್ಡಿ ಅವರನ್ನು ಕಳೆದುಕೊಂಡಿತು. 34 ಎಸೆತ ಎದುರಿಸಿದ ಅವರು 76 ರನ್ ಗಳಿಸಿದರು. ಆಬಳಿಕ ರಿಂಕು ಅವರನ್ನು ಸೇರಿಕೊಂಡ ಹಾರ್ದಿಕ್ ಪಾಂಡ್ಯ ಬಿರುಸಿನ ಆಟಕ್ಕೆ ಮುಂದಾದರು. ರಿಂಕು 29 ಎಸೆತಗಳಿಂದ 53 ರನ್ ಹೊಡೆದರೆ ಪಾಂಡ್ಯ 19 ಎಸೆತಗಳಿಂದ 32 ರನ್ ಹೊಡೆದರು.
Related Articles
Advertisement