Advertisement

ನೆಪಕ್ಕೆ ಮಾತ್ರ ಅರವತ್ತು

06:05 AM Nov 12, 2017 | |

ಬೆಳಗಾವಿ: ಪ್ರಸಕ್ತ ಸರ್ಕಾರ ಕಳೆದ ನಾಲ್ಕು ವರ್ಷ ಸುವರ್ಣಸೌಧದಲ್ಲಿ ಅಧಿವೇಶನ ನಡೆಸಿದ್ದು 40 ದಿನವಾದರೆ, ಇದಕ್ಕೆ ವೆಚ್ಚವಾಗಿದ್ದು ಮಾತ್ರ 50 ಕೋಟಿ ರೂ.!

Advertisement

ಐದನೇ ವರ್ಷವಾದ  ಈ ಬಾರಿ ಹತ್ತು ದಿನ ಅಧಿವೇಶನ ನಿಗದಿಯಾಗಿದ್ದು ಇದೂ ಸೇರಿದರೆ 50 ದಿನ ಅಧಿವೇಶನ ನಡೆದಂತೆ ಆಗುತ್ತದೆ. ಅಲ್ಲಿಗೆ ವೆಚ್ಚ 65 ಕೋಟಿ ರೂ. ಮುಟ್ಟುತ್ತದೆ. ಆದರೆ,  ನಾಲ್ಕು ವರ್ಷದ 40 ದಿನಗಳ ಅಧಿವೇಶನದಲ್ಲಿ ಕಲಾಪ ನಡೆದಿದ್ದು ಅರ್ಧದಷ್ಟು ಮಾತ್ರ. ಉಳಿದಂತೆ ಪ್ರತಿಭಟನೆ, ಧರಣಿ, ಗದ್ದಲ, ಕೋಲಾಹಲದಲ್ಲಿ ಕಳೆದುಹೋಯಿತು.

ವರ್ಷಕ್ಕೆ 60 ದಿನ ಅಧಿವೇಶನ ನಡೆಸಬೇಕು ಎಂಬ ನಿಯಮವೂ ಈ ಬಾರಿ ಪಾಲನೆಯಾಗಿಲ್ಲ ಎಂಬುದು ಮತ್ತೂಂದು ಪ್ರಮುಖ ವಿಚಾರ.  ಈ ವಿಚಾರದಲ್ಲಿ ಕಾಂಗ್ರೆಸ್‌ ಮಾತ್ರವಲ್ಲ ಈ ಹಿಂದೆ ಅಧಿಕಾರ ನಡೆಸಿದ ಬಿಜೆಪಿ, ಜೆಡಿಎಸ್‌ ಸಹ ನಿಯಮ ಉಲ್ಲಂಘನೆ ಮಾಡುತ್ತಲೇ ಬಂದಿದೆ.

