Advertisement

ಚಿತ್ತಾಪುರ ನಕ್ಷೆಯಿಂದ ಇಂಗಳಗಿ ಕೈಬಿಡಲು ಸಮೀಕ್ಷೆ

12:45 PM Jul 28, 2022 | Team Udayavani |

ವಾಡಿ: ಸಮೀಪದ ಇಂಗಳಗಿ ಗ್ರಾಮವನ್ನು ಚಿತ್ತಾಪುರ ತಾಲೂಕಿನಿಂದ ಬೇರ್ಪಡಿಸಿ ಶಹಾಬಾದ ತಾಲೂಕಿಗೆ ಸೇರ್ಪಡೆ ಮಾಡಬೇಕು ಎಂಬ ಒತ್ತಾಯದ ಧ್ವನಿಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಜನಾಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದ್ದಾರೆ. ಬುಧವಾರ ಅನಿರೀಕ್ಷಿತವಾಗಿ ಗ್ರಾಮಕ್ಕೆ ಭೇಟಿ ನೀಡಿದ ಕಂದಾಯ ಅಧಿಕಾರಿ ನೇತೃತ್ವದ ಸಮೀಕ್ಷಾ ತಂಡವೊಂದು ಸೀಮಿತ ಮುಖಂಡರ ಸಭೆ ನಡೆಸಿ ಅಭಿಪ್ರಾಯ ಆಲಿಸುವ ಪ್ರಯತ್ನ ನಡೆಸಿತು.

Advertisement

ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಸೇರಿದ್ದ ಮುಖಂಡರು ಇಂಗಳಗಿ ಗ್ರಾಮವನ್ನು ಚಿತ್ತಾಪುರ ತಾಲೂಕಿನಿಂದ ಮುಕ್ತಗೊಳಿಸಿ ಶಹಾಬಾದ ತಾಲೂಕಿಗೆ ಸೇರಿಸುವ ವಿಚಾರದಲ್ಲಿ ಪರ ಮತ್ತು ವಿರೋಧದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಚಿತ್ತಾಪುರ ತಾಲೂಕು ವಿಂಗಡಣೆಯಿಂದ ಉದಯಿಸಿರುವ ಶಹಾಬಾದ ನೂತನ ತಾಲೂಕಿಗೆ ಇನ್ನಷ್ಟು ಗ್ರಾಮಗಳ ಕೊರತೆ ಎದುರಾಗಿದೆ. ಪಕ್ಕದ ಕಾಗಿಣಾ ನದಿಯಾಚೆಯ ಇಂಗಳಗಿ ಗ್ರಾಮದ ಮೇಲೆ ಬಿಜೆಪಿ ಜನಪ್ರತಿನಿಧಿಗಳ ಕಣ್ಣು ಬಿದ್ದಿದೆ. ಶಹಾಬಾದ್‌ಗೆ ಸೇರಿದರೆ ತಾಲೂಕು ಕಚೇರಿಗಳು ತೀರಾ ಹತ್ತಿರವಾಗುತ್ತವೆ ಎಂಬ ಚಿಂತನೆ ಬಿತ್ತಿದ್ದಾರೆ. ಈಗ ತಾಲೂಕು ಬದಲಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮತಕ್ಷೇತ್ರವನ್ನು ಬದಲಿಸುತ್ತಾರೆ. ಎಕರೆಗೆ ಕೇವಲ 3ಲಕ್ಷ ರೂ.ದಂತೆ ಎರಡು ಸಾವಿರ ಎಕರೆ ಭೂಮಿ ಖರೀದಿ ಮಾಡಿದ್ದ ಎಸಿಸಿ ಕಂಪನಿಯಿಂದ ಗ್ರಾಮಸ್ಥರ ಮನವಿ ಮೇರೆಗೆ ಎಕರೆಗೆ 12ಲಕ್ಷ ರೂ. ಮೌಲ್ಯ ದೊರಕಿಸಿಕೊಟ್ಟ ಶಾಸಕ ಪ್ರಿಯಾಂಕ್‌ ಖರ್ಗೆ ಅವರ ಋಣವನ್ನು ಗ್ರಾಮಸ್ಥರು ಎಂದಿಗೂ ಮರೆಯುವಂತಿಲ್ಲ.

