Advertisement
“ಹೊಸ ಅಧ್ಯಾಯ’ದ ಭರವಸೆಯನ್ನು ಈಡೇರಿ ಸಲು ಸಂಪೂರ್ಣ ವಿಫಲವಾಗಿರುವ ಆರ್‌ಸಿಬಿ ಪಾಲಿಗೆ ಈ ಋತು ಈಗಾಗಲೇ “ಮುಗಿದ ಅಧ್ಯಾಯ’ ಆಗಿದೆ. ಎಂಟರಲ್ಲಿ ಕೇವಲ ಒಂದು ಪಂದ್ಯ ಗೆದ್ದು, -1.046ರಷ್ಟು ಕಳಪೆ ರನ್‌ರೇಟ್ ಹೊಂದಿರುವ ಬೆಂಗಳೂರು ತಂಡ ಪವಾಡ ಸಂಭವಿಸಿದರೂ ಅಗ್ರ ನಾಲ್ಕಕ್ಕೆ ನೆಗೆಯದು. ಹೀಗಾಗಿ ಉಳಿದೆಲ್ಲವೂ ಆರ್‌ಸಿಬಿ ಪಾಲಿಗೆ ಲೆಕ್ಕದ ಭರ್ತಿಯ ಪಂದ್ಯಗಳಾಗಿವೆ. ಆದರೆ ಒಂದಿಷ್ಟು ಅಮೋಘ ಗೆಲುವು, ಅಸಾಮಾನ್ಯ ಸಾಧನೆ, ಅದ್ಭುತ ನಿರ್ವಹಣೆಯಿಂದ ತನ್ನ ಪ್ರತಿಷ್ಠೆಯನ್ನು ಮರಳಿ ಗಳಿಸಲು ಇನ್ನೂ ಅವಕಾಶ ಇದೆ.
ಆರ್‌ಸಿಬಿಯ ದೊಡ್ಡ ದೌರ್ಬಲ್ಯ ಇರುವುದೇ ಬೌಲಿಂಗ್ ವಿಭಾಗದಲ್ಲಿ. ಆದರೆ ಹೈದರಾಬಾದ್‌ಗೆ ಯಾವ ಬೌಲಿಂಗ್ ಯೂನಿಟ್ ಆದರೂ ಒಂದೇ. ಮುಂಬೈ, ಡೆಲ್ಲಿ ಬೌಲರ್‌ಗಳನ್ನೂ ಅದು ಚೆಂಡಾಡಿತ್ತು. ಡೆಲ್ಲಿ ವಿರುದ್ಧವಂತೂ ಪವರ್ ಪ್ಲೇಯಲ್ಲೇ ನೋಲಾಸ್ 125 ರನ್ ಪೇರಿಸಿ ಎಲ್ಲರನ್ನೂ ಬೆಚ್ಚಿಬೀಳಿಸಿತ್ತು. ಹೀಗಾಗಿ ಆರ್‌ಸಿಬಿ ವಿರುದ್ಧ ಪುನಃ ಮೊದಲು ಬ್ಯಾಟಿಂಗ್ ನಡೆಸುವ ಅವಕಾಶ ಪಡೆದರೆ ಹೈದರಾಬಾದ್ ಮತ್ತೂಂದು ಬೃಹತ್ ಮೊತ್ತ ಪೇರಿಸುವ ಎಲ್ಲ ಸಾಧ್ಯತೆ ಇದೆ. ತನ್ನ ಟಾರ್ಗೆಟ್ 300 ರನ್ ಎಂದು ಹೇಳಿಕೊಂಡಿರುವ ಹೈದರಾಬಾದ್, ಇಂಥದೊಂದು ಸಾಮರ್ಥ್ಯವುಳ್ಳ ತಂಡವಂತೂ ಹೌದು. ಹೆಡ್, ಅಭಿಷೇಕ್ ಶರ್ಮ, ಕ್ಲಾಸೆನ್-ಈ ತ್ರಿಮೂರ್ತಿಗಳನ್ನು ನಿಯಂತ್ರಿಸುವುದು ಸುಲಭವಲ್ಲ.
Related Articles
Advertisement
ಆರ್‌ಸಿಬಿ ಬ್ಯಾಟಿಂಗ್ ಬಲಒಂದು ವೇಳೆ ಆರ್‌ಸಿಬಿಗೆ ಮೊದಲು ಬ್ಯಾಟಿಂಗ್ ಅವಕಾಶ ಲಭಿಸಿದರೆ ಅದು ಬೃಹತ್ ಮೊತ್ತವನ್ನು ಪೇರಿಸಿ ಸವಾಲೊಡ್ಡಬೇಕಿದೆ. ಬೌಲಿಂಗ್ ದುರ್ಬಲ ವಾದರೂ, ಆರ್‌ಸಿಬಿಯ ಬ್ಯಾಟಿಂಗ್ ವಿಭಾಗಕ್ಕೆ ಇಂಥದೊಂದು ತಾಕತ್ತು ಇದ್ದೇ ಇದೆ. ಇಲ್ಲಿ ಇನ್ನೊಂದು ಸಂಗತಿಯನ್ನು ಗಮನಿಸಬೇಕಿದೆ, ಚೇಸಿಂಗ್ ನಲ್ಲಿ ಹೈದರಾಬಾದ್ ತುಸು ಹಿಂದೆ. ಹಾಗೆಯೇ ಬೌಲಿಂಗ್ ಕೂಡ ಬಲಿಷ್ಠವಲ್ಲ. ಮೊದಲ ಸುತ್ತಿನಲ್ಲಿ…
ಸರಿಯಾಗಿ 10 ದಿನಗಳ ಹಿಂದೆ ಇತ್ತಂಡಗಳು ಬೆಂಗಳೂರಿನಲ್ಲಿ ಮುಖಾಮುಖೀ ಆದಾಗ ರನ್ ಪ್ರವಾಹವೇ ಹರಿದಿತ್ತು. ಹೈದರಾಬಾದ್ 3ಕ್ಕೆ 287 ರನ್ ಪೇರಿಸಿ ಐಪಿಎಲ್‌ನಲ್ಲಿ ಸಾರ್ವಕಾಲಿಕ ಮೊತ್ತದ ದಾಖಲೆ ನಿರ್ಮಿಸಿತ್ತು. ಇದೇ ಸೀಸನ್‌ನಲ್ಲಿ ಮುಂಬೈ ವಿರುದ್ಧ ತಾನೇ ನಿರ್ಮಿಸಿದ 3ಕ್ಕೆ 277 ರನ್ನುಗಳ ದಾಖಲೆಯನ್ನು ಮುರಿದು ಮತ್ತೂಂದು ಎತ್ತರ ತಲುಪಿತ್ತು. ಆರ್‌ಸಿಬಿ ಕೂಡ ದಿಟ್ಟ ಜವಾಬು ನೀಡಿ 7ಕ್ಕೆ 262 ರನ್ ಪೇರಿಸಿತ್ತು. ಈ ಹೈ ಸ್ಕೋರಿಂಗ್ ಪಂದ್ಯದಲ್ಲಿ ಸೋಲಿನ ಅಂತರ ಬರೀ 25 ರನ್ ಎಂಬುದು ಉಲ್ಲೇಖನೀಯ.