ದಾವಣಗೆರೆ: ಮಧ್ಯಪ್ರದೇಶದ ಮಂದ್‌ಸೌರ್‌ನಲ್ಲಿ ರೈತರ ಮೇಲೆ ನಡೆದ ಗೋಲಿಬಾರ್ ಖಂಡಿಸಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ(ಕಮ್ಯೂನಿಸ್ಟ್) ಕಾರ್ಯಕರ್ತರು ಶುಕ್ರವಾರ ಮಹಾತ್ಮಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಮಂದಸೌರ್‌ನಲ್ಲಿ ರೈತರು ಈರುಳ್ಳಿಗೆ ಬೆಂಬಲ ಬೆಲೆ ಹಾಗೂ ಸಾಲಮನ್ನಾಕ್ಕೆ ಒತ್ತಾಯಿಸಿ ಹೋರಾಟ ನಡೆಸುತ್ತಿದ್ದ ವೇಳೆ ಪೊಲೀಸರ ಗೋಲಿಬಾರ್ ಗೆ 6 ಮಂದಿ ರೈತರು ಬಲಿಯಾದರು. ನ್ಯಾಯೋಚಿತ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಹೋರಾಟ ನಡೆಸುತ್ತಿದ್ದ ಅನ್ನದಾತರ ಮೇಲೆ ಬಿಜೆಪಿ ಸರ್ಕಾರ ಗೋಲಿಬಾರ್ ನಡೆಸಿದ್ದು ಅತ್ಯಂತ ಖಂಡನೀಯ.
ಗೋಲಿಬಾರ್‌ನಲ್ಲಿ ಜೀವ ಕಳೆದುಕೊಂಡಿರುವ ರೈತರ ಕುಟುಂಬಕ್ಕೆ, ಗಾಯಗೊಂಡವರಿಗೆ ಸೂಕ್ತ ಪರಿಹಾರ ಒದಗಿಸಬೇಕು ಹಾಗೂ ಎಲ್ಲಾ ಬೇಡಿಕೆ ಈಡೇರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಕೇಂದ್ರದ ಬಿಜೆಪಿ ಸರ್ಕಾರ ಸಂಪೂರ್ಣವಾಗಿ ಬಂಡವಾಳಪರ ನಿಂತಿದೆ. ಕಾರ್ಪೋರೇಷನ್ ಕಂಪನಿಗಳ ಕೋಟ್ಯಾಂತರ ಸಾಲ ಮನ್ನಾ ಮಾಡುವ ಸರ್ಕಾರ ರೈತರ ಸಾಲ ಮನ್ನಾಕ್ಕೆ ತಾರತಮ್ಯ ಮಾಡುತ್ತಿದೆ.
ಮತ ಪಡೆಯುವುದಕ್ಕಾಗಿ ಉತ್ತರ ಪ್ರದೇಶದಲ್ಲಿ ಸಾಲ ಮನ್ನಾಮಾಡುವ ಘೋಷಣೆ ಮಾಡಿದ್ದ ಬಿಜೆಪಿ, ಅಲ್ಲಿ ಅಧಿಕಾರಕ್ಕೆ ಬರುತ್ತಿದ್ದಂತೆ ಸಾಲ ಮನ್ನಾ ಮಾಡಿದೆ. ಆದರೆ, ಮಧ್ಯಪ್ರದೇಶದಲ್ಲಿ ಸಾಲ ಮನ್ನಾ ಮಾಡುತ್ತಿಲ್ಲ. ಇಂತಹ ರೈತ, ಜನ ವಿರೋಧಿ ನೀತಿ ಅನುಸರಿಸಲಾಗುತ್ತಿದೆ ಎಂದು ದೂರಿದರು.
ರೈತರು ದೇಶದ ಬೆನ್ನೆಲುಬು ಎನ್ನುವ ಸರ್ಕಾರ ಅವರ ಬೇಡಿಕೆ ಈಡೇರಿಸುವತ್ತ ಗಮನ ನೀಡುವುದಿಲ್ಲ. ದಬ್ಟಾಳಿಕೆ, ದೌರ್ಜನ್ಯದ ಮೂಲಕ ರೈತರ ಹೋರಾಟ ಹತ್ತಿಕ್ಕಲಾಗುತ್ತದೆ. ಪೊಲೀಸರ ಮೂಲಕ ಗೂಂಡಾಗಿರಿ ನಡೆಸಲಾಗುತ್ತಿದೆ. ಮಂದಸೌರ್ ಗೋಲಿಬಾರ್ ಪ್ರಕರಣಕ್ಕೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಕಾರಣರಾದ ಎಲ್ಲರ ವಿರುದ್ಧ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರನ್ನ ಕಠಿಣ ಶಿಕ್ಷೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಸಂಚಾಲಕ ಮಂಜುನಾಥ್ ಕೈದಾಳೆ, ಮಂಜುನಾಥ್ ಕುಕ್ಕುವಾಡ, ತಿಪ್ಪೇಸ್ವಾಮಿ, ಬನಶ್ರೀ, ಪರಶುರಾಮ್, ಜ್ಯೋತಿ, ಭಾರತಿ, ನಾಗಜ್ಯೋತಿ, ನಾಗಸ್ಮಿತಾ, ರಾಘವೇಂದ್ರನಾಯಕ್, ಪೂಜಾ, ಜ್ಯೋತಿ ಕುಕ್ಕುವಾಡ, ಮಂಜುನಾಥರೆಡ್ಡಿ, ಗುರು, ಶಿವಾಜಿರಾವ್ ಡಾಗೆ, ಭವಾನಿರಾವ್ ಇತರರು ಇದ್ದರು.