ಸಿಡ್ನಿ: ಆಸ್ಟ್ರೇಲಿಯ ವಿರುದ್ಧದ ವರ್ಷಾರಂಭದ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಮಿಸ್ಬಾ ಉಲ್ ಹಕ್ ಅವರೇ ಪಾಕಿಸ್ಥಾನ ತಂಡದ ನಾಯಕರಾಗಿರುತ್ತಾರೆ. ಇದರೊಂದಿಗೆ ಪಾಕ್ ಕ್ರಿಕೆಟಿಗೆ ಸಂಬಂಧಿಸಿದ ಒಂದು ಹಂತದ ಊಹಾಪೋಹಕ್ಕೆ ತೆರೆ ಬಿದ್ದಿದೆ. ಪಾಕಿಸ್ಥಾನ ದ್ವಿತೀಯ ಟೆಸ್ಟ್ ಸೋತು ಸರಣಿ ಕಳೆದುಕೊಂಡ ಬಳಿಕ ಮಿಸ್ಬಾ ಅಂತಾರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ ಘೋಷಿಸುವ ನಿರ್ಧಾರಕ್ಕೆ ಬಂದಿದ್ದರು.
“ಮಿಸ್ಬಾ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಆಡಲಿದ್ದಾರೆ, ತಂಡದ ನಾಯಕತ್ವವನ್ನೂ ವಹಿಸಲಿದ್ದಾರೆ…’ ಎಂದು ಪಾಕಿಸ್ಥಾನ ತಂಡದ ಮೀಡಿಯಾ ಮ್ಯಾನೇಜರ್ ಅಮ್ಜದ್ ಹುಸೇನ್ ಭಟ್ಟಿ ಹೇಳಿಕೆಯೊಂದನ್ನು ನೀಡಿದ್ದಾರೆ.
“ನಾನೀಗ ಕ್ರಿಕೆಟ್ ವಿದಾಯದ ತೀರ್ಮಾವನ್ನು ತೆಗೆದುಕೊಳ್ಳಲೇ ಬೇಕಿದೆ. ತಂಡಕ್ಕೆ ನನ್ನಿಂದ ಕೊಡುಗೆ ಸಲ್ಲಿಸಲು ಸಾಧ್ಯವಾಗದೇ ಇದ್ದರೆ ತಂಡದಲ್ಲಿ ಮುಂದುವರಿಯುವ ಅರ್ಹತೆ ನನಗಿರದು. ಹೀಗಾಗಿ ಕ್ರಿಕೆಟ್ ನಿವೃತ್ತಿ ಬಗ್ಗೆ ನಾನು ಖಡಕ್ ತೀರ್ಮಾನವೊಂದನ್ನು ತೆಗೆದುಕೊಳ್ಳಬೇಕಿದೆ. ಸಿಡ್ನಿ ಟೆಸ್ಟ್ ಪಂದ್ಯದ ಒಳಗಾಗಿ ನನ್ನ ನಿರ್ಧಾರ ಪ್ರಕಟಿಸುತ್ತೇನೆ…’ ಎಂದು ಮಿಸ್ಬಾ ಹೇಳಿದ್ದರು.
ಆಸ್ಟ್ರೇಲಿಯ ಸರಣಿಯ ಮೊದಲೆರಡೂ ಟೆಸ್ಟ್ ಪಂದ್ಯಗಳನ್ನು ಉಳಿಸಿಕೊಳ್ಳುವ ಅವಕಾಶವಿದ್ದರೂ ಪಾಕಿಸ್ಥಾನ ಇದನ್ನು ಕಳೆದುಕೊಂಡಿತ್ತು. ಮಿಸ್ಬಾ ಬ್ಯಾಟಿಂಗಿನಲ್ಲೂ ವಿಫಲರಾಗಿದ್ದರು. ಅವರು ತಂಡದಲ್ಲಿ ಮುಂದುವರಿಯುವ ಬಗ್ಗೆ ಪಾಕ್ ಮಾಜಿಗಳಿಂದ ತೀವ್ರ ಪ್ರತಿರೋಧ ವ್ಯಕ್ತವಾಗಿತ್ತು.
ವೈಟ್‌ವಾಶ್ ಭೀತಿಯಲ್ಲಿರುವ ಪಾಕಿಸ್ಥಾನ ಜ. 3ರಿಂದ ಸಿಡ್ನಿಯಲ್ಲಿ ಸರಣಿಯ ಅಂತಿಮ ಟೆಸ್ಟ್ ಆಡಲಿದೆ. ಈ ಪಂದ್ಯ ಯಾವ ಫಲಿತಾಂಶವನ್ನು ದಾಖಲಿಸಿದರೂ ಮಿಸ್ಬಾ ತಂಡದಲ್ಲಿ ಮುಂದುವರಿಯುವುದು ಅನುಮಾನ. ಅಲ್ಲದೇ ಪಾಕಿಸ್ಥಾನವಿನ್ನು ಟೆಸ್ಟ್ ಸರಣಿ ಆಡುವುದು ಎಪ್ರಿಲ್-ಮೇ ತಿಂಗಳಲ್ಲಿ, ವೆಸ್ಟ್ ಇಂಡೀಸ್ ವಿರುದ್ಧ. ಪಾಕ್ ತಂಡ ಈ ಸುದೀರ್ಘ ವಿರಾಮಕ್ಕೆ ತೆರಳುವ ಮೊದಲೇ ಮಿಸ್ಬಾ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಗುಡ್‌ಬೈ ಹೇಳುವುದು ಖಚಿತ ಎನ್ನಲಾಗುತ್ತಿದೆ.