Advertisement
“ಇಲ್ಲಿನ ಟ್ರ್ಯಾಕ್‌ನಲ್ಲಿ ಹೊಸ ಚೆಂಡಿನ ಪಾತ್ರ ನಿರ್ಣಾಯಕ. ಇದನ್ನು ಎರಡೂ ತಂಡಗಳು ಉತ್ತಮ ರೀತಿಯಲ್ಲೇ ನಿಭಾಯಿಸಿದವು. ಡೆಲ್ಲಿ ಇನ್ನೂ ಹೆಚ್ಚು ರನ್ ಗಳಿಸಬಹುದೆಂಬುದು ನಮ್ಮ ಲೆಕ್ಕಾಚಾರವಾಗಿತ್ತು. ಆದರೆ ನಮ್ಮ ಬೌಲರ್‌ಗಳು ಕಡಿವಾಣ ಹಾಕುವಲ್ಲಿ ಯಶಸ್ವಿಯಾದರು’ ಎಂದು ವಿಲಿಯಮ್ಸನ್ ಹೇಳಿದರು.
ಮೊದಲ 10 ಓವರ್‌ಗಳಲ್ಲಿ 82 ರನ್ ಬಾರಿಸಿದ ಹೈದರಾಬಾದ್, ಅನಂತರದ ಅವಧಿಯಲ್ಲಿ ಮತ್ತೆ 82 ರನ್ ಪೇರಿಸಿ ಸಮತೋಲಿತ ಬ್ಯಾಟಿಂಗ್ ಪ್ರದರ್ಶನ ನೀಡಿತು. ಆದರೆ ಅಂತಿಮ 2 ಓವರ್‌ಗಳಲ್ಲಿ 28 ರನ್ ತೆಗೆಯುವ ಸವಾಲು ಮುಂದಿದ್ದಾಗ ಪಂದ್ಯ ಡೆಲ್ಲಿ ಕೈಯಲ್ಲಿತ್ತು. ಈ ಹಂತದಲ್ಲಿ ಯೂಸುಫ್ ಪಠಾಣ್ ಸಿಡಿದು ನಿಂತರು. ಟ್ರೆಂಟ್ ಬೌಲ್ಟ್ ಮತ್ತು ಡೇನಿಯಲ್ ಕ್ರಿಸ್ಟಿಯನ್ ಎಸೆದ ಈ ಓವರ್‌ಗಳಲ್ಲಿ ತಲಾ 14 ರನ್ ಸೋರಿ ಹೋಯಿತು. ತವರಿನ ಅಭಿಮಾನಿಗಳನ್ನು ಹೈದರಾಬಾದ್ ಹುಚ್ಚೆಬ್ಬಿಸಿತು.
ಟ್ರೆಂಟ್ ಬೌಲ್ಟ್ ಎಸೆದ 19ನೇ ಓವರಿನಲ್ಲಿ ಪಠಾಣ್ ಒಬ್ಬರೇ ಒಂದು ಸಿಕ್ಸರ್, ಒಂದು ಬೌಂಡರಿ ಸಹಿತ 12 ರನ್ ಬಾರಿಸಿದರು. ಅಂತಿಮ ಓವರಿನಲ್ಲಿ ಕ್ರಿಸ್ಟಿಯನ್‌ಗೂ ಸಿಕ್ಸರ್, ಬೌಂಡರಿ ರುಚಿ ತೋರಿಸಿದರು. ಮೊದಲ 4 ಎಸೆತಗಳಲ್ಲಿ 13 ರನ್ ಬಂತು. 5ನೇ ಎಸೆತದಲ್ಲಿ ಸಿಂಗಲ್ ತೆಗೆದ ವಿಲಿಯಮ್ಸನ್ ತಂಡದ ಜಯವನ್ನು ಸಾರಿದರು.
Related Articles
“ನಿಜ ಹೇಳಬೇಕೆಂದರೆ ಈ ಸೋಲಿನಿಂದ ತೀವ್ರ ಬೇಸರವಾಗಿದೆ’ ಎಂಬುದು ಡೆಲ್ಲಿ ಕಪ್ತಾನ ಶ್ರೇಯಸ್ ಅಯ್ಯರ್ ಅವರ ಹತಾಶೆಯ ನುಡಿಗಳು.
Advertisement
“ಒಂದು ಹಂತದಲ್ಲಿ ನಾವೇ ಮೇಲುಗೈ ಹೊಂದಿದ್ದೆವು. 163 ರನ್ ಒಳ್ಳೆಯ ಮೊತ್ತ. ಆದರೂ ಹೆಚ್ಚುವರಿಯಾಗಿ 10 ರನ್ ಹೊಂದಿರಬೇಕಿತ್ತು. ಇದೊಂದು ಕಠಿನ ಪಿಚ್. ಟರ್ನ್ ತೆಗೆದುಕೊಳ್ಳುತ್ತಿರಲಿಲ್ಲ. ನಮ್ಮ ಫೀಲ್ಡಿಂಗ್ ಇನ್ನಷ್ಟು ಸುಧಾರಿಸಬೇಕಿದೆ. ಕೊನೆಯ ತನಕವೂ ಹೋರಾಟ ನಡೆಸಿದ್ದು ನಮ್ಮ ಪಾಲಿನ ಸಮಾಧಾನದ ಸಂಗತಿ’ ಎಂದು ಅಯ್ಯರ್ ಹೇಳಿದರು.
ಇದು 10 ಪಂದ್ಯಗಳಲ್ಲಿ ಡೆಲ್ಲಿ ಅನುಭವಿಸಿದ 7ನೇ ಸೋಲಾಗಿದ್ದು, ಕೂಟದಿಂದ ಹೊರಬಿದ್ದಿದೆ ಎನ್ನಲಡ್ಡಿಯಿಲ್ಲ.
ಎಕ್ಸ್‌ಟ್ರಾ ಇನ್ನಿಂಗ್ಸ್* ಪೃಥ್ವಿ ಶಾ 19 ವರ್ಷ ಪೂರೈಸುವುದರೊಳಗಾಗಿ ಐಪಿಎಲ್‌ನಲ್ಲಿ 2 ಅರ್ಧ ಶತಕ ಹೊಡೆದ ಮೊದಲ ಬ್ಯಾಟ್ಸ್‌ಮನ್ ಎನಿಸಿದರು. ಹೈದರಾಬಾದ್ ವಿರುದ್ಧ 65 ರನ್ ಬಾರಿಸುವ ಮುನ್ನ ಕೆಕೆಆರ್ ವಿರುದ್ಧವೂ ಅರ್ಧ ಶತಕ ಹೊಡೆದಿದ್ದರು.
* ರಶೀದ್ ಖಾನ್ 5ನೇ ಸಲ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಪ್ರಸಕ್ತ ಐಪಿಎಲ್‌ನಲ್ಲಿ ಅವರಿಗೆ ಒಲಿದ 3ನೇ ಪಂದ್ಯಶ್ರೇಷ್ಠ ಪ್ರಶಸ್ತಿ ಇದಾಗಿದೆ.
* ರಶೀದ್ ಖಾನ್ 2017ರ ಋತುವಿನ ಆರಂಭದ ಬಳಿಕ ಅತೀ ಹೆಚ್ಚು ಸಲ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದ ಆಟಗಾರನೆನಿಸಿದರು. ಸುನೀಲ್ ನಾರಾಯಣ್ ಮತ್ತು ನಿತೀಶ್ ರಾಣ 4 ಸಲ ಈ ಹಿರಿಮೆಗೆ ಪಾತ್ರರಾಗಿದ್ದಾರೆ.
* ಯೂಸುಫ್ ಪಠಾಣ್ ಯಶಸ್ವಿ ರನ್ ಚೇಸಿಂಗ್ ವೇಳೆ ಅತೀ ಹೆಚ್ಚು 19 ಸಲ ಔಟಾಗದೆ ಉಳಿದ 2ನೇ ಕ್ರಿಕೆಟಿಗನೆನಿಸಿದರು. ರವೀಂದ್ರ ಜಡೇಜ ಮೊದಲಿಗ.
* ಪೃಥ್ವಿ ಶಾ ಹೈದರಾಬಾದ್ ವಿರುದ್ಧ ಅತೀ ವೇಗದ ಶತಕ ದಾಖಲಿಸಿದವರ ಯಾದಿಯಲ್ಲಿ 2ನೇ ಸ್ಥಾನ ಅಲಂಕರಿಸಿದರು (25 ಎಸೆತ). 2014ರಲ್ಲಿ ಪಂಜಾಬ್ ಆಟಗಾರ ವೃದ್ಧಿಮಾನ್ ಸಾಹಾ 22 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದ್ದು ದಾಖಲೆ.
* ಅಮಿತ್ ಮಿಶ್ರಾ ಹೈದರಾಬಾದ್‌ನ “ರಾಜೀವ್ ಗಾಂಧಿ ಇಂಟರ್‌ನ್ಯಾಶನಲ್ ಸ್ಟೇಡಿಯಂ’ನಲ್ಲಿ ಅತೀ ಹೆಚ್ಚು 31 ವಿಕೆಟ್ ಉರುಳಿಸಿದ ಬೌಲರ್ ಎನಿಸಿದರು. ಭುವನೇಶ್ವರ್ ಕುಮಾರ್‌ಗೆ 2ನೇ ಸ್ಥಾನ (30 ವಿಕೆಟ್).
* ರಶೀದ್ ಖಾನ್ 100ನೇ ಟಿ20 ಪಂದ್ಯವನ್ನಾಡಿದರು. ಈ ಅವಧಿಯಲ್ಲಿ 147 ವಿಕೆಟ್ ಕಿತ್ತು 2ನೇ ಸ್ಥಾನ ಅಲಂಕರಿಸಿದರು. ಕೃಶ್ಮರ್ ಸ್ಯಾಂಟೋಕಿ 100 ಟಿ20 ಪಂದ್ಯಗಳಲ್ಲಿ 158 ವಿಕೆಟ್ ಉರುಳಿಸಿದ್ದು ದಾಖಲೆ.
* ಸನ್‌ರೈಸರ್ ಹೈದರಾಬಾದ್ ತವರಿನಂಗಳದಲ್ಲಿ ಅತ್ಯಧಿಕ ರನ್ ಬೆನ್ನಟ್ಟಿ ಗೆದ್ದಿತು (164 ರನ್). 2014ರಲ್ಲಿ ಆರ್‌ಸಿಬಿ ವಿರುದ್ಧ 161 ರನ್ ಬೆನ್ನಟ್ಟಿ ಜಯಿಸಿದ್ದು ಹಿಂದಿನ ದಾಖಲೆ.
* ಯೂಸುಫ್ ಪಠಾಣ್ ಭಾರತದಲ್ಲಿ ಆಡಿದ ಟಿ20 ಪಂದ್ಯಗಳಲ್ಲಿ 200 ಸಿಕ್ಸರ್ ಬಾರಿಸಿದ 6ನೇ ಕ್ರಿಕೆಟಿಗನೆನಿಸಿದರು.