Advertisement
ನಿಗಮ, ಮಂಡಳಿಗಳ ನೇಮಕಾತಿ ಸಂಬಂಧ ಇತ್ತೀಚೆಗೆ ದಿಲ್ಲಿಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ರಾಜ್ಯದಲ್ಲಿ ಪಕ್ಷದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುಜೇìವಾಲ ಅವರು ಲೋಕಸಭಾ ಚುನಾವಣೆ ತಯಾರಿ ಸಂಬಂಧ ನಡೆಸಿದ ಮಾತುಕತೆ ಸಂದರ್ಭದಲ್ಲಿ ಪಕ್ಷದ ವರಿಷ್ಠರ ಸೂಚನೆಯನ್ನು ಸುಜೇìವಾಲ ಅವರು ಸೂಚ್ಯವಾಗಿ ತಿಳಿಸಿದರೆಂದು ಗೊತ್ತಾಗಿದೆ.
ಈ ನಿರೀಕ್ಷೆಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಈಗ ರಾಜ್ಯದ ಒಂದು ಡಜನ್ ಸಚಿವರನ್ನು ಕಣಕ್ಕಿಳಿಸಲು ಚಿಂತನೆ ನಡೆಸಿದೆ. ಸಚಿವರೇ ಚುನಾವಣೆ ಕಣಕ್ಕೆ ಧುಮುಕುವುದರಿಂದ ಚುನಾವಣೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಎಲ್ಲರೂ ಕೆಲಸ ಮಾಡುತ್ತಾರೆ. ಬದಲಿಗೆ ಅವರ ಕುಟುಂಬ ಸದಸ್ಯರು ಇಲ್ಲವೇ ಸಂಬಂಧಿಕರನ್ನು ಕಣಕ್ಕಿಳಿಸುವ ಬಗ್ಗೆ ಹೈಕಮಾಂಡ್ ಅಷ್ಟೊಂದು ಒಲವು ತೋರುತ್ತಿಲ್ಲ. ಹೀಗಾಗಿ ಸಚಿವರೇ ಚುನಾವಣೆ ಕಣಕ್ಕಿಳಿಯುವುದು ಅನಿವಾರ್ಯ ಆಗಬಹುದು. ಯಾರ್ಯಾರು?
ಚಾಮರಾಜನಗರದಿಂದ ಸಮಾಜ ಕಲ್ಯಾಣ ಸಚಿವ ಡಾ| ಎಚ್.ಸಿ.ಮಹದೇವಪ್ಪ, ಬಳ್ಳಾರಿಯಿಂದ ಕ್ರೀಡಾ ಸಚಿವ ಬಿ.ನಾಗೇಂದ್ರ, ಬೆಂಗಳೂರು ಉತ್ತರದಿಂದ ಕಂದಾಯ ಸಚಿವ ಕೃಷ್ಣಬೈರೇಗೌಡ, ಕೋಲಾರದಿಂದ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಅಥವಾ ಗೃಹ ಸಚಿವ ಡಾ| ಜಿ.ಪರಮೇಶ್ವರ್, ಬೆಳಗಾವಿಯಿಂದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಮಂಡ್ಯದಿಂದ ಕೃಷಿ ಸಚಿವ ಚಲುವರಾಯಸ್ವಾಮಿ, ತುಮಕೂರಿನಿಂದ ಸಹಕಾರ ಸಚಿವ ಕೆ.ಎನ್.ರಾಜಣ್ಣ, ಬೆಂಗಳೂರು ಸೆಂಟ್ರಲ್‌ನಿಂದ ಇಂಧನ ಸಚಿವ ಕೆ.ಜೆ.ಜಾರ್ಜ್ ಅಥವಾ ವಸತಿ ಸಚಿವ ಜಮೀರ್ ಅಹ್ಮದ್ ಅಥವಾ ಶಾಂತಿನಗರ ಶಾಸಕ ಎನ್.ಎ.ಹ್ಯಾರೀಸ್ ಹಾಗೂ ಬೀದರ್‌ನಿಂದ ಅರಣ್ಯ ಸಚಿವ ಈಶ್ವರ ಖಂಡ್ರೆ, ಬಾಗಲಕೋಟೆಯಿಂದ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಅವರನ್ನು ಕಣಕ್ಕಿಳಿಸುವ ಬಗ್ಗೆ ಪ್ರಾಥಮಿಕ ಚರ್ಚೆಗಳು ಹೈಕಮಾಂಡ್ ಹಂತದಲ್ಲಿ ನಡೆದಿವೆ ಎಂದು ಉನ್ನತ ಮೂಲಗಳು ತಿಳಿಸಿವೆ.
Related Articles
ಬಹುತೇಕ ಹಿರಿಯ ಸಚಿವರೇ ಲೋಕಸಭಾ ಚುನಾವಣೆಯ ಅಭ್ಯರ್ಥಿಗಳಾಗುವುದರಿಂದ ಆಯಾ ಜಿಲ್ಲೆಯ ಸಚಿವರು ಒಗ್ಗಟ್ಟಾಗಿ ಕೆಲಸ ಮಾಡುವುದರಿಂದ ಒಳ್ಳೆಯ ಫಲಿತಾಂಶ ಬರಬಹುದೆಂಬ ಲೆಕ್ಕಾಚಾರವಿದೆ. ಜತೆಗೆ ಲೋಕಸಭೆಗೆ ಸಚಿವರು ಆಯ್ಕೆಯಾದ ಬಳಿಕ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ ಆ ಸ್ಥಾನಗಳಿಗೆ ಮತ್ತಷ್ಟು ಮಂದಿಯನ್ನು ತುಂಬುವ ಮೂಲಕ ಕಾಂಗ್ರೆಸ್ ಪಕ್ಷದೊಳಗಿನ ಅಸಮಾಧಾನವನ್ನು ಕಡಿಮೆ ಮಾಡಬಹುದು ಎಂಬುದು ಮತ್ತೂಂದು ಲೆಕ್ಕಾಚಾರ. ಆದರೆ ಸಚಿವರು ತೆರವು ಮಾಡುವ ಶಾಸಕ ಸ್ಥಾನಗಳಿಗೆ ನಡೆಯುವ ಉಪ ಚುನಾವಣೆಗಳನ್ನು ಗೆಲ್ಲುವ ಸವಾಲು ಕೂಡ ಸರಕಾರ ಹಾಗೂ ಪಕ್ಷದ ಮುಂದಿದೆ.
Advertisement