Advertisement

ಲಿವರ್‌ ಕಾಯಿಲೆಯಿಂದ ಬಳಲುತ್ತಿದ್ದ ಬಾಲಕಿಗೆ ಶಸ್ತ್ರಚಿಕಿತ್ಸೆ

04:20 PM Apr 18, 2022 | Niyatha Bhat |

ಶಿವಮೊಗ್ಗ: ಬೆಂಗಳೂರಿನ ಆಸ್ಟರ್‌ ಸಿಎಂಐ ಆಸ್ಪತ್ರೆಯಲ್ಲಿ ಅಪರೂಪದ ಅನುವಂಶಿಕ ಲಿವರ್‌ ಕಾಯಿಲೆಯಿಂದ ಬಳಲುತ್ತಿದ್ದ ಶಿವಮೊಗ್ಗದ ಬಾಲಕಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ಆಸ್ಟರ್‌ ಆಸ್ಪತ್ರೆಯ ತಜ್ಞ ಡಾ| ಮಲ್ಲಿಕಾರ್ಜುನ ಸಕ್ಬಾಲ್‌ ಹೇಳಿದರು.

Advertisement

ನಗರದ ಸರ್ಜಿ ಆಸ್ಪತ್ರೆಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 6 ವರ್ಷದ ಮಗು ದೀಕ್ಷಾ ಶಿವಮೊಗ್ಗದ ಸರ್ಜಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಅಲ್ಲಿ ಪರೀಕ್ಷೆ ಮಾಡಿದಾಗ ಆಕೆ ಅನುವಂಶಿಕ ಲಿವರ್‌ ಕಾಯಿಲೆಯಿಂದ ಬಳಲುತ್ತಿರುವುದು ಗೊತ್ತಾಯಿತು. ಸರ್ಜಿ ಆಸ್ಪತ್ರೆಯವರು ಬೆಂಗಳೂರಿನ ಆಸ್ಟರ್‌ ಆಸ್ಪತ್ರೆಗೆ ಶಿಫಾರಸ್ಸು ಮಾಡಿದರು ಎಂದರು.

ದೀಕ್ಷಾಳಿಗೆ ಲಿವರ್‌ನ ತೊಂದರೆಯಿತ್ತು. ಯಾರಾದರೂ ಲಿವರ್‌ ಅನ್ನು ದಾನ ಮಾಡಲೇಬೇಕಿತ್ತು. ಆಗ ತನ್ನ ಕರುಳಿನ ಕುಡಿಗೆ ತಾನೇ ಲಿವರ್‌ ದಾನ ಮಾಡುವುದಾಗಿ ಅವರ ತಾಯಿ ಶೃತಿ ಮುಂದೆ ಬಂದು ಲಿವರ್‌ ದಾನ ಮಾಡಿದರು. ತಾಯಿಯ ಲಿವರ್‌ನ ಒಂದು ಭಾಗವನ್ನು ತೆಗೆದು ಅನಾರೋಗ್ಯಪೀಡಿತ ಮಗಳಾದ ದೀಕ್ಷಾಳಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಇದೊಂದು ಅಪರೂಪದ ಶಸ್ತ್ರಚಿಕಿತ್ಸೆಯಾಗಿದೆ ಎಂದರು.

ಈ ಚಿಕಿತ್ಸೆಗೆ ಸುಮಾರು 20 ಲಕ್ಷ ರೂ. ಖರ್ಚಾಗುತ್ತದೆ. ಆದರೆ, ಆಸ್ಟರ್‌ ಆಸ್ಪತ್ರೆಯ ಸುಧಾರಿತ ತಂತ್ರಜ್ಞಾನ ಬಳಸಿಕೊಂಡು ಕೈಗೆಟುಕುವ ದರದಲ್ಲಿ ಅಂದರೆ ಕೇವಲ 4 ಲಕ್ಷ ರೂ. ವೆಚ್ಚದಲ್ಲಿ ಲಿವರ್‌ ಜೋಡಣೆ ಶಸ್ತ್ರಚಿಕಿತ್ಸೆಯನ್ನು ಮಾಡಲಾಗಿದೆ ಎಂದರು.