ಇಂಗಳಗಿ-ಶಹಾಬಾದ ರಸ್ತೆ ಸೌಲಭ್ಯ, ಸರಕಾರಿ ಶಾಲಾ ಕಟ್ಟಡಗಳ ಜತೆಗೆ ವಾಡಿ-ಇಂಗಳಗಿ ರಸ್ತೆಗೂ ನೀಲನಕ್ಷೆ ಸಿದ್ಧಪಡಿಸಿದ್ದಾರೆ. ಇಂಥಹ ಶಾಸಕರನ್ನು ತೊರೆಯಲು ನಾವು ಸಿದ್ಧರಿಲ್ಲ. ವಾಡಿ ಪಟ್ಟಣವನ್ನು ಹೋಬಳಿಯನ್ನಾಗಿ ಘೋಷಿಸಿ ನೆಮ್ಮದಿ ಕೇಂದ್ರ ಸ್ಥಾಪಿಸಿದರೆ ಇಂಗಳಗಿಯನ್ನು ಶಹಾಬಾದಗೆ ಸೇರಿಸುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಕಾಂಗ್ರೆಸ್‌ ಯುವ ಮುಖಂಡ, ಗ್ರಾಪಂ ಸದಸ್ಯ ಮಹ್ಮದ್‌ ಗೌಸ್‌ ದುದ್ಧನಿ ಹಾಗೂ ಇತರರು ತಮ್ಮ ವಾದ ಮುಂದಿಟ್ಟರು. ಇಂಗಳಗಿ ಗ್ರಾಮಕ್ಕೆ ಚಿತ್ತಾಪುರ ತಾಲೂಕು ಕೇಂದ್ರ ಬಹಳ ದೂರದಲ್ಲಿದೆ. ಶಹಾಬಾದ ನಗರ ಅತ್ಯಂತ ಸಮೀಪದಲ್ಲಿದೆ. ಸರ್ಕಾರಿ ಕಚೇರಿಯ ಕೆಲಸಕಾರ್ಯಗಳನ್ನು ಸುಲಭ ರೀತಿಯಲ್ಲಿ ಮಾಡಿಕೊಳ್ಳಬಹುದಾಗಿದೆ. ಇಂಗಳಗಿ ಗ್ರಾಮವನ್ನು ಶಹಾಬಾದ ತಾಲೂಕಿಗೆ ಸೇರ್ಪಡೆ ಮಾಡುವುದೇ ಸೂಕ್ತ ಎಂದು ಮುಖಂಡ ಸಾಯಬಣ್ಣ ಗುಡುಬಾ, ಬಸವರಾಜ ಸ್ಥಾವರಮಠ ಹಾಗೂ ಇತರರು ವಾದಿಸಿದರು.

ಇಂಗಳಗಿ ಗ್ರಾಮ ಶಹಾಬಾದ ತಾಲೂಕಿಗೆ ಸೇರಬೇಕೋ ಬೇಡವೋ ಎಂಬುದರ ಕುರಿತು ಪರ ಮತ್ತು ವಿರೋಧದ ದನಿಗಳು ಕೇಳಿಬಂದ ಪರಿಣಾಮ ಗ್ರಾಮದಲ್ಲಿ ಡಂಗೂರ ಹೊಡೆಸಿ ಮತ್ತೂಮ್ಮೆ ಸಭೆ ಸೇರಿ ನಿರ್ಣಯ ತೆಗೆದುಕೊಳ್ಳೋಣ ಎಂದು ಹೇಳುವ ಮೂಲಕ ಗ್ರಾಪಂ ಅಧ್ಯಕ್ಷ ಸುಭಾಶ್ಚಂದ್ರ ಯಾಮೇರ ಪರಿಸ್ಥಿತಿ ತಿಳಿಗೊಳಿಸಿದರು.

Advertisement

ಗ್ರಾಮದ ಮುಖಂಡರಾದ ರುದ್ರುಗೌಡ ಪಾಟೀಲ, ಗುಂಡುಗೌಡ ಪಾಟೀಲ, ಶರಣಬಸು ರಾವೂರ, ಶ್ರೀಶೈಲ ನಾಟೀಕಾರ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next