ಸುಳ್ಯ: ಪ್ರಸ್ತುತ ದೂರವಾಣಿ ಕರೆ ಮಾಡಿದಾಗ ಪ್ರಥಮವಾಗಿ ಕೇಳುವುದು ಕೋವಿಡ್-19 ಕುರಿತ ಜಾಗೃತಿ ಸಂದೇಶ. ದೇಶದಲ್ಲಿ ಮೊಟ್ಟ ಮೊದಲ ಕೋವಿಡ್-19 ಪ್ರಕರಣ ಪತ್ತೆಯಾದ ಕೇರಳದಲ್ಲಿ ಮೊದಲಿಗೆ ದೂರವಾಣಿಯಲ್ಲಿ ಮಲಯಾಳದಲ್ಲಿ ಧ್ವನಿ ಸಂದೇಶ ಬಿತ್ತರವಾಯಿತು. ಆ ಧ್ವನಿಯ ಮೂಲ ಸುಳ್ಯದಲ್ಲಿದೆ.
ಮರ್ಕಂಜ ಗ್ರಾಮದಲ್ಲಿ ನೆಲೆಸಿರುವ ಟಿ.ವಿ. ಜೋಸೆಫ್ ಮತ್ತು ಆಲಿಸ್ ಜೋಸೆಫ್ ದಂಪತಿಯ ಪುತ್ರಿ ಟಿಂಟು ಮೋಳ್ ಅವರ ಧ್ವನಿ ಇದು.
ಕೇರಳದ ಕೊಟ್ಟಾಯಂನ ಜೋಸೆಫ್ 24 ವರ್ಷಗಳ ಹಿಂದೆ ರಬ್ಬರ್ ಟ್ಯಾಪಿಂಗ್ ಕೆಲಸಕ್ಕಾಗಿ ಗುತ್ತಿಗಾರಿಗೆ ಬಂದವರು ಇಲ್ಲೇ ನೆಲೆಸಿದ್ದಾರೆ. 12 ವರ್ಷಗಳಿಂದ ರಬ್ಬರ್ ಎಸ್ಟೇಟ್ ಒಂದರ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಈ ದಂಪತಿಗೆ ಇಬ್ಬರು ಮಕ್ಕಳು.
ಕರ್ನಾಟಕದಲ್ಲೇ ಸ್ನಾತಕೋತ್ತರ ಪದವಿ ವರೆಗೆ ವಿದ್ಯಾಭ್ಯಾಸ ಮಾಡಿರುವ ಟಿಂಟು ಮೋಳ್ ಪ್ರಸ್ತುತ ಪೂರ್ಣ ಪ್ರಮಾಣದಲ್ಲಿ ವಾಯ್ಸ ಆರ್ಟಿಸ್ಟ್ ಆಗಿದ್ದಾರೆ. ದಿಲ್ಲಿ ಜೆಎನ್‌ಯು ವಿ.ವಿ.ಯ ಕನ್ನಡ ಪೀಠದ ಮುಖ್ಯಸ್ಥ ಡಾ| ಪುರುಷೋತ್ತಮ ಬಿಳಿಮಲೆಯ ಮಾರ್ಗದರ್ಶನ ಹಾಗೂ ನೆರವು ನೀಡಿದ್ದರು.
ಡಿಡಿ ಮಲಯಾಳದಲ್ಲಿ ಪ್ರಸಾರವಾದ ಹಲವು ಕಾರ್ಯಕ್ರಮಗಳಿಗೆ ಟಿಂಟು ಮೋಳ್ ಧ್ವನಿ ನೀಡಿದ್ದಾರೆ. ಲೈವ್ ನಿರೂಪಕರಾಗಿಯೂ ಕಾಣಿಸಿಕೊಂಡಿದ್ದಾರೆ. ಕೇಂದ್ರ / ರಾಜ್ಯ ಸರಕಾರಗಳ ವಿವಿಧ ಜನಸ್ನೇಹಿ ಯೋಜನೆಗಳ ಪ್ರಚಾರಕ್ಕೆ, ಖಾಸಗಿ ಸಂಸ್ಥೆಗಳ ಉತ್ಪನ್ನಗಳ ಜಾಹೀರಾತುಗಳಲ್ಲಿ ಟಿಂಟು ಧ್ವನಿ ಕೇಳಿಬರುತ್ತದೆ.