Advertisement

ದ್ವಿತೀಯ ಸ್ಥಾನಕ್ಕೆ ಕಣ್ಣಿಟ್ಟಿರುವ ರಾಯಲ್‌ ಚಾಲೆಂಜರ್

10:43 PM Oct 05, 2021 | Team Udayavani |

ಅಬುಧಾಬಿ: ಬಹಳ ಬೇಗನೇ ಪ್ಲೇ ಆಫ್ ಟಿಕೆಟ್‌ ಪಡೆದು ಕುಳಿತಿರುವ ಆರ್‌ಸಿಬಿ ತಂಡವೀಗ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರುವ ಯೋಜನೆಯಲ್ಲಿದೆ. ಉಳಿದೆರಡೂ ಪಂದ್ಯಗಳನ್ನು ದೊಡ್ಡ ಅಂತರದಲ್ಲಿ ಗೆದ್ದರೆ ಇದು ಅಸಾಧ್ಯವೇನಲ್ಲ. ಒಂದೇ ಸಮಸ್ಯೆಯೆಂದರೆ ರನ್‌ರೇಟ್‌ನದ್ದು. ಅದು ಇನ್ನೂ “ಮೈನಸ್‌’ನಲ್ಲಿದೆ.

Advertisement

ಕೊಹ್ಲಿ ಪಡೆ ಬುಧವಾರ ಸನ್‌ರೈಸರ್ ಹೈದರಾಬಾದ್‌ ತಂಡವನ್ನು ಎದುರಿಸಲಿದೆ. ಕೇನ್‌ ವಿಲಿಯಮ್ಸನ್‌ ಪಡೆ ಈಗಾಗಲೇ ದಾಖಲೆ ಸಂಖ್ಯೆಯ ಸೋಲನುಭವಿಸಿ ಕೂಟದಿಂದ ಹೊರ ಬಿದ್ದಿದೆ. ಹೀಗಾಗಿ ಹೈದರಾಬಾದ್‌ ಪಾಲಿಗೆ ಇದು ಕೇವಲ ಔಪಚಾರಿಕ ಪಂದ್ಯ. ಆದರೆ ಆರ್‌ಸಿಬಿಗೆ ಎಲಿಮಿನೇಟರ್‌ ಪಂದ್ಯವನ್ನು ತಪ್ಪಿಸುವ ದೃಷ್ಟಿಯಲ್ಲಿ ಇದು ಮಹತ್ವದ ಮುಖಾಮುಖಿಯಾಗಿದೆ.

ಆರ್‌ಸಿಬಿಯ ಕೊನೆಯ ಎದುರಾಳಿ ಡೆಲ್ಲಿ ಕ್ಯಾಪಿಟಲ್ಸ್‌. ಸದ್ಯ ಅದು ಅಗ್ರಸ್ಥಾನದಲ್ಲಿದೆ. ಇದು ಕೂಟದ ಕಟ್ಟಕಡೆಯ ಲೀಗ್‌ ಪಂದ್ಯ ವಾಗಿರುವುದರಿಂದ ಕುತೂಹಲ ಜಾಸ್ತಿ. ಇಲ್ಲಿನ ಫ‌ಲಿತಾಂಶ ತಿಳಿಯದ ಹೊರತು ಅಗ್ರ 3 ಸ್ಥಾನದಲ್ಲಿರುವ ತಂಡಗಳ ಅಂತಿಮ ಸ್ಥಿತಿಗತಿ ಬಗ್ಗೆ ಏನೂ ಹೇಳಲಾಗದು. ಆದ್ದರಿಂದಲೇ ಕೊನೆಯ ದಿನದ ಎರಡೂ ಲೀಗ್‌ ಪಂದ್ಯಗಳನ್ನು ಏಕಕಾಲಕ್ಕೆ ಆರಂಭಿಸಲು ತೀರ್ಮಾನಿಸಿದ್ದು!

ಇದನ್ನೂ ಓದಿ:ವಿಶ್ವ ಬಾಕ್ಸಿಂಗ್‌: ಲವ್ಲಿನಾಗೆ ನೇರ ಪ್ರವೇಶ

ಲಕ್‌ ಇಲ್ಲದ ಸನ್‌
ತಂಡದ ನಾಯಕತ್ವದ ಜತೆಗೆ ಆಟಗಾರರನ್ನು ಬದಲಾಯಿಸಿದರೂ ಅದೃಷ್ಟ ಮಾತ್ರ ಹೈದರಾಬಾದ್‌ನಿಂದ ಎಷ್ಟೋ ದೂರಕ್ಕೆ ಓಡಿದೆ. ಅದಿನ್ನು ಆರ್‌ಸಿಬಿ ಬಳಿಕ ಮುಂಬೈಯನ್ನು ಎದುರಿಸಬೇಕಿದೆ. ಈ ಎರಡೂ ಪಂದ್ಯಗಳನ್ನು ಗೆದ್ದರೆ ಕೂಟದ ಲೆಕ್ಕಾಚಾರವನ್ನು ಬದಲಿಸಲು ಹೈದರಾಬಾದ್‌ಗೆ ಸಾಧ್ಯವಿದೆ. ಇಂಥದೊಂದು ಗೇಮ್‌ ಪ್ಲ್ರಾನ್‌ ರೂಪಿಸಲು ವಿಲಿಯಮ್ಸನ್‌ ಪಡೆ ಶಕ್ತವೇ ಎಂಬುದಷ್ಟೇ ಪ್ರಶ್ನೆ.

Advertisement

ಆರ್‌ಸಿಬಿ ಒಂದು ಸಶಕ್ತ ತಂಡವಾಗಿ ರೂಪು ಗೊಂಡಿರುವುದರಲ್ಲಿ ಎರಡು ಮಾತಿಲ್ಲ. ಆದರೆ ನಾಯಕ ಕೊಹ್ಲಿಯ ಕೆಲವು ಪ್ರಯೋಗಗಳು ಯಶಸ್ವಿಯಾಗುತ್ತಿಲ್ಲ. ಕಳೆದ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್‌ ಫಾರ್ಮ್ನಲ್ಲಿರುವ ಶ್ರೀಕರ್‌ ಭರತ್‌ ಅವರನ್ನು ಕೆಳ ಕ್ರಮಾಂಕದಲ್ಲಿ ಆಡಿಸಿದ್ದರ ಔಚಿತ್ಯ ಅರ್ಥವಾಗುತ್ತಿಲ್ಲ. ಇದರಿಂದ ತಂಡದ ದೊಡ್ಡ ಮೊತ್ತಕ್ಕೆ ಹಿನ್ನಡೆಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next