Advertisement

ಜಾರಕಿಹೊಳಿ ಹೇಳಿಕೆ ವಿರುದ್ಧ ಸ್ವಾಭಿಮಾನಿ ಹಿಂದು ಅಭಿಯಾನ ಆರಂಭಿಸಿದ ಸಚಿವ ಸುನಿಲ್ ಕುಮಾರ್

10:59 AM Nov 08, 2022 | Team Udayavani |

ಬೆಂಗಳೂರು: ಹಿಂದು ಶಬ್ದದ ಅರ್ಥ ಅಶ್ಲೀಲವಾಗಿದೆ ಎಂದು ಸತೀಶ್ ಜಾರಕಿಹೊಳಿ ನೀಡಿರುವ ಹೇಳಿಕೆ ವಿರುದ್ಧ ಕೇಸರಿಪಡೆ ಕೆರಳಿ ನಿಂತಿದ್ದು, ” ಸ್ವಾಭಿಮಾನಿ ಹಿಂದು ” ಎಂಬ ಘೋಷವಾಕ್ಯದೊಂದಿಗೆ ಇಂಧನ ಹಾಗೂ ಕನ್ನಡ- ಸಂಸ್ಕ್ರತಿ ಸಚಿವ ವಿ ಸುನಿಲ್ ಕುಮಾರ್ ಕಾಂಗ್ರೆಸ್ ವಿರುದ್ಧ ಅಭಿಯಾನ ಪ್ರಾರಂಭಿಸಿದ್ದಾರೆ.

Advertisement

ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು ಕಾಂಗ್ರೆಸ್ ನಾಯಕರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ನನ್ನನ್ನು ಹಿಂದು ಎಂದು ಕರೆಯಬೇಡಿ ಎಂದು ಹೇಳಿದ್ದ ಜವಾಹರ್ ಲಾಲ್ ನೆಹರು ಅವರ ಹಾದಿಯಲ್ಲೇ ಕಾಂಗ್ರೆಸ್ ಇಷ್ಟು ವರ್ಷ ನಡೆದುಕೊಂಡಿದೆ. ಹಿಂದು, ಹಿಂದುತ್ವ ಹಾಗೂ ಹಿಂದು ರಾಷ್ಟ್ರೀಯ ವಿಚಾರಧಾರೆಯನ್ನು ಅವಕಾಶ ಸಿಕ್ಕಾಗಲೆಲ್ಲ ಹತ್ತಿಕ್ಕಲು ಕಾಂಗ್ರೆಸ್ ಯತ್ನಿಸುತ್ತಲೆ ಬಂದಿದೆ. ಸತೀಶ್ ಜಾರಕಿಹೊಳಿ ಈ ಪರಂಪರೆಯ ಭಾಗ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

– ಸತೀಶ್ ಜಾರಕಿಹೊಳಿಗೆ ಹಿಂದು ಶಬ್ದ ಅಶ್ಲೀಲ.
– ಸಿದ್ದರಾಮಯ್ಯ ಅವರಿಗೆ ಕೇಸರಿ-ತಿಲಕ ಕಂಡರೆ ಭಯ.
– ದೈವಾರಾಧನೆ ಹಾಗೂ ತೀರ್ಥ ಬಿ.ಟಿ.ಲಲಿತಾನಾಯಕರಿಗೆ ವಾಕರಿ ತರಿಸುತ್ತದೆ.
– ಡಿ.ಕೆ.ಶಿವಕುಮಾರ್ ಗೆ ಮುಸ್ಲಿಂರು ಸೋದರರು.
– ಎಂ.ಬಿ.ಪಾಟೀಲರಿಗೆ ಹಿಂದು ಧರ್ಮದ ಅಖಂಡತೆ ಒಡೆಯುವ ಯೋಚನೆ.

ಇವೆಲ್ಲವೂ ಕಾಂಗ್ರೆಸ್ ಒಳಮನಸಿನಲ್ಲಿರುವ ಹಿಂದು ವಿರೋಧಿ ಭಾವಗಳು ಎಂದು ಟೀಕಿಸಿದ್ದಾರೆ.
ಭಾರತ್ ಜೋಡೊ ಯಾತ್ರೆ ಹೆಸರಿನಲ್ಲಿ ರಾಹುಲ್ ಗಾಂಧಿ ನಡೆಸಿದ ಪಾದಯಾತ್ರೆಯ ಬಳಿಕ ಕಾಂಗ್ರೆಸ್ ನಾಯಕರ ಹಿಂದು ವಿರೋಧಿ ಹೇಳಿಕೆಗಳು ಮಿತಿಮೀರಿದೆ.ಕಾಂಗ್ರೆಸ್ ನಡೆಸುವ ಎಲ್ಲ ಯಾತ್ರೆ, ಅಭಿಯಾನದ ಹಿಂದಿರುವುದು ಹಿಂದು ದ್ವೇಷ. ಕಾಂಗ್ರೆಸ್ ಅಧಿನಾಯಕರ ಭಾವನೆಗಳಿಗೆ ಸತೀಶ್ ಜಾರಕಿಹೊಳಿ ಮಾತಿನ ರೂಪ ಕೊಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.

Advertisement

 

ಹಿಂದುತ್ವ ಎಂಬ ಜೀವನ ಪದ್ಧತಿಯನ್ನೇ ಟೀಕಿಸಿದ ಸತೀಶ್ ಜಾರಕಿಹೊಳಿ ಪರವಾಗಿ ಕಾಂಗ್ರೆಸ್ ಇಡಿ ರಾಷ್ಟ್ರದ ಕ್ಷಮೆ ಯಾಚಿಸಬೇಕು.
ಇದು ವೈಯಕ್ತಿಕ ಅಭಿಪ್ರಾಯ ಎಂದು ಕೈ ತೊಳೆದುಕೊಳ್ಳುವ ನಾಟಕ ಬೇಡ ಮಾನ್ಯ ಸುರ್ಜೇವಾಲಾ ಅವರೇ.ಭಾರತೀಯತೆಗೆ ಅಪಮಾನ ಮಾಡುವ ನಿಮ್ಮ ನಾಟಕಕ್ಕೆ ಕ್ಷಮೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಜಾಲತಾಣದಲ್ಲಿ ಆರಂಭಿಸಿರುವ ” ಸ್ವಾಭಿಮಾನಿ ಹಿಂದು ಅಭಿಯಾನದಲ್ಲಿ ನಾನು ಸ್ವಾಭಿಮಾನಿ ಹಿಂದು….
– ಹಿಂದುತ್ವದ ಅವಹೇಳನವಾದಾಗ ನಾನು ಪ್ರತಿರೋಧಿಸುತ್ತೇನೆ.
– ರಾಷ್ಟ್ರೀಯತೆಗೆ ಧಕ್ಕೆಯಾದಾಗ ನಾನು ಸೆಟೆದು ನಿಲ್ಲುತ್ತೇನೆ.
– ಭಾರತೀಯ ಪರಂಪರೆಯ ನಿಂದನೆಯಾದಾಗ ನಾನು ಹೋರಾಡುತ್ತೇನೆ.

ನಾನು ಸ್ವಾಭಿಮಾನಿ ಹಿಂದು…..
– ನನ್ನೊಡಲೊಳಗೆ ದೇಶಭಕ್ತಿಯ ಕೆಚ್ಚಿದೆ.
– ನನ್ನ ಹೃದಯದಲ್ಲಿ ಹಿಂದು ರಾಷ್ಟ್ರ ಪ್ರೀತಿ‌ ಇದೆ.
– ನನ್ನ ಮನಸಿನಲ್ಲಿ ಹಿಂದುತ್ವದ ಸಂಸ್ಕಾರವಿದೆ.
– ನನ್ನ ಉಸಿರಿನಲ್ಲಿ ರಾಷ್ಟ್ರ ವಿರೋಧಿಗಳ ವಿರುದ್ಧ ದ್ವೇಷವಿದೆ.
– ನನ್ನ ರಕ್ತದಲ್ಲಿ ಶಿವಾಜಿಯ ಸ್ವಾಭಿಮಾನವಿದೆ.
ಹಿಂದುತ್ವಕ್ಕೆ ಅಪಮಾನವಾದಾಗ ನಾ ಮೌನಿಯಾಗಲಾರೆ. ಎಂದು ಸುನಿಲ್ ಕುಮಾರ್ ಅಭಿಪ್ರಾಯ ಹಂಚಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next