ಚಿತ್ತಾಪುರ: ಪೊಲೀಸ್ ಠಾಣಾ ವ್ಯಾಪ್ತಿಯ ಬಹಾರಪೇಠ ತಾಂಡಾ ಹಾಗೂ ಆಲೂರು ಗ್ರಾಮದಲ್ಲಿನ ದೇವಸ್ಥಾನದಲ್ಲಿ ಕಳ್ಳತನ ನಡೆದ ಕುರಿತು ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೀರಪ್ಪ ಈರಪ್ಪ ಪೂಜಾರಿ (35) ಎಂಬಾತನನ್ನು ಬಂಧಿಸಿ, ಆತನಿಂದ 1,80,500 ರೂ. ಮೌಲ್ಯದ ಬಂಗಾರ, ಬೆಳ್ಳಿ ಆಭರಣ, ನಗದು ಹಣ ಜಪ್ತಿ ಮಾಡಿಕೊಂಡಿದ್ದಾರೆ.
ನ. 31ರಂದು ಬಹಾರಪೇಠ ತಾಂಡಾ ಮತ್ತು ಡಿ. 8ರಂದು ಆಲೂರು ಗ್ರಾಮದಲ್ಲಿನ ಚೌರಮ್ಮ ಗುಡಿಯಲ್ಲಿ ಬಂಗಾರ, ಬೆಳ್ಳಿ ಆಭರಣ ಹಾಗೂ ಹುಂಡಿಯಲ್ಲಿನ ಹಣ ಕಳ್ಳತನವಾಗಿರುವ ಕುರಿತು ದೂರುದಾರರು ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸ್ ಅಧಿಕಾರಿಗಳು, ತಂಡ ರಚಿಸಿ ಶೋಧ ಕಾರ್ಯ ನಡೆಸಿದ್ದರು.
ಕಳ್ಳತನ ಪ್ರಕರಣದ ಜಾಡು ಹಿಡಿದು ಆರೋಪಿಗಳ ಪತ್ತೆಗೆ ಕಾರ್ಯಾಚರಣೆಯಲ್ಲಿದ್ದಾಗ ಪಟ್ಟಣದಲ್ಲಿ ವ್ಯಕ್ತಿಯೊಬ್ಬ ಸಂಶಯಾಸ್ಪದವಾಗಿ ಓಡಾಡುತ್ತಿರುವುದು ಕಂಡು ಬಂದಿದ್ದು, ಆತನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಎರಡು ಕಳ್ಳತನ ಪ್ರಕರಣದ ಜೊತೆಗೆ ವಾಡಿ ಠಾಣೆ ವ್ಯಾಪ್ತಿಯ ಬಸವನ ಖಣಿಯಲ್ಲಿನ ಸೇವಾಲಾಲ್ ಗುಡಿಯಲ್ಲಿ ನಡೆದ ಕಳ್ಳತನ ಪ್ರಕರಣವೂ ಬಯಲಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಸ್ಪಿ ಅಡ್ಡೂರು ಶ್ರೀನಿವಾಸಲು, ಹೆಚ್ಚುವರಿ ಎಸ್ಪಿ ಶ್ರೀನಿಧಿ, ಶಹಾಬಾದ್ ಡಿವೈಎಸ್ಪಿ ಶಂಕರಗೌಡ ಪಾಟೀಲ್, ಸಿಪಿಐ ಚಂದ್ರಶೇಖರ ತಿಗಡಿ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐಗಳಾದ ಶ್ರೀಶೈಲ್ ಅಂಬಾಟಿ, ಚಂದ್ರಾಮಪ್ಪ, ಸಿಬ್ಬಂದಿಗಳಾದ ಬಸವರಾಜ, ಸವಿಕುಮಾರ, ರವಿಕುಮಾರ, ಸಿದ್ದರಾಮೇಶ, ಈರೇಶ, ಮಂಜುನಾಥ ಅವರನ್ನೊಳಗೊಂಡ ತಂಡವು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.