Advertisement

ಭತ್ತ ಕಟಾವಾಗಿ 2 ತಿಂಗಳ ಬಳಿಕ ಬೆಂಬಲ ಬೆಲೆ 

09:18 AM Dec 18, 2018 | |

ಉಡುಪಿ: ಭತ್ತದ ಮೊದಲ ಬೆಳೆ ಕಟಾವಾಗಿ ಒಂದೆರಡು ತಿಂಗಳ ಬಳಿಕ ಜಿಲ್ಲಾಡಳಿತವು ಬೆಂಬಲ ಬೆಲೆಯಲ್ಲಿ ಭತ್ತವನ್ನು ಖರೀದಿಸುವುದಾಗಿ ಘೋಷಿಸಿದೆ. 

Advertisement

ಕರಾವಳಿಯಲ್ಲಿ ಅಕ್ಟೋಬರ್‌, ನವೆಂಬರ್‌ನಲ್ಲಿ ಭತ್ತದ ಕಟಾವಾಗಿದೆ. ಇಲ್ಲಿ ದಾಸ್ತಾನು ಮಾಡಿಡಲು ವ್ಯವಸ್ಥೆ ಸಮರ್ಪಕವಾಗಿಲ್ಲ. ಈಗ ಇರುವುದು ಸಣ್ಣ ಸಣ್ಣ ಹಿಡುವಳಿದಾರರು. ಅವರು ತಾವು ಬೆಳೆದ ಭತ್ತವನ್ನು ಒಂದೋ ಮನೆಬಳಕೆಗೆಂದು ಇರಿಸಿಕೊಳ್ಳುತ್ತಾರೆ, ಇಲ್ಲವೇ ಈಗಾಗಲೇ ಮಿಲ್ಲುಗಳಿಗೆ ಮಾರಾಟ ಮಾಡಿರುತ್ತಾರೆ. ಹೀಗಾಗಿ ಈ ಬೆಂಬಲ ಬೆಲೆ ಎಷ್ಟರಮಟ್ಟಿಗೆ ಪ್ರಯೋಜನಕ್ಕೆ ಸಿಗುತ್ತದೆ ಎಂಬುದು ಪ್ರಶ್ನೆ.

ಕೃಷಿ ಇಲಾಖೆ ಮೂಲಗಳ ಪ್ರಕಾರ ಜಿಲ್ಲೆಯಲ್ಲಿ ಈ ವರ್ಷ 36,000 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತವನ್ನು ಬೆಳೆಯಲಾಗಿದ್ದು, ಪ್ರತಿ ಹೆಕ್ಟೇರ್‌ಗೆ 42ರಿಂದ 44 ಕ್ವಿಂಟಾಲ್‌ ಇಳುವರಿ ಪಡೆಯುವ ಗುರಿ ಇರಿಸಿಕೊಳ್ಳಲಾಗಿತ್ತು. ಅಕ್ಟೋಬರ್‌ ತಿಂಗಳಲ್ಲಿ ಜಿಲ್ಲಾಧಿಕಾರಿ ನೇತೃತ್ವದ ಕೃಷಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧಿಕಾರಿಗಳು ಇರುವ ಸಮಿತಿಯ ಸಭೆ ನಡೆದು ಬೆಂಬಲ ಬೆಲೆಗಾಗಿ ಪ್ರಸ್ತಾವನೆಯನ್ನು ಸರಕಾರಕ್ಕೆ ಕಳುಹಿಸಲಾಗಿತ್ತು. ಈಗ ಜಿಲ್ಲಾಧಿಕಾರಿ ಕ್ವಿಂಟಾಲ್‌ಗೆ 1,770 ರೂ. ಬೆಂಬಲ ಬೆಲೆಯಲ್ಲಿ ಖರೀದಿಸುವುದಾಗಿ ಪ್ರಕಟಿಸಿದ್ದಾರೆ. 