ಪ್ರತಿ ವರ್ಷ ಜನವರಿಯಲ್ಲಿ ಆರಂಭವಾಗುವ ಜಂಟಿ ಅಧಿವೇಶನದಿಂದ ಹಿಡಿದು ವರ್ಷಾಂತ್ಯದಲ್ಲಿ ನಡೆಯುವ ಚಳಿಗಾಲದ ಅಧಿವೇಶನದವರೆಗೂ ಒಟ್ಟು 60 ದಿನ ಅಧಿವೇಶನ ನಡೆಯಬೇಕೆಂದು 2005 ರಲ್ಲಿ ಕಾಂಗ್ರೆಸ್‌ ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಇದ್ದ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಅಂದಿನ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ. ಪಾಟೀಲ್‌ ಅವರು ಆಸಕ್ತಿ ವಹಿಸಿ ವರ್ಷದಲ್ಲಿ ಕನಿಷ್ಠ 60 ದಿನಗಳಾದರೂ ಅಧಿವೇಶನ ನಡೆಸುವ ಕುರಿತು ಎರಡೂ ಸದನಗಳ ಸಭಾಧ್ಯಕ್ಷರು ಮತ್ತು ಸಭಾಪತಿಗಳು, ಪ್ರತಿಪಕ್ಷಗಳ ನಾಯಕರ ಮನವೊಲಿಸಿ ಕಾನೂನು ತಿದ್ದುಪಡಿ ಮಾಡಿದ್ದರು. ಆ ನಂತರ ಅಧಿಕಾರಕ್ಕೆ ಬಂದ ಜೆಡಿಎಸ್‌-ಬಿಜೆಪಿ ಸಮ್ಮಿಶ್ರ ಸರ್ಕಾರ, ಬಿಜೆಪಿ ಹಾಗೂ ಈಗಿನ ಕಾಂಗ್ರೆಸ್‌ ಸರ್ಕಾರ ಕೂಡ ವರ್ಷದಲ್ಲಿ ಕನಿಷ್ಠ 60 ದಿನ ಅಧಿವೇಶನ ನಡೆಸುವ ಗೋಜಿಗೆ ಹೋಗಿಲ್ಲ. ಆ ಬಗ್ಗೆ ಸರ್ಕಾರ ಅಷ್ಟೊಂದು ಆಸಕ್ತಿ ಕೂಡ ತೋರಿದಂತೆ ಕಾಣುತ್ತಿಲ್ಲ.

2013 ರ ರಿಂದ ಇಲ್ಲಿಯವರೆಗೆ ನಾಲ್ಕುವರೆ ವರ್ಷದಲ್ಲಿ 2015 ರಲ್ಲಿ 58 ದಿನ ನಡೆದಿದ್ದು ಬಿಟ್ಟರೆ, 2013 ರಲ್ಲಿ ಕೇವಲ 35 ದಿನ, 2014 ರಲ್ಲಿ 53 ದಿನ ಹಾಗೂ 2016 ರಲ್ಲಿ 35 ದಿನ 2017 ರಲ್ಲಿ ಇದುವರೆಗೂ 30 ದಿನಗಳು ಅಧಿವೇಶನ ನಡೆದಿದ್ದು, ನವೆಂಬರ್‌ 13 ರ ರಿಂದ  10 ದಿನ ನಡೆಯುವ ಬೆಳಗಾವಿಯ ಚಳಿಗಾಲದ ಅಧಿವೇಶನವನ್ನು ಸೇರಿಸಿದರೆ, 40 ದಿನ ಅಧಿವೇಶನ ನಡೆಸಿದಂತಾಗುತ್ತದೆ.

Advertisement

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರಕ್ಕೆ ಸಂಪೂರ್ಣ ಬಹುಮತವಿದ್ದರೂ, ಮತ್ತು ಸರ್ಕಾರದಲ್ಲಿ ಯಾವುದೇ ರಾಜಕೀಯ ಅರಾಜಕತೆ ಸೃಷ್ಠಿಯಾಗದೇ ಸರಳವಾಗಿ ಆಡಳಿತ ನಡೆಯುತ್ತಿದ್ದರೂ ವರ್ಷಕ್ಕೆ ಅರವತ್ತು ದಿನ ಅಧಿವೇಶನ ನಡೆಯಲಿಲ್ಲ.

ಬ್ರಿಟಿಷ್‌ ಪಾರ್ಲಿಮೆಂಟ್‌ ಹಾಗೂ ಭಾರತದ ಸಂಸತ್ತಿನಲ್ಲಿ ವಾರ್ಷಿಕ ಅಧಿವೇಶನ ನಡೆಯುವ ವೇಳಾಪಟ್ಟಿ ವರ್ಷಾರಂಭದಲ್ಲಿಯೇ ನಿಗದಿ ಮಾಡಲಾಗುತ್ತದೆ. ಅದೇ ಮಾದರಿಯಲ್ಲಿ ರಾಜ್ಯ ವಿಧಾನ ಮಂಡಲದ ಅಧಿವೇಶನವೂ ನಡೆಯಲಿ ಎನ್ನುವ ಉದ್ದೇಶದಿಂದ ಜನವರಿಯಲ್ಲಿ ರಾಜ್ಯಪಾಲರ ಜಂಟಿ ಅಧಿವೇಶನ, ಮಾರ್ಚ್‌ನಲ್ಲಿ ಬಜೆಟ್‌ ಅಧಿವೇಶನ, ಜುಲೈನಲ್ಲಿ ಮಳೆಗಾಲದ ಅಧಿವೇಶನ ಮಾಡಿ ಇಲಾಖೆಗಳ ಬೇಡಿಕೆಗಳ ಮೇಲಿನ ಚರ್ಚೆಗೆ ಅವಕಾಶ ಕಲ್ಪಿಸುವುದು ಹಾಗೂ ನವೆಂಬರ್‌ನಲ್ಲಿ ಚಳಿಗಾಲದ ಅಧಿವೇಶನ ನಡೆಸುವ ಕುರಿತಂತೆ ನಿರ್ಧಾರ ಕೈಗೊಳ್ಳಲಾಗಿದೆ.

ಆದರೆ, ಸರ್ಕಾರದ ಇಚ್ಚೆಯಂತೆ ಅನುಕೂಲಕ್ಕೆ ತಕ್ಕಂತೆ ಅಧಿವೇಶನ ನಡೆಯುವಂತಾಗಿದ್ದು, ವಿಧಾನ ಮಂಡಲದ ಅಧಿವೇಶನ ಕಾಟಾಚಾರದ ಕಲಾಪಗಳಾಗಿ ಮಾರ್ಪಾಡಾಗುವಂತಾಗಿದೆ. ಇದರಲ್ಲಿ ಪ್ರತಿಪಕ್ಷಗಳ ಪಾತ್ರವೂ ಇದ್ದು, ವಿಧಾನ ಸ‌ಭಾಧ್ಯಕ್ಷರು, ಸಭಾಪತಿ ಹಾಗೂ ಎರಡೂ ಸದನಗಳ ಪ್ರತಿಪಕ್ಷಗಳ ನಾಯಕರನ್ನೊಳಗೊಂಡ ಸದನ ಸಲಹಾ ಸಮಿತಿಯಲ್ಲಿಯೇ ಅಧಿವೇಶನ ಎಷ್ಟು ದಿನ ನಡೆಯಬೇಕೆಂದು ನಿರ್ಧರಿಸಲು ಅವಕಾಶವಿದೆ.

ಈ ವಿಚಾರದಲ್ಲಿ ಎಲ್ಲರ ಪಾತ್ರವೂ ಇದೆ. ಪ್ರತಿಪಕ್ಷಗಳು ಇದರ ಜವಾಬ್ದಾರಿ ನೋಡಿಕೊಳ್ಳಬೇಕು. ವರ್ಷದ ಆರಂಭದಲ್ಲಿಯೇ ಅಧಿವೇಶನದ ದಿನಾಂಕ ನಿಗದಿ ಮಾಡಿದರೆ, ಶಾಸಕರಿಗೂ ಅನುಕೂಲ ಆಗುತ್ತದೆ. ಆ ಸಂದರ್ಭದಲ್ಲಿ ಬೇರೆ ಕಾರ್ಯಕ್ರಮ ಬಿಟ್ಟು ಎಲ್ಲರೂ ಅಧಿವೇಶನದಲ್ಲಿ ಪಾಲ್ಗೊಳ್ಳಲು ಅನುಕೂಲ ಆಗುತ್ತದೆ.
– ವಿ. ಆರ್‌. ಸುದರ್ಶನ್‌, ಪರಿಷತ್‌ನ ಮಾಜಿ ಸಭಾಪತಿ

– ಶಂಕರ್‌ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next