Advertisement

ಅಕ್ರಮ ವಲಸಿಗರ ಮಾಹಿತಿಗೆ ಸಮೀಕ್ಷೆ: ಬೊಮ್ಮಾಯಿ

11:33 PM Dec 10, 2019 | Team Udayavani |

ಹರಿಹರ: ರಾಜ್ಯದಲ್ಲಿ ನೆಲೆಸಿರುವ ಅಕ್ರಮ ವಲಸಿಗರ ಸಂಖ್ಯೆ ಕುರಿತು ಮಾಹಿತಿ ಇಲ್ಲದ್ದರಿಂದ ಸಮೀಕ್ಷೆ ನಡೆಸಲು ಪೊಲೀಸ್‌ ಠಾಣೆಗಳಿಗೆ ಸೂಚಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು. ತಾಲೂಕಿನ ಹನಗವಾಡಿ ಸಮೀಪದ ವೀರಶೈವ ಲಿಂಗಾಯಿತ ಪಂಚಮಸಾಲಿ ಮಠಕ್ಕೆ ಮಂಗಳವಾರ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.

Advertisement

ರಾಜ್ಯದ ಎಲ್ಲಾ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಇರಬಹುದಾದ ಬೇರೆ ರಾಷ್ಟ್ರದ ಪ್ರಜೆಗಳ ಕುರಿತು ಈಗಾಗಲೆ ಸರ್ವೇ ಕಾರ್ಯ ನಡೆದಿದೆ. ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ರಾಷ್ಟ್ರೀಯ ನೀತಿಯಾಗಬೇಕೆಂಬುದು ಕೇಂದ್ರ ಸರ್ಕಾರದ ಆಶಯ. ರಾಜ್ಯದಲ್ಲಿ ಎಷ್ಟು ಜನ ವಿದೇಶಿಯರಿದ್ದಾರೆಂದು ಈವರೆಗೂ ಅಂದಾಜು ಸಿಕ್ಕದ ಕಾರಣ ರಾಜ್ಯದಲ್ಲಿನ ಎಲ್ಲಾ ಭಾಗದಲ್ಲೂ ಸರ್ವೇ ಕಾರ್ಯ ಕೈಗೊಳ್ಳಲು ಠಾಣೆಗಳಿಗೂ ಸೂಚನೆ ನೀಡಲಾಗುತ್ತಿದೆ ಎಂದರು.

ಬೇರೆ ರಾಷ್ಟ್ರದ ಪ್ರಜೆಗಳ ಪತ್ತೆ ಮಾಡುವುದು ಅವರನ್ನು ಅವರ ಮಾತೃದೇಶಕ್ಕೆ ಹಸ್ತಾಂತರ ಮಾಡುವುದು ಎನ್‌ಆರ್‌ಸಿ ಉದ್ದೇಶವಾಗಿದ್ದು, ಈಗಾಗಲೇ ನೈಜೀರಿಯಾದ 16 ಜನರು, 63 ಬಾಂಗ್ಲಾ ನಾಗರಿಕರನ್ನು ಪತ್ತೆ ಹಚ್ಚಿ ಅವರವರ ದೇಶಕ್ಕೆ ಹಸ್ತಾಂತರಿಸಲಾಗಿದೆ. ನೆರೆಯ ಪಾಕಿಸ್ತಾನ, ಬಾಂಗ್ಲಾ, ಅಪಘಾನಿಸ್ತಾನ ಮುಂತಾದ ರಾಷ್ಟ್ರಗಳು ಇಸ್ಲಾಂ ಧರ್ಮಾಧಾರಿತ ರಾಷ್ಟ್ರಗಳಾಗಿದ್ದು, ಮುಸ್ಲಿಮರಿಗೆ ಅಬಾಧಿತವಾಗಿ ಆಶ್ರಯ ನೀಡುತ್ತಿವೆ.