ಆಸ್ಟರ್‌ ಆಸ್ಪತ್ರೆಯಲ್ಲಿ ಸುಧಾರಿತ ತಂತ್ರಜ್ಞಾನ ಅಳವಡಿಸಿಕೊಂಡು ಕಡಿಮೆ ದರದಲ್ಲಿ ಲಿವರ್‌ ಜೋಡಣೆಯ ಚಿಕಿತ್ಸೆ ನಡೆಸುತ್ತಿದೆ. ಲಿವರ್‌ ಸಮಸ್ಯೆಯಿಂದ ಬಳಲುತ್ತಿರುವವವರು ಇದರ ಸದುಪಯೋಗ ಪಡೆಯಬೇಕೆಂದರು.

Advertisement

ಸರ್ಜಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ| ಧನಂಜಯ ಸರ್ಜಿ ಮಾತನಾಡಿ, ಆಸ್ಟರ್‌ ಸಿಎಂಐ ಆಸ್ಪತ್ರೆಯು ಶಿವಮೊಗ್ಗದ ಸರ್ಜಿ ಸೂಪರ್‌ ಸ್ಪೆಶಾಲಿಟಿ ಆಸ್ಪತ್ರೆಯೊಂದಿಗೆ ಸಹಕಾರ ಹೊಂದಿದ್ದು, ಲಿವರ್‌ ಸಮಸ್ಯೆಯಿಂದ ಬಳಲುತ್ತಿದ್ದ ಮಗುವಿನ ಶಸ್ತ್ರಚಿಕಿತ್ಸೆಗಾಗಿ ಆಸ್ಟರ್‌ ಆಸ್ಪತ್ರೆಗೆ ಶಿಫಾರಸ್ಸು ಮಾಡಿದ್ದೆವು. ಅಲ್ಲಿನ ವೈದ್ಯರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಅಲ್ಲಿನ ವೈದ್ಯರ ತಂಡಕ್ಕೂ ಹಾಗೂ ಲಿವರ್‌ ದಾನ ಮಾಡಿದ ಮಮತಾಮಯಿ ತಾಯಿಯಾದ ಶೃತಿ ಅವರಿಗೂ, ಅವರ ಕುಟುಂಬಕ್ಕೂ ಅಭಿನಂದನೆಗಳು ಎಂದರು.

ಆಸ್ಟರ್‌ ಆಸ್ಪತ್ರೆಯ ನರರೋಗ ತಜ್ಞ ಡಾ| ಲೋಕೇಶ್‌ ಮಾತನಾಡಿ, ಆಸ್ಟರ್‌ ಆಸ್ಪತ್ರೆ ಅಂತಾರಾಷ್ಟ್ರೀಯ ಗುಣಮಟ್ಟದ ಚಿಕಿತ್ಸೆ ನೀಡುತ್ತಾ ಬರುತ್ತಿದೆ. ನಮ್ಮೊಂದಿಗೆ ಶಿವಮೊಗ್ಗದ ಸರ್ಜಿ ಆಸ್ಪತ್ರೆಯವರು ಸಹಯೋಗ ನೀಡಿದ್ದಾರೆ. ವಾರಕ್ಕೊಮ್ಮೆ ನಮ್ಮ ಆಸ್ಪತ್ರೆಯ ವೈದ್ಯರು ಸರ್ಜಿ ಆಸ್ಪತ್ರೆಗೆ ಬರುತ್ತಾರೆ. ಈ ಭಾಗದ ಜನರು ಇದರ ಸದುಪಯೋಗ ಪಡೆಯಬಹುದು ಎಂದರು.

ಮಗುವಿನ ತಾಯಿ ಶೃತಿ ಮಾತನಾಡಿ, ನಮ್ಮ ಮಗಳಿಗೆ ಹೊಸ ಜೀವನ ನೀಡಿದ್ದಾರೆ. ಆಸ್ಪತ್ರೆಯ ಎಲ್ಲ ವೈದ್ಯರು, ಸಿಬ್ಬಂದಿಗಳಿಗೆ, ಸರ್ಜಿ ಆಸ್ಪತ್ರೆಯ ಎಲ್ಲ ವೈದ್ಯರ ತಂಡಕ್ಕೆ ಮತ್ತು ನಮಗಾಗಿ ಸಹಾಯ ಮಾಡಿದ ದಾನಿಗಳಿಗೆ ಧನ್ಯವಾದಗಳನ್ನು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next