ಕರಾವಳಿಗಿಲ್ಲ  ಪ್ರಯೋಜನ
ಇಂಥ ನೀತಿಗಳನ್ನು ಘೋಷಿಸುವಾಗ ರಾಜ್ಯ ಸ್ತರದಲ್ಲಿ ನಿರ್ಣಯ ತಳೆಯಲಾಗುತ್ತದೆ. ಈಗ ಬೇರೆ ಜಿಲ್ಲೆಗಳಲ್ಲಿ ಭತ್ತ ಕಟಾವಾಗುವ ಸಮಯವಾಗಿದ್ದರೆ ಕರಾವಳಿಯಲ್ಲಿ ಈಗಾಗಲೇ ಆಗಿದೆ. ಪ್ರಾದೇಶಿಕವಾಗಿ ಬೆಳೆ ಪ್ರಕಾರಗಳನ್ನು ಗಣಿಸದೆ ರಾಜ್ಯ ಸ್ತರದಲ್ಲಿ ಚಿಂತನೆ ನಡೆಸಿದ್ದರಿಂದ ಕರಾವಳಿಯ ಬೇಸಾಯ ಗಾರರಿಗೆ ಪ್ರಯೋಜನ ಇಲ್ಲ ದಂತಾಗಿದೆ. ಇಷ್ಟಾಗಿಯೂ ರಾಜ್ಯ ಸರಕಾರದ ಬೆಂಬಲ ಬೆಲೆ ಇನ್ನೂ ಘೋಷಣೆಯಾಗಿಲ್ಲ. ಇದನ್ನು ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ನಿರೀಕ್ಷಿಸಲಾಗುತ್ತಿದೆ. 

ಈಗ ಮಿಲ್ಲುಗಳಲ್ಲಿ ಕ್ವಿಂಟಾಲ್‌ಗೆ ಸುಮಾರು 1,900 ರೂ.ನಲ್ಲಿ ಭತ್ತವನ್ನು ಖರೀದಿಸುತ್ತಿದ್ದಾರೆ. ಸರಕಾರ ಬೆಂಬಲ ಬೆಲೆ ಘೋಷಣೆ ಮಾಡುವುದಕ್ಕೂ ಮಿಲ್ಲು ಮಾಲಕರು ಖರೀದಿ ಬೆಲೆ ನಿಗದಿಪಡಿಸುವುದಕ್ಕೂ ಸಂಬಂಧವಿರುವುದು ಹೌದಾದರೂ ಸರಕಾರ ಸೂಕ್ತ ಸಮಯದಲ್ಲಿ ಬೆಂಬಲ ಬೆಲೆ ಘೋಷಿಸಿದರೆ ರೈತರಿಗೆ ಅನುಕೂಲವಾಗುತ್ತದೆ. ಇಲ್ಲವಾದರೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಭತ್ತ ಬೇಸಾಯದ ನಿರಾಸಕ್ತಿಗೆ ಸರಕಾರವೇ ಪರೋಕ್ಷವಾಗಿ ಇಂಬು ಕೊಟ್ಟಂತಾಗುತ್ತದೆ. 

Advertisement

ಆಗ ಕಡಿಮೆ, ಈಗ ಹೆಚ್ಚು
“ನಾವು ಬೆಂಬಲ ಬೆಲೆ ನಿಗದಿಪಡಿಸುವಾಗ ಕ್ವಿಂಟಾಲ್‌ಗೆ 1,650 ರೂ. ಇತ್ತು. ಅದಕ್ಕೆ ಸರಿಯಾಗಿ ನಾವು ಪ್ರಸ್ತಾವನೆ ಕಳುಹಿಸಿದ್ದೆವು. ಈಗ ಮುಕ್ತ ಮಾರುಕಟ್ಟೆಯಲ್ಲಿ ದರ ಹೆಚ್ಚಳವಾಗಿದೆ. ಒಂದು ವೇಳೆ ಮಾರುಕಟ್ಟೆಯಲ್ಲಿ ದರ ಕಡಿಮೆಯಾದರೆ ರೈತರಿಗೆ ತೊಂದರೆಯಾಗಬಾರದೆಂಬ ಕಾರಣಕ್ಕೆ ಸರಕಾರ ಬೆಲೆ ನಿಗದಿಪಡಿಸುತ್ತದೆ’ ಎಂದು ಬೆಂಬಲ ಬೆಲೆ ನಿಗದಿ ಸಮಿತಿ ಸದಸ್ಯ ಕಾರ್ಯದರ್ಶಿಯಾದ ಆಹಾರ ಇಲಾಖೆ ಉಪನಿರ್ದೇಶಕ ಎಂ.ಆರ್‌. ಭಟ್‌ ಹೇಳುತ್ತಾರೆ. 

“ನಾವು ಲಾಭದಾಯಕ ಬೆಂಬಲ ಬೆಲೆ ಕೊಡಬೇಕೆಂದು ಒತ್ತಾಯಿಸುತ್ತಲೇ ಇದ್ದೇವೆ. ಇತ್ತೀಚಿಗೆ ಕೂಡ ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಿದ್ದೆವು. ಭತ್ತಕ್ಕೆ ಮಾತ್ರವಲ್ಲ, ಇತರ ಬೆಳೆಗಳಿಗೂ ಸರಿಯಾದ ಬೆಲೆ ಸಿಗುತ್ತಿಲ್ಲ. ಕಾಡುಪ್ರಾಣಿಗಳ ಉಪಟಳದಿಂದ ಕೃಷಿಯನ್ನು ಕೈಬಿಡಬೇಕಾದ ಸ್ಥಿತಿ ಇದೆ. ಕೇಂದ್ರವಾಗಲೀ ರಾಜ್ಯವಾಗಲೀ ಮಾತನಾಡುತ್ತಾರೆ ವಿನಾ ಕೆಲಸ ಮಾಡುವುದಿಲ್ಲ’ ಎಂದು ಜಿಲ್ಲಾ ಕಿಸಾನ್‌ ಸಂಘದ ಅಧ್ಯಕ್ಷ ಬಿ.ವಿ. ಪೂಜಾರಿ ಪೆರ್ಡೂರು ಖೇದ ವ್ಯಕ್ತಪಡಿಸುತ್ತಾರೆ.  

ಈ ಬಾರಿ ಎಪಿಎಂಸಿಗಳಿಗೆ ಭತ್ತವನ್ನು ಕೊಂಡೊಯ್ದರೆ ಅದನ್ನು ಸಮೀಪದ ಮಿಲ್ಲುಗಳಿಗೆ ಹಾಕಿ ಅಲ್ಲಿಂದ ದಾಖಲೆಯನ್ನು ತಂದು ಕೊಟ್ಟಲ್ಲಿ ಪಾವತಿ ಮಾಡುವ ವ್ಯವಸ್ಥೆ ಮಾಡಿದ್ದು ಉತ್ತಮವಾಗಿದೆ. ಈಗ ಘೋಷಣೆಯಾಗಿರುವುದು ಕೇಂದ್ರ ಸರಕಾರದ ಬೆಂಬಲ ಬೆಲೆ, ರಾಜ್ಯ ಸರಕಾರದ್ದು ಇನ್ನೂ ಆಗಬೇಕಾಗಿದೆ. 
 ಸತೀಶಕುಮಾರ್‌ ಶೆಟ್ಟಿ, ಯಡ್ತಾಡಿ, ಕೃಷಿಕರು  

ಭತ್ತದ ಕೃಷಿಗೆ ಕರಾವಳಿಯಲ್ಲಿ ಖರ್ಚು ಜಾಸ್ತಿ. ನಾವು ಕ್ವಿಂಟಾಲ್‌ಗೆ 2,500 ರೂ. ಕೇಳುತ್ತಿದ್ದೇವೆ. ಕೃಷಿಕರಿಗೆ ಹಣದ ಜರೂರು ಇರುವ ಕಾರಣ ಈಗಾಗಲೇ ಬಹುತೇಕರು ಉತ್ಪನ್ನಗಳನ್ನು ಮಾರಿದ್ದಾರೆ. 
ರವೀಂದ್ರ ಗುಜ್ಜರಬೆಟ್ಟು, ಕಾರ್ಯದರ್ಶಿ, ಜಿಲ್ಲಾ ಕೃಷಿಕ ಸಂಘ, ಉಡುಪಿ

ಭತ್ತದ ಬೆಂಬಲ ಬೆಲೆ ಕುರಿತು ರಾಜ್ಯ ಸರಕಾರಕ್ಕೆ ಬೇಡಿಕೆ ಇರಿಸಿ ಪ್ರಶ್ನೆ ಕೇಳಿದ್ದೇವೆ. ಅಧಿವೇಶನದಲ್ಲಿ ಉತ್ತರ ನಿರೀಕ್ಷಿಸುತ್ತಿದ್ದೇವೆ. 
 ಕೆ. ರಘುಪತಿ ಭಟ್‌, ಶಾಸಕರು,  ಉಡುಪಿ  

ಅಕ್ಟೋಬರ್‌ನಲ್ಲಿ ಬೆಂಬಲ ಬೆಲೆ ಕೋರಿ ಜಿಲ್ಲಾಧಿಕಾರಿ ಮೂಲಕ ಸರಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಲಾಗಿತ್ತು. 
ಕೆಂಪೇಗೌಡ, ಜಂಟಿ ನಿರ್ದೇಶಕರು, ಕೃಷಿ ಇಲಾಖೆ, ಉಡುಪಿ.  

 ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next