ಆದರೆ ಈ ರಾಷ್ಟ್ರಗಳಿಂದ ಹೊರದಬ್ಬಲ್ಪಡುವ ಹಿಂದೂ, ಸಿಖ್‌, ಬೌದ್ಧ, ಪಾರ್ಸಿ, ಜೈನ, ಕ್ರಿಶ್ಚಿಯನ್‌ರಿಗೆ ವಾಸಿಸಲು ಬೇರೆ ಸ್ಥಳಗಳಿಲ್ಲದ ಕಾರಣ ಅವರಿಗೆ ಭಾರತದ ನಾಗರಿಕತ್ವ ನೀಡುವ ಪೌರತ್ವ ತಿದ್ದುಪಡಿ ಕಾಯ್ದೆ ಅಗತ್ಯವಾಗಿ ಬೇಕಿದೆ ಎಂದರು. ಸಿಎಂ ಬಿಎಸ್‌ವೈ ಎರಡು ಅಂಶಗಳನ್ನು ಹೇಳಿದ್ದಾರೆ. ಮೊದಲನೆಯದಾಗಿ ಆಡಳಿತ ಯಂತ್ರವನ್ನು ಚುರುಕು ಮಾಡಿ ಸುಧಾರಣೆ ತರುವುದು, ಎರಡನೆಯದಾಗಿ ಅಭಿವೃದ್ಧಿ ಕಾರ್ಯಕ್ಕೆ ಗಮನ ನೀಡುವುದು.

ಫೆಬ್ರವರಿ ತಿಂಗಳಲ್ಲಿ ರಾಜ್ಯ ಬಜೆಟ್‌ ಮಂಡನೆಯಾಗಲಿದ್ದು, ಈಗಾಗಲೇ ಎಲ್ಲಾ ಇಲಾಖೆಗಳ ಕಾರ್ಯಕ್ರಮಗಳ ಪರಮಾರ್ಶೆ ಮಾಡಲು ಹಾಗೂ ಬಜೆಟ್‌ಗೆ ಸಿದ್ಧತೆ ಮಾಡಿಕೊಳ್ಳಲು ಸೂಚಿಸಲಾಗಿದೆ ಎಂದರು. ಉಪ ಚುನಾವಣೆಯಲ್ಲಿ ತೋಳ್ಬಲ, ಹಣಬಲದಿಂದ ಬಿಜೆಪಿಗೆ ಜಯಸಿಕ್ಕಿದೆ ಎನ್ನುವುದು ಸೋತಾಗ ಮಾಡುವ ಸಾಮಾನ್ಯ ಆರೋಪ.

Advertisement

ಈ ಹಿಂದೆ ರಾಣಿಬೆನ್ನೂರು ಕ್ಷೇತ್ರದಲ್ಲಿ ಐದು ಬಾರಿ ಗೆದ್ದ ಕಾಂಗ್ರೆಸ್‌ ಅಭ್ಯರ್ಥಿ ಚುನಾವಣೆ ಹೇಗೆ ಮಾಡಿದ್ದರೆಂದು ನಾವೂ ಪ್ರಶ್ನಿಸಬಹುದು. ಮಾಜಿ ಸಿಎಂ ಸಿದ್ದರಾಮಯ್ಯ ರಾಣಿಬೆನ್ನೂರಿಗೆ ಬಂದಾಗ ಹಣ ಹಂಚಿರುವ ವಿಷಯ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ ಎಂದರು. ಇದಕ್ಕೂ ಮುನ್ನ ಬೊಮ್ಮಾಯಿಯವರು ವಚನಾನಂದ ಸ್ವಾಮೀಜಿ ಆಶೀರ್ವಾದ ಪಡೆದರು. ರಾಣಿಬೆನ್ನೂರು ಶಾಸಕ ಅರುಣಕುಮಾರ್‌, ಪೀಠದ ಟ್ರಸ್ಟ್‌ ಧರ್ಮದರ್ಶಿ ಬಿ.ಸಿ.ಉಮಾಪತಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next