ಧಾರವಾಡ : ಕಳೆದ ವರ್ಷದಲ್ಲಿ ಬರಗಾಲದಿಂದ ಹೆಸರು ಬೆಳೆಯೇ ಕಾಣದಂತಾದರೆ ಈ ಸಲ ನಿರೀಕ್ಷೆಗೂ ಮೀರಿ ಹೆಸರು ಬೆಳೆ ಬಂದರೂ ರೈತರಿಗೆ ಮಾತ್ರ ನಿರೀಕ್ಷೆಯಷ್ಟು ಬೆಲೆ ಸಿಗದಂತಹ ದುಸ್ಥಿತಿ ಬಂದೊದಗಿದೆ. ಇದರ ಜತೆಗೆ ಬೆಂಬಲ ಬೆಲೆ ಘೋಷಿಸಿದ್ದರೂ ಮಾರುಕಟ್ಟೆಯಲ್ಲಿ ಬೆಲೆ ಸ್ಥಿರವಿಲ್ಲದ ಕಾರಣ ರೈತರಿಗೆ ಸಂಕಷ್ಟ ಎದುರಾಗಿದೆ.
Advertisement
ಹೌದು. ಕಳೆದ ವರ್ಷ ಬರಗಾಲದಿಂದ ಹೆಸರು ಬೆಳೆಯೇ ಬರಲಿಲ್ಲ. ಹೀಗಾಗಿ ಈ ಸಲ ಜಿಲ್ಲೆಯಲ್ಲಿ 67,150 ಹೆಕ್ಟೇರ್ ಗುರಿಗಿಂತ 94,749 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬೆಳೆ ಬಿತ್ತನೆಯಾಗಿತ್ತು. ಇದರ ಜತೆಗೆ ಉತ್ತಮ ಮಳೆಯಿಂದ ಇಳುವರಿ ಸಹ ಜೋರಾಗಿಯೇ ಬಂದರೂ ಕೊನೆ ಕ್ಷಣದಲ್ಲಿ ಮಳೆಯ ಚಲ್ಲಾಟದಿಂದ ಕೆಲ ಭಾಗದ ಹೆಸರು ಕಾಳುಗಳ ಗುಣಮಟ್ಟಕ್ಕೆ ಹೊಡೆತವೂ ಬಿದ್ದಿದೆ. ಇಷ್ಟಾದರೂ ಉತ್ತಮ ಇಳುವರಿ ಕಾರಣ ಭರಪೂರ ಮಾರುಕಟ್ಟೆಗೆ ಲಗ್ಗೆ ಇಡಲು ಹೆಸರು ಕಾಳು ಸಿದ್ಧವಿದೆ. ಆದರೆ ಕಾಳಿನ ಗುಣಮಟ್ಟದ ಕೊರತೆ ಹಾಗೂ ಮಾರುಕಟ್ಟೆಯಲ್ಲಿ ಬೆಲೆ ಕುಸಿದ ಕಾರಣ ರೈತನ ಮನೆಯಲ್ಲೇ ಇಟ್ಟುಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಿದೆ.
Related Articles
Advertisement
ಈವರೆಗೂ ಯಾರೂ ಕಾಳು ಮಾರಾಟ ಮಾಡಿಲ್ಲ:
ಜಿಲ್ಲೆಯ 21 ಹೆಸರು ಖರೀದಿ ಕೇಂದ್ರಗಳ ಪೈಕಿ ನವಲಗುಂದದ ಟಿಎಪಿಸಿಎಂಎಸ್ ಅಣ್ಣಿಗೇರಿಯ ಖರೀದಿ ಕೇಂದ್ರದಲ್ಲಿಯೇ ಅತೀ ಹೆಚ್ಚು 1462 ರೈತರು ನೋಂದಣಿ ಮಾಡಿದ್ದರೆ ಈ ಕೇಂದ್ರದಲ್ಲಿ ಈವರೆಗೆ 274 ರೈತರಿಂದ 2113 ಕ್ವಿಂಟಲ್ ಹೆಸರಷ್ಟೇ ಖರೀದಿ ಮಾಡಲಾಗಿದೆ. ಇನ್ನು ನೂಲ್ವಿ ಪಿಕೆಪಿಎಸ್ ಕೇಂದ್ರದಲ್ಲಿ ನೋಂದಣಿ ಮಾಡಿದ್ದ ಅತಿ ಕನಿಷ್ಠ 19 ರೈತರ ಪೈಕಿ ಈವರೆಗೂ ಯಾರಿಂದಲೂ ಕಾಳು ಮಾರಾಟವಾಗಿಲ್ಲ. ಅದೇ ರೀತಿ ಕೆಎಸ್ಎಫ್ಪಿಓ ಮೊರಬ (ಶಿರಕೋಳ), ಪಿಕೆಪಿಎಸ್ ಹೆಬಸೂರ ಕೇಂದ್ರಗಳಲ್ಲಿ ನೋಂದಣಿ ಮಾಡಿದವರ ಪೈಕಿ ಈವರೆಗೂ ಯಾರೂ ಕಾಳು ಮಾರಾಟ ಮಾಡಿಲ್ಲ. ಇದಲ್ಲದೇ ಉಪ್ಪಿನಬೆಟಗೇರಿ ಪಿಕೆಪಿಎಸ್ ಕೇಂದ್ರದಲ್ಲಿ ನೋಂದಣಿ ಮಾಡಿದ್ದ 421 ರೈತರ ಪೈಕಿ ಈವರೆಗೆ ಒಬ್ಬ ರೈತರಿಂದ ಅಷ್ಟೇ 2 ಕ್ವಿಂಟಲ್ ಖರೀದಿ ಮಾಡಿದ್ದು, ಉಳಿದಂತೆ ನೋಂದಣಿ ಮಾಡಿದ 9756 ರೈತರ ಪೈಕಿ 2005 ರೈತರಿಂದ 15,234 ಕ್ವಿಂಟಲ್ ಹೆಸರು ಖರೀದಿ ಮಾಡಲಾಗಿದೆ.
ಕಾಳು ಖರೀದಿ ಪ್ರಮಾಣ ಕುಸಿತ:ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಖರೀದಿ ಕೇಂದ್ರಗಳ ಸಂಖ್ಯೆ ಹೆಚ್ಚುತ್ತಿದ್ದರೂ, ರೈತರ ನೋಂದಣಿ, ಕಾಳು ಖರೀದಿ ಪ್ರಮಾಣ ಮಾತ್ರ ಕುಸಿಯುತ್ತಲೇ ಇದೆ. ಪ್ರಸಕ್ತ ಸಾಲಿನಲ್ಲಿ ಮಾರುಕಟ್ಟೆಯಲ್ಲಿ ಬೆಲೆ ಕುಸಿದ(6-7 ಸಾವಿರ) ಕಾರಣ ಬಹುತೇಕ ರೈತರು ಬೆಂಬೆಲೆ ಕೇಂದ್ರಗಳತ್ತ ಮುಖ ಮಾಡಿದ್ದಾರೆ. ಆದರೆ ಈ ಸಲ ನೋಂದಣಿಗೆ ನಿಗದಿ ಮಾಡಿರುವ ಬಯೋಮೆಟ್ರಿಕ್ ಕಡ್ಡಾಯ ಎಂಬ ನಿಯಮ, ಪಹಣಿಯಲ್ಲಿ ಮುಂಗಾರು ಹಂಗಾಮಿನ ಹೆಸರು ಬೆಳೆ ದಾಖಲಾತಿಯಲ್ಲಿ ಆಗಿರುವ ಲೋಪದೋಷಗಳಿಂದ ಸಾಕಷ್ಟು ರೈತರು
ನೋಂದಣಿ ಮಾಡಲಾಗದೇ ಹಾಗೇ ಉಳಿದ ಸಾಕಷ್ಟು ಪ್ರಕರಣಗಳೇ ಇವೆ. ಇದರ ಜತೆಗೆ ನಿಗದಿಪಡಿಸಿರುವ ಹೆಸರು ಕಾಳಿನ ತೇವಾಂಶಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ತೇವಾಂಶ ಬರುತ್ತಿರುವ ಕಾರಣ ಖರೀದಿ ಪ್ರಕ್ರಿಯೆಗೂ ಹಿನ್ನಡೆ ಆಗುವಂತಾಗಿದೆ. ಹೀಗಾಗಿ ಈಗ ನಿಗದಿ ಮಾಡಿರುವ ಶೇ.12 ತೇವಾಂಶ ಪ್ರಮಾಣವನ್ನು ಶೇ.14ಕ್ಕೆ ಏರಿಕೆ ಮಾಡಿದರೆ ರೈತರಿಗೆ ಅನುಕೂಲ ಆಗಲಿದೆ ಎಂಬುದು ರೈತರ ಒತ್ತಾಸೆ. ಜಿಲ್ಲೆಯಲ್ಲಿ ತೆರೆದಿರುವ 21 ಹೆಸರು ಖರೀದಿ ಕೇಂದ್ರಗಳಲ್ಲಿ ನೋಂದಣಿ ಪ್ರಕ್ರಿಯೆ ಮುಕ್ತಾಯಗೊಳಿಸಿ ಈಗಾಗಲೇ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಿದ್ದೇವೆ. ಕೆಲ ದಿನ ಮಳೆ ಕಾಟ, ಕಾಳಿನ ತೇವಾಂಶ ಹೆಚ್ಚಳದಿಂದ ಖರೀದಿ ಪ್ರಕ್ರಿಯೆಗೆ ಒಂದಿಷ್ಟು ಹಿನ್ನಡೆ ಆಗಿದ್ದು ಬಿಟ್ಟರೆ ಇದೀಗ ಬಹುತೇಕ ಕಡೆ ಹೆಸರು ಖರೀದಿಗೆ ಚಾಲನೆ ನೀಡಿದ್ದೇವೆ.
*ವಿನಯ್ ಪಾಟೀಲ, ಹುಬ್ಬಳ್ಳಿ ಶಾಖಾ ವ್ಯವಸ್ಥಾಪಕರು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ *ಶಶಿಧರ್ ಬುದ್ನಿ