Advertisement
ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ರಾಜಕೀಯ ಪಟ್ಟಾಭಿಷೇಕದ ವೇದಿಕೆಯಾಗಿದ್ದ ಮಂಡ್ಯ ಕ್ಷೇತ್ರದಿಂದ ಸುಮಲತಾ ಅಂಬರೀಶ್ ಸ್ವತಂತ್ರ ಅಭ್ಯರ್ಥಿಯಾಗಿ ಘೋಷಣೆಯಾಗುತ್ತಿದ್ದಂತೆ ಜಿಲ್ಲೆಯ ಚುನಾವಣಾ ರಾಜಕಾರಣದಲ್ಲಿ ಸಂಚಲನ ಉಂಟಾಗಿದೆ.
Related Articles
Advertisement
ಪ್ರಭಾವಿ ನಾಯಕರ ಬೆಂಬಲ: ಕಳೆದ ಲೋಕಸಭಾ ಉಪ ಚುನಾವಣೆಯಲ್ಲಿ ಎರಡೂವರೆ ಲಕ್ಷಕ್ಕೂ ಅಧಿಕ ಮತಗಳನ್ನು ಪಡೆದಿದ್ದ ಬಿಜೆಪಿ, ತನ್ನ ವೋಟ್ ಬ್ಯಾಂಕ್‌ನ್ನು ಇನ್ನಷ್ಟು ವೃದ್ಧಿಗೊಳಿಸುವ ಮತ್ತು ಮಂಡ್ಯದ ನೆಲದಲ್ಲಿ ಕಮಲ ಅರಳಿಸುವ ಮಹತ್ವಾಕಾಂಕ್ಷೆಯಿಂದ ಸುಮಲತಾರನ್ನು ಪಕ್ಷಕ್ಕೆ ಸೆಳೆಯುವ ಪ್ರಯತ್ನ ನಡೆಸಿತ್ತು. ಆದರೆ, ಕಾಂಗ್ರೆಸ್‌ನ ಪ್ರಭಾವಿ ನಾಯಕರ ನಿರ್ದೇಶನದ ಮೇರೆಗೆ ಬಿಜೆಪಿ ಬೆಂಬಲ ಪಡೆಯಲು ನಿರ್ಧರಿಸಿದ ಸುಮಲತಾ,
-ಪಕ್ಷೇತರವಾಗಿ ಕಣಕ್ಕಿಳಿಯುವುದರಿಂದ ಅಂಬರೀಶ್ ಅಭಿಮಾನಿಗಳು, ಕನ್ನಡ ಚಿತ್ರರಂಗದ ಸ್ಟಾರ್ ನಟರು, ರೈತಸಂಘ ಹಾಗೂ ಬಿಎಸ್ಪಿ ಮುಖಂಡರ ಬೆಂಬಲ ಸಿಗುವುದರ ಜೊತೆಗೆ ಕಾಂಗ್ರೆಸ್‌ನ ಜೆಡಿಎಸ್ ವಿರೋಧಿ ಸಮೂಹ ಹಾಗೂ ಜೆಡಿಎಸ್ ಒಳಗಿನ ವಂಶರಾಜಕಾರಣ ಪ್ರತಿಭಟಿಸುವ ಮತದಾರರೂ ತಮ್ಮನ್ನು ಬೆಂಬಲಿಸುವರೆಂಬ ಲೆಕ್ಕಾಚಾರ ಸುಮಲತಾ ಅವರ ಸ್ವತಂತ್ರ ಸ್ಪರ್ಧೆಯ ಹಿಂದೆ ಅಡಗಿದೆ.
ಈಗಾಗಲೇ ಬಿಜೆಪಿ ಸುಮಲತಾ ಅಂಬರೀಶ್ ಜೊತೆ ಹಲವು ಸುತ್ತಿನ ಮಾತುಕತೆ ನಡೆಸಿದೆ. ಜಿಲ್ಲಾ ಕಾಂಗ್ರೆಸ್‌ನ ಪ್ರಭಾವಿ ನಾಯಕರು ಸುಮಲತಾ ಚುನಾವಣಾ ಪ್ರಕ್ರಿಯೆಗೆ ಬೆಂಬಲವಾಗಿ ನಿಂತಿದ್ದಾರೆ. ಜನಸಾಮಾನ್ಯರ ನಾಯಕತ್ವದಲ್ಲೇ ಇಡೀ ಚುನಾವಣೆಯನ್ನು ನಡೆಸಲು ತೀರ್ಮಾನಿಸಿರುವ ಕಾಂಗ್ರೆಸ್‌ನ ಹಳೇ ಹುಲಿಗಳು ತಾವೆಲ್ಲೂ ಕಾಣಿಸಿಕೊಳ್ಳದಿದ್ದರೂ ಭೂಗತವಾಗಿದ್ದುಕೊಂಡೇ ಸುಮಲತಾ ಗೆಲುವಿಗೆ ಬೆಂಬಲಿಸುವ ನಿರ್ಧಾರ ಕೈಗೊಂಡಿದ್ದಾರೆ.
ಬಿಜೆಪಿ ನಡೆ ಏನು?: ಬಹುಕಾಲದಿಂದ ಮಂಡ್ಯ ರಾಜಕೀಯ ನೆಲದಲ್ಲಿ ಅಸ್ತಿತ್ವಕ್ಕಾಗಿ ಹೋರಾಟ ನಡೆಸುತ್ತಿರುವ ಬಿಜೆಪಿ ಈ ಚುನಾವಣೆಯಲ್ಲಿ ಪಕ್ಷದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸುವುದೋ ಅಥವಾ ಸುಮಲತಾ ಅವರಿಗೆ ಪರೋಕ್ಷ ಬೆಂಬಲ ನೀಡುವುದೋ ಎನ್ನುವುದು ಪ್ರಶ್ನೆಯಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಎರಡೂವರೆ ಲಕ್ಷಕ್ಕೂ ಹೆಚ್ಚು ಮತಗಳು ಬಂದಿದ್ದು, ಈ ಚುನಾವಣೆಯಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಅಷ್ಟೇ ಪ್ರಮಾಣದ ಮತಗಳು ಬರುವ ಸಾಧ್ಯತೆಗಳಿಲ್ಲ.
ಅಂದು ದೋಸ್ತಿ ಸರ್ಕಾರದ ವಿರುದ್ಧ ಪರಿವರ್ತನೆಯಾದ ಮತಗಳೇ ಬಿಜೆಪಿ ಮತಗಳಾಗಿ ಕಂಡುಬಂದಿತ್ತು. ಆದರೆ, ಈಗ ಆ ಪರಿಸ್ಥಿತಿ ಇಲ್ಲ. ಒಮ್ಮೆ ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಮತದಾನದ ಪ್ರಮಾಣ ಗಣನೀಯವಾಗಿ ಕಡಿಮೆಯಾದರೆ ಜಿಲ್ಲೆಯಲ್ಲಿ ತನ್ನ ಅಸ್ತಿತ್ವ ಇನ್ನಷ್ಟು ದುರ್ಬಲಗೊಳ್ಳುವುದೆಂಬ ಲೆಕ್ಕಾಚಾರದಲ್ಲಿದೆ.
ದೇವೇಗೌಡರ ಕುಟುಂಬ ರಾಜಕಾರಣದ ವಿರೋಧಿ ಅಲೆ ಮತ್ತು ಹೊರಗಿನ ಅಭ್ಯರ್ಥಿಯ ಹೇರಿಕೆಯಿಂದ ಸುಮಲತಾ ಪರವಾದ ಅಲೆ ಸೃಷ್ಟಿಯಾಗಿದ್ದು, ಅವರಿಗೇ ಬೆಂಬಲ ನೀಡಿ ತನ್ನ ಅಸ್ತಿತ್ವ ಉಳಿಸಿಕೊಳ್ಳುವುದು ಸೂಕ್ತ ಎಂಬ ಭಾವನೆ ಬಿಜೆಪಿ ಹೊಂದಿದೆ. ಈ ನಡುವೆ ಬಿಜೆಪಿಯಲ್ಲಿರುವ ಸಿಎಂ ಕುಮಾರಸ್ವಾಮಿಯವರ ಆಪ್ತ ನಾಯಕರು ಬಿಜೆಪಿಯಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಮತಗಳನ್ನು ವಿಭಜಿಸಿ ನಿಖಿಲ್‌ಗೆ ಅನುಕೂಲ ಮಾಡಿಕೊಡುವ ತಂತ್ರಗಾರಿಕೆಯನ್ನೂ ನಡೆಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮೂಲತಃ ಮಂಡ್ಯ ಜಿಲ್ಲೆಯವರೇ ಆಗಿದ್ದು, ಅಂಬರೀಶ್ ಜೊತೆ ಉತ್ತಮ ರಾಜಕೀಯ ಒಡನಾಟ ಹೊಂದಿರುವ ಕಾರಣ ಸುಮಲತಾ ಪರವಾದ ನಿರ್ಣಯ ಕೈಗೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ. ಈಗಾಗಲೇ ಬಿಜೆಪಿಯ ಹಲವಾರು ಕಾರ್ಯಕರ್ತರನ್ನು ಸುಮಲತಾ ಭೇಟಿ ಮಾಡಿದ ಸಂದರ್ಭದಲ್ಲಿ ಬಹುತೇಕರು ತಮ್ಮ ಬೆಂಬಲ ವ್ಯಕ್ತಪಡಿಸಿರುವುದರಿಂದ ಬಿಜೆಪಿ ಸುಮಲತಾ ಅವರನ್ನು ಬೆಂಬಲಿಸಿದರೆ ಬಿಜೆಪಿಗೆ ಹೆಚ್ಚಿನ ಲಾಭವಾಗಲಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ.
* ಮಂಡ್ಯ ಮಂಜುನಾಥ್