ತಿರುವನಂತಪುರಂ: ಮಲಯಾಳಂ ಚಿತ್ರರಂಗ ಮತ್ತು ಧಾರಾವಾಹಿ ರಂಗದ ಜನಪ್ರಿಯ ನಟ ದಿಲೀಪ್ ಶಂಕರ್ ಅವರು ಹೋಟೆಲ್ ರೂಂ ನಲ್ಲಿ ರವಿವಾರ(ಡಿ29) ಶವವಾಗಿ ಪತ್ತೆಯಾಗಿದ್ದಾರೆ.
50 ವರ್ಷದ ನಟ ಡಿ.19 ರಂದು ಧಾರಾವಾಹಿ ಶೂಟಿಂಗ್ ಯೋಜನೆಗಾಗಿ ನಗರದ ಹೃದಯಭಾಗದಲ್ಲಿರುವ ಹೋಟೆಲ್‌ಗೆ ಚೆಕ್ ಇನ್ ಆಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಧಾರಾವಾಹಿಗಳಲ್ಲಿನ ವೈವಿಧ್ಯಮಯ ಪಾತ್ರಗಳಿಗೆ ಹೆಸರುವಾಸಿಯಾಗಿದ್ದ ದಿಲೀಪ್ ಶಂಕರ್ ಅವರನ್ನು ಎರಡು ದಿನಗಳ ಹಿಂದೆ ಹೋಟೆಲ್ ಸಿಬಂದಿ ಕೋಣೆಯ ಹೊರಗೆ ಕೊನೆಯ ಬಾರಿಗೆ ನೋಡಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹೋಟೆಲ್ ಸಿಬಂದಿ ಮತ್ತು ಧಾರಾವಾಹಿ ಸಿಬಂದಿ ಪದೇ ಪದೇ ಕರೆ ಮಾಡಿದರೂ ಉತ್ತರಿಸಿರಲಿಲ್ಲ,ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಕೊಠಡಿ ಒಳಗಿನಿಂದ ಲಾಕ್ ಆಗಿತ್ತು. ಬಾಗಿಲು ಒಡೆದು ನೋಡಿದಾಗ, ಶವವಾಗಿ ಬಿದ್ದಿರುವುದು ಕಂಡುಬಂದಿದೆ. ಎರಡು ದಿನಗಳ ಹಿಂದೆ ಸಾವು ಸಂಭವಿಸಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಮರಣೋತ್ತರ ಪರೀಕ್ಷೆಯ ವರದಿಯ ಪ್ರಕಾರ, ಸಾವಿಗೆ ಕಾರಣ ಆಂತರಿಕ ರಕ್ತಸ್ರಾವವಾಗಿದ್ದು, ಬಹುಶಃ ಬಿದ್ದ ನಂತರ ತಲೆಗೆ ಗಾಯವಾಗಿರಬಹುದು. ನಟ ಯಕೃತ್ತು ಸಂಬಂಧಿತ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಧಾರಾವಾಹಿಗಳಲ್ಲಿನ ಅವರ ಕೆಲಸದ ಜತೆಗೆ, ಶಂಕರ್ ಹಲವಾರು ಚಲನಚಿತ್ರಗಳಲ್ಲಿ ಗಮನಾರ್ಹ ಪಾತ್ರಗಳನ್ನು ನಿರ್ವಹಿಸಿದ್ದರು.