ಮಹಾನಗರ: ಮಂಗಳೂರು ನಗರ ವ್ಯಾಪ್ತಿಯಲ್ಲಿ ಒಟ್ಟು 34 ಸರಕಾರಿ ನರ್ಮ್ ಬಸ್‌ಗಳು ದಿನಂಪ್ರತಿ 343 ಮಾರ್ಗಗಳಲ್ಲಿ ಸಂಚರಿಸುತ್ತಿದ್ದರೆ, ಉಳಿದ 14 ನರ್ಮ್ ಬಸ್‌ಗಳು ಕಾನೂನಾತ್ಮಕ ವಿಚಾರದಿಂದಾಗಿ ತಡೆಯಲ್ಲಿದೆ. 2016 ರಿಂದ ಇದು ಇತ್ಯರ್ಥವಾಗಿಲ್ಲ. ಹೀಗಾಗಿ ರಾಜ್ಯ ಸರಕಾರದ “ಶಕ್ತಿ’ ಯೋಜನೆ ನಗರ ವ್ಯಾಪ್ತಿಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮಹಿಳೆಯರಿಗೆ ತಲುಪುತ್ತಿಲ್ಲ!
ವಾಹನ ದಟ್ಟಣೆ ಅಧಿಕಗೊಂಡಿರುವ ಹಿನ್ನೆಲೆಯಲ್ಲಿ ಮಂಗಳೂರು ಹಂಪನಕಟ್ಟೆ ಪ್ರದೇಶಕ್ಕೆ ಹೊಸ ಬಸ್ ಪರವಾನಿಗೆ ನಿರ್ಬಂಧಿಸಿ ಉಭಯ ಜಿಲ್ಲೆಗಳ ದಂಡಾಧಿ ಕಾರಿಗಳು (ಡಿಸಿ) 1993ರ ಎ. 6ರಂದು ಅಧಿಸೂಚನೆ ಹೊರಡಿಸಿದ್ದರು. ಇದರ ಪ್ರಕಾರ ಮಂಗಳೂರಿನಲ್ಲಿರುವ ಕೊಟ್ಟಾರ ಕ್ರಾಸ್, ಕೆಪಿಟಿ, ಮಲ್ಲಿಕಟ್ಟೆ, ಕಂಕನಾಡಿ ಪ್ರದೇಶ ದಾಟಿ ಬಸ್‌ಗಳು ನಗರ ಪ್ರವೇಶಿ ಸಲು ಹೊಸ ಪರವಾನಿಗೆ ಒದಗಿ ಸಲು ಅವಕಾಶವಿಲ್ಲ. ಇದರಿಂದಾಗಿ ನರ್ಮ್ನ ಕೆಲವು ಬಸ್ ಸಂಚಾರಕ್ಕೆ ಸಮಸ್ಯೆ ಎದು ರಾಗಿದೆ. ಇದರ ತೆರವು ಮಾಡುವ ನಿಟ್ಟಿನಲ್ಲಿ ಪೂರಕ ಕ್ರಮಗಳು ನಡೆಯ ಬೇಕಿದೆ.
ಪ್ರಸ್ತಾವಿತ ಅಧಿಸೂಚನೆ ಆದ ಬಳಿಕ ನಗರದ ಪ್ರಮುಖ ರಸ್ತೆಗಳು ಅಗಲಗೊಂಡಿವೆ. ನಗರದಲ್ಲಿ ಅಧಿಕ ಜನರು ಬರುವ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ನಗರದ ಹೊರವಲಯಕ್ಕೆ ಸ್ಥಳಾಂತರಕ್ಕೆ ಸಜ್ಜಾಗುತ್ತಿದೆ. ಕಂಟ್ರ್ಯಾಕ್ಟ್ ಕ್ಯಾರಿಯೇಜ್ ಬಸ್‌ಗಳು ಓಡಾಡುತ್ತಿವೆ. ಆದರೆ ಅಧಿ ಸೂಚನೆಯ ನೆಪವಾಗಿಟ್ಟುಕೊಂಡು ಹೊಸ ಮಾರ್ಗಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಆರಂಭಿಸಲು ಅಡ್ಡಿ ಪಡಿಸಲಾಗುತ್ತಿರುವುದು ಸರಿಯಲ್ಲ ಎಂಬುದು ಪ್ರಯಾಣಿಕರ ವಾದ. ಆದರೆ “ಮಂಗಳೂರು ನಗರ ಸಾರಿಗೆ ಬಸ್‌ಗಳಿಗೆ ಬಿಜೈ ನಿಲ್ದಾಣ ಪ್ರವೇಶಿಸಲು ಜಿಲ್ಲಾಧಿಕಾರಿ ಅಧಿಸೂಚನೆ ಅನ್ವಯ ಅವಕಾಶವಿಲ್ಲ. ಜಿಲ್ಲಾಧಿಕಾರಿ ಅಧಿಸೂಚನೆ ರಿಯಾಯಿತಿ ಕೋರಿ ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗ ಪ್ರತಿವರ್ಷ ಜಿಲ್ಲಾಡಳಿತಕ್ಕೆ ಅರ್ಜಿ ಸಲ್ಲಿಸುತ್ತಲೇ ಇದೆ’ ಎಂಬುದು ಕೆಎಸ್‌ಆರ್‌ಟಿಸಿ ವಾದ.
ಸಾಮಾಜಿಕ ಹೋರಾಟಗಾರ ಬಿ.ಕೆ. ಇಮಿ¤ಯಾಜ್ ಅವರ ಪ್ರಕಾರ “ನರ್ಮ್ ಓಡಾಟಕ್ಕೆ ಖಾಸಗಿ ಬಸ್ ಮಾಲಕರು ಹೈಕೋರ್ಟ್ ಮೆಟ್ಟಿಲೇರಿ ತಡೆ ಹೇರಿತ್ತು. ಮುಂದೆ ನರ್ಮ್ ಸಾರಿಗೆ ಸೇವೆಗೆ ಸಂಬಂಧಿಸಿದ ಹೈಕೋರ್ಟ್ ಆ ದೂರನ್ನು ಜಿಲ್ಲಾಧಿಕಾರಿ ಹಂತದಲ್ಲಿ ಇತ್ಯರ್ಥ ಪಡಿಸಲು ನಿರ್ದೇಶನ ನೀಡಿತ್ತು. ಆದರೆ ಈ ಸರಕಾರಿ ಬಸ್ ಸೇವೆ ಮಾತ್ರ ಆರಂಭವಾಗಿಲ್ಲ’ ಎನ್ನುತ್ತಾರೆ. ಪ್ರಸ್ತುತ ಮಂಗಳೂರು ನಗರದಿಂದ ಮುಡಿಪು ಮಾರ್ಗದಲ್ಲಿ ಗರಿಷ್ಠ 8 ನರ್ಮ್ ಬಸ್‌ಗಳು ಇವೆ. ಅಡ್ಯಾರ್ ಪದವು, ಬಜಪೆ, ಉಳಾಯಿಬೆಟ್ಟು, ಖಡೆYàಶ್ವರೀ, ಗುರುಪುರ – ಕೈಕಂಬ, ಸೋಮೇಶ್ವರ, ವಾಮಂಜೂರು, ಕುಂಜತ್ತಬೈಲು, ರೆಹ್ಮತ್ ನಗರ, ಎಂಆರ್‌ಪಿಎಲ್, ಕಿನ್ಯಾ, ಪರಪ್ಪು, ಹರೇಕಳ, ಮಂಗಳೂರು ಜಂಕ್ಷನ್, ರೈಲ್ವೇ ಸ್ಟೇಶನ್, ಬಜಾಲ್‌ಪಡು³, ಲ್ಯಾಂಡ್‌ಲಿಂಕ್ಸ್, ಕುಂಪಲ, ಪೊಳಲಿ ಮಾರ್ಗಗಳಲ್ಲಿ ಬಸ್‌ಗಳಿವೆ.
ಮೂಡುಬಿದಿರೆಗೆ ಬೇಡಿಕೆ
ಮೂಡುಬಿದಿರೆ ಮಾರ್ಗದಲ್ಲಿ ಗುರುಪುರ ಹಳೇ ಸೇತುವೆ ದುರ್ಬಲವಾಗಿದೆ ಎಂದು ಕೆಎಸ್‌ಆರ್‌ಟಿಸಿ ಬಸ್‌ಗೆ ದೊರೆತ ಪರವಾನಿಗೆ ತಡೆಹಿಡಿಯಲಾಗಿತ್ತು. ಹೊಸ ಸೇತುವೆ ನಿರ್ಮಾಣ ಬಳಿಕ ಎಂಟು ಬಸ್‌ಗಳಿಗೆ 56 ಟ್ರಿಪ್ ಓಡಿಸಲು ಕೆಎಸ್‌ಆರ್‌ಟಿಸಿ ಪರವಾನಿಗೆ ಕೇಳಿತ್ತು. ಆದರೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಒಂದು ಬಸ್‌ಗೆ ಮೂರು ಸಿಂಗಲ್ ಟ್ರಿಪ್ ಮಾತ್ರ ಅನುಮತಿ ನೀಡಿದೆ. ಈ ಕ್ರಮದ ವಿರುದ್ಧ ಕೆಎಸ್‌ಆರ್‌ಟಿಸಿ ನ್ಯಾಯಾಲಯದ ಮೆಟ್ಟಿಲೇರಿದೆ.
ಚರ್ಚಿಸಿ ಕ್ರಮ
ಮಂಗಳೂರಿನಲ್ಲಿ ನರ್ಮ್ ಬಸ್‌ಗೆ ಈಗಾಗಲೇ ಪರವಾನಿಗೆ ನೀಡಲಾಗಿದೆ. ಸಂಚಾರ ನಡೆಸದ ನರ್ಮ್ ಬಸ್‌ಗಳ ಬಗ್ಗೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಜತೆಗೆ ಚರ್ಚಿಸಿ ಪೂರಕ ಕ್ರಮಗಳನ್ನು ಕೈಗೊಳ್ಳಲಾಗುವುದು.
-ಜೋನ್ ಬಿ. ಮಿಸ್ಕಿತ್,
ಆರ್‌ಟಿಒ, ಮಂಗಳೂರು