Advertisement

ಸ್ವಾಮಿ ವಿವೇಕಾನಂದರು ಯುವಕರಿಗೆ ಪ್ರೇರಕ ಶಕ್ತಿ  

03:54 PM Sep 12, 2018 | |

ಬೆಳಗಾವಿ: ಸ್ವಾಮಿ ವಿವೇಕಾನಂದರು ಶಿಕಾಗೋ ಸಮ್ಮೇಳನದಲ್ಲಿ ಮಾಡಿದ ಉಪನ್ಯಾಸ ಸುವರ್ಣಾಕ್ಷರಗಳಲ್ಲಿ ಬರೆದಿಡುವಂಥದು ಎಂದು ಕುಣಿಗಲ್‌ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ| ಎಂ. ಗೋವಿಂದರಾಯ ಹೇಳಿದರು. ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ಸ್ವಾಮಿ ವಿವೇಕಾನಂದರ ಶಿಕಾಗೋ ಉಪನ್ಯಾಸದ ನಿಮಿತ್ತ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

Advertisement

1893ರಲ್ಲಿ ನಡೆದ ಷಿಕಾಗೋ ಸಮ್ಮೇಳನ ವಿವೇಕಾನಂದರ ಜೀವನದ ದಿಕ್ಕನ್ನೇ ಬದಲಾಯಿಸಿತು. ಈ ಸಮ್ಮೇಳನದ ಮೂಲಕ ವಿವೇಕಾನಂದರು ತಮ್ಮ ಅಗಾಧ ಜ್ಞಾನ ಹಾಗೂ ಭಾರತದ ಸಂಸ್ಕೃತಿಯನ್ನು ಇಡೀ ಜಗತ್ತಿಗೆ ಪರಿಚಯಿಸಿದರು. ಈ ಸಮ್ಮೇಳನ ಸಮಸ್ತ ಮಾನವ ಜನಾಂಗದ ಸಮ್ಮೇಳನವಾಗಿತ್ತು. ವಿವೇಕಾನಂದರು ಸಹಿಷ್ಣುತಾ ಭಾವವನ್ನು ಪ್ರಪಂಚಕ್ಕೆ ಸಂದೇಶವಾಗಿ ನೀಡಿದರು. ಹಿಂದೂ ಧರ್ಮಕ್ಕೆ ಅಪಾರ ಕೊಡುಗೆ ನೀಡಿ ವಿಶ್ವ ಧರ್ಮಕ್ಕೆ ತಳಹದಿ ಹಾಕಿದರು. ವಿವೇಕಾನಂದರು ಯುವ ಜನಾಂಗಕ್ಕೆ ಮಾದರಿಯಾಗಿದ್ದು, ಯುವಕರಿಗೆ ಪ್ರೇರಕ ಶಕ್ತಿಯಾಗಿದ್ದಾರೆ ಎಂದು ಹೇಳಿದರು.

ಭಾರತವನ್ನು ಅರ್ಥೈಸಿಕೊಳ್ಳಬೇಕೆಂದರೆ ವಿವೇಕಾನಂದರ ಬಗ್ಗೆ ಓದಿ ಎಂದು ಮಹಾತ್ಮಾ ಗಾಂಧೀಜಿ ಹೇಳಿದ್ದರು. ವಿವೇಕಾನಂದರ ಬಗ್ಗೆ ಓದಿದಾಗ ತಮ್ಮಲ್ಲಿ ರಾಷ್ಟ್ರೀಯತೆ ಭಾವ ಹೆಚ್ಚಾಯಿತು ಎಂದು ಗಾಂಧೀಜಿ ಅವರು ಉಲ್ಲೇಖೀಸಿದ್ದಾರೆ. ವಿವೇಕಾನಂದರು ಯುವ ಜನಾಂಗದ ಬಗ್ಗೆ ಹೆಚ್ಚಿನ ವಿಶ್ವಾಸ ಹೊಂದಿದ್ದರು ಎಂದರು. ಶಾಸಕ ಅನಿಲ ಬೆನಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿವೇಕಾನಂದರ ಶಿಕಾಗೋ ಭಾಷಣಕ್ಕಿಂತ ಮುಂಚೆ ವಿದೇಶಿಗರಲ್ಲಿ ಭಾರತದ ಬಗ್ಗೆ ಕೀಳು ಭಾವನೆ ಇತ್ತು. ವಿವೇಕಾನಂದರ ಭಾಷಣದ ನಂತರ ಭಾರತದ ಸಂಸ್ಕೃತಿ, ಆಚಾರ, ವಿಚಾರ ಪ್ರಪಂಚದಾದ್ಯಂತ ಪ್ರಚಾರವಾಯಿತು. 1892ರ ಅ.15 ರಂದು ಸ್ವಾಮಿ ವಿವೇಕಾನಂದರು ಬೆಳಗಾವಿಗೆ ಭೇಟಿ ನೀಡಿ 12 ದಿನಗಳ ಕಾಲ ಇಲ್ಲಿ ತಂಗಿದ್ದರು ಎಂಬುದು ಹೆಮ್ಮೆಯ ವಿಚಾರ. ನಗರದಲ್ಲಿರುವ ರಾಮಕೃಷ್ಣ ಆಶ್ರಮಕ್ಕೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ, ವಿವೇಕಾನಂದರ ಬಗ್ಗೆ ತಿಳಿದುಕೊಳ್ಳಬೇಕು ಎಂದರು.

ಅಪರ ಜಿಲ್ಲಾಧಿಕಾರಿ ಡಾ| ಎಚ್‌.ಬಿ. ಬೂದೆಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ವಾಮಿ ವಿವೇಕಾನಂದರು ಅಪಾರ ಪಾಂಡಿತ್ಯ ಹೊಂದಿದ್ದರು. ವೇದ, ಉಪನಿಷತ್‌, ರಾಮಾಯಣ, ಮಹಾಭಾರತ ಸೇರಿದಂತೆ ಅನೇಕ ವಿಷಯಗಳನ್ನು ವಿಸ್ತೃತವಾಗಿ ತಿಳಿದುಕೊಂಡಿದ್ದರು ಎಂದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ ಸಿ.ಬಿ. ರಂಗಯ್ಯ ಪ್ರಾಸ್ತಾವಿಕ ಮಾತನಾಡಿ, ಷಿಕಾಗೋ ಸಮ್ಮೇಳನದ 125ನೇ ವರ್ಷಾಚರಣೆ ನಿಮಿತ್ತ ಸೆ. 11ರಿಂದ ಅ.11 ರವರೆಗೆ ತಿಂಗಳ ಕಾಲ ಶಾಲೆ, ಕಾಲೇಜು, ವಿವಿಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರಬಂಧ, ಭಾಷಣ ಸೇರಿದಂತೆ ವಿವಿಧ ಸ್ಪರ್ಧೆ ಹಾಗೂ